ಜಿಲ್ಲಾ ಕೇಂದ್ರವಾದ ರಾಯಚೂರು ಸೇರಿದಂತೆ ಎಲ್ಲೆಡೆ ಎಳ್ಳು ಅಮಾವಾಸ್ಯೆಯನ್ನು ಶುಕ್ರವಾರ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ರಾಯಚೂರು: ಜಿಲ್ಲಾ ಕೇಂದ್ರವಾದ ರಾಯಚೂರು ಸೇರಿದಂತೆ ಎಲ್ಲೆಡೆ ಎಳ್ಳು ಅಮಾವಾಸ್ಯೆಯನ್ನು ಶುಕ್ರವಾರ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ರಾಯಚೂರು, ಸಿಂಧನೂರು, ಲಿಂಗಸುಗೂರು, ದೇವದುರ್ಗ, ಅರಕೇರಾ, ಮಾನ್ವಿ, ಸಿರವಾರ ತಾಲೂಕುಗಳ ನಗರ, ಪಟ್ಟಣ, ಗ್ರಾಮೀಣ ಭಾಗದಲ್ಲಿ ರೈತರು, ಮಹಿಳೆಯರು, ಸಾರ್ವಜನಿಕರು ಭೂಮಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಚರಗ ಚೆಲ್ಲಿ ಕುಟುಂಬಸ್ಥರೊಂದಿಗೆ ಕುಳಿತು ಹಬ್ಬದೂಟವನ್ನು ಸವಿದರು.ಸಿಂಧನೂರು: ತಾಲೂಕಿನ ರೈತ ಕುಟುಂಬಗಳು ಹೊಲದಲ್ಲಿ ಭೂತಾಯಿಗೆ ಬೆಳಿಗ್ಗೆಯೇ ಪೂಜೆ ಸಲ್ಲಿಸಿ, ಸಿಹಿ ಊಟ ಸವಿದು ಎಳ್ಳು ಅಮವಾಸ್ಯೆಯನ್ನು ಸಂಭ್ರಮಿಸಿದರು.
ಸಜ್ಜೆ ರೊಟ್ಟಿ, ಎಳ್ಳು ಹೋಳಿಗೆ, ಸೇಂಗಾ ಹೋಬಳಿ, ತರಹೇವಾರಿ ಖಾದ್ಯಗಳ ಬುತ್ತಿ ಕಟ್ಟಿಕೊಂಡು ಗುಂಪು ಗುಂಪಾಗಿ ರೈತ ಕುಟುಂಬಗಳು ಹೊಲದತ್ತ ಧಾವಿಸುತ್ತಿರುವುದು ಶುಕ್ರವಾರ ಕಂಡು ಬಂತು.ಎಳ್ಳು ಅಮವಾಸ್ಯೆಯ ದಿನದಂದು ರೈತ ಕುಟುಂಬಗಳು ಎಳ್ಳು ಹೋಳಿಗೆ, ಎಣ್ಣೆ ಬದನೆಕಾಯಿ, ಕೆಂಪು ಚಟ್ನಿ, ಪಲ್ಲೆ, ಶೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಜೋಳದ ಖಡಕ್ ರೊಟ್ಟಿ, ಕಾಳು ಪಲ್ಯ ಹಲವು ಬಗೆಯ ಚಟ್ನಿ, ಮೊಸರು ಹೀಗೆ ಬಗೆ ಬಗೆಯ ಭಕ್ಷ್ಯಗಳನ್ನು ತಯಾರಿಸಿ ಕುಟುಂಬ ಸದಸ್ಯರು, ಎತ್ತಿ ಬಂಡಿ, ಟಂಟಂ ಇಲ್ಲವೇ ಟ್ರಾಕ್ಟರ್ಗಳಲ್ಲಿ ಮನೆಯ ಸದಸ್ಯರು, ನೆರೆ-ಹೊರೆಯವರೊಂದಿಗೆ ತಮ್ಮ ತಮ್ಮ ಜಮೀನುಗಳಿಗೆ ಹೋಗಿ ಪೂಜೆ ಸಲ್ಲಿಸಿ ಬೆಳೆಯ ನಡುವೆ ಚರಗ ಚೆಲ್ಲಿ ಊಟ ಮಾಡುವುದು ವಾಡಿಕೆಯಾಗಿದೆ. ಎಂದಿನಂತೆ ತಾಲೂಕಿನ ಒಳಬಳ್ಳಾರಿ, ಗಿಣಿವಾರ, ಬಾದರ್ಲಿ, ಗೋಮರ್ಸಿ, ಬೆಳಗುರ್ಕಿ, ಹಿರೇಬೇರಿಗಿ, ಚಿಕ್ಕಭೇರಿಗಿ ಸೇರಿದಂತೆ ಒಣ ಬೇಸಾಯ ಅವಲಂಬಿತ ಗ್ರಾಮೀಣ ಪ್ರದೇಶದಲ್ಲಿ ಚರಗ ಚೆಲ್ಲುವ ಸಂಭ್ರಮ ಮನೆ ಮಾಡಿತ್ತು.
ಮುದಗಲ್ : ಪಟ್ಟಣದ ಹೊರವಲಯದ ಹೊಲದಲ್ಲಿ ಎಳ್ಳ ಅಮಾವಾಸಿ ಭೂತಾಯಿಗೆ ಪೂಜೆ ಸಲ್ಲಿಸಿ ಊಟ ಸವಿದರು. ಎಳ್ಳ ಅಮಾವಾಸೆ ನಿಮಿತ್ತ ರೈತರು ತಮ್ಮ ಮನೆಯಲ್ಲಿ ಹಬ್ಬದ ಸಡಗರ ಸಂಭ್ರಮದಿಂದ ಬೆಳಿಗ್ಗೆ ಯಿಂದ ರುಚಿ ರುಚಿಯಾದ ಅಡುಗೆ ಮಾಡಿ ಕೊಂಡು ಹೋಗಿ ತಮ್ಮ ರೈತಕುಟುಂಬದವರು ಹೊಲಕ್ಕೆ ಹೋಗಿ ಹೊಲದಲ್ಲಿ ಚರಗಾ ಚೆಲ್ಲುವ ಮೂಲಕ ಭೂತಾಯಿಗೆ ವಿಷೇಶ ಪೂಜೆ ಸಲ್ಲಿಸಿ ಮನೆಯಿಂದ ತೆಗೆದು ಕೊಂಡು ಹೋದ ಎಳ್ಳ ಹೊಳಿಗೆ, ಶೇಂಗಾ ಹೊಳಿಗಿ ಸಜ್ಜಿ ರೊಟ್ಟಿ ರುಚಿಯಾದ ಬದನೆ ಕಾಯಿ ಪಲ್ಯ ಕಾಳುಗಳು ಪುಡಿ ಚಟ್ನಿ ಹಸಿರು ತರಕಾರಿ ಪಲ್ಯ ಹೊಲಕ್ಕೆ ಹೋಗಿ ಭೂತಾಯಿಗೆ ಪೂಜೆ ಸಲ್ಲಿಸಿ ನೈವೇದ್ಯ ಮಾಡಿ ತಮ್ಮ ಕುಟುಂಬದವರಹಾಗೂ ಗೆಳೆಯರು ಸೇರಿದಂತೆ ಊಟವನ್ನು ಸವಿದರು.ಸಂಭ್ರಮದ ಆಚರಣೆ:
ಕವಿತಾಳ : ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ರೈತ ಕುಟುಂಬಗಳು ಶುಕ್ರವಾರ ಎಳ್ಳು ಅಮಾವಾಸ್ಯೆಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು.ಎಳ್ಳ ಅಮಾವಾಸ್ಯೆ ನಿಮಿತ್ತ ಜಮೀನುಗಳಲ್ಲಿ ಚರಗ ಚೆಲ್ಲಿ ಭೂಮಿ ತಾಯಿಗೆ ನಮನ ಸಲ್ಲಿಸಿದರು.ಹೊಲ ಗದ್ದೆಗಳಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ, ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಬಳಿಕ ಜಮೀನು ತುಂಬೆಲ್ಲಾ ಸುತ್ತಾಡಿ ಚೆರಗು ಚೆಲ್ಲಿದರು. ಬನ್ನಿ ಮರಕ್ಕೆ ಸೀರೆ ಉಡಿಸಿ, ಉಡಿ ತುಂಬಿ, ಕಂಕಣಕಟ್ಟಿ ಪಾಂಡವರ ಸ್ವರೂಪವಾಗಿ ಐದು ಕಲ್ಲುಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಪೂಜೆಗೆ ಅರ್ಪಿಸಿದ ನೈವೇದ್ಯವನ್ನು ಚರಗ ಚೆಲ್ಲಿ ಉತ್ತಮ ಮಳೆ ಬೆಳೆ ನೀಡಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದರು.
ನಂತರ ಕುಟುಂಬದ ಸದಸ್ಯರು ಎಳ್ಳು ಹೋಳಿಗಿ, ಹೋಳಿಗೆ, ಶೇಂಗಾ ಹೋಳಿಗೆ, ಸಜ್ಜಿ ಮುಟ್ಟಿಗಿ, ವಿವಿಧ ಬಗೆಯ ಭೋಜನವನ್ನು ಸವಿದರು. ಮಕ್ಕಳು, ಮಹಿಳೆಯರು ಸಂಭ್ರಮಸಿದರು.ವಿಶೇಷ ಪೂಜೆ: ಸಿರವಾರ ಭಾಗದ ರೈತರ ಸಂಭ್ರಮದ ಹಬ್ಬವಾದ ಎಳ್ಳ ಅಮವಾಸ್ಯೆ ಅಂಗವಾಗಿ ರೈತರು ಮತ್ತು ರೈತ ಕುಟುಂಬದವರು ಜಮೀನುಗಳಿಲ್ಲಿ ಚರಗ ಚಲ್ಲಿ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬೆಳ್ಳಂಬೆಳಗ್ಗೆ ರೈತರು ತಮ್ಮ ಮನೆಗಳಲ್ಲಿ ಹೋಳಿಗೆ, ಅನ್ನ, ಸಾರು ಸೇರಿದಂತೆ ವಿಶೇಷ ಅಡುಗೆ ತಯಾರಿಸಿಕೊಂಡು ಕುಟುಂಬದ ಸಮೇತರಾಗಿ ಜಮೀನುಗಳಿಗೆ ತೆರಳಿ ಐದು ಕಲ್ಲುಗಳನ್ನು ಇಟ್ಟು ಪಂಚ ಪಾಂಡವರನ್ನು ನೆನೆದು ಪೂಜಿಸಿ, ನೈವೇದ್ಯ ಸಮರ್ಪಿಸಿ, ಹೊಲದಲ್ಲೆಲ್ಲಾ ನೈವೇದ್ಯವನ್ನು ಚರಗ ಚೆಲ್ಲುವ ಮೂಲಕ ಪೂಜೆ ಸಲ್ಲಿಸಲಾಯಿತು. ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗಲಿ, ಮುಂದಿನ ಬೆಳೆ ಸಮೃದ್ದಿಯಾಗಿ ಬೆಳೆಯಲಿ, ಭೂತಾಯಿ ಸಂಪನ್ನವಾಗಿರಲಿ ಎಂದು ಪ್ರಾರ್ಥಿಸಲಾಯಿತು.ನಂತರ ಮನೆಯಿಂದ ತಂದತಹ ಅಡುಗೆಯಲ್ಲಿ ನೈವೇದ್ಯ ಸಲ್ಲಿಸಿ ಉಳಿದದ್ದು ಊಟ ಮಾಡಲಾಯಿತು.ಸೈದಾಪುರದಲ್ಲಿ ದುರ್ಗಾದೇವಿ ಉಚ್ಚಾಯಕವಿತಾಳ :ಸಮೀಪದ ಸೈದಾಪುರು ಗ್ರಾಮದಲ್ಲಿ ಎಳ್ಳ ಅಮಾವಾಸ್ಯೆ ಪಯುಕ್ತ ಗ್ರಾಮ ದೇವತೆ ದುರ್ಗಾದೇವಿ ಉಚ್ಚಾಯ ಮಹೋತ್ಸವ ಅದ್ದೂರಿಯಾಗಿ ಜರಗಿತು.
ಬೆಳಗ್ಗೆ ದೇವಸ್ಥಾನದಲ್ಲಿ ದುರ್ಗಾದೇವಿಗೆ ಕುಂಕುಮ ಅರ್ಚನೆ, ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕವಾಗಿ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಕೆಂಪಣ್ಣ ಪೂಜಾರಿ ಅವರು ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಆಂಜನೇಯ ದೇವಸ್ಥಾನದಿಂದ ಪ್ರಮುಖ ರಸ್ತೆಗಳ ಮೂಲಕ ದುರ್ಗಾ ದೇವಿ ದೇವಸ್ಥಾನದವರಿಗೆ ಡೊಳ್ಳು ವಾದ್ಯಗಳೊಂದಿಗೆ ಕಳಸ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಮೌನೇಶ ಪೂಜಾರಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಸಪ್ಪ, ರಾಮಣ್ಣ, ಗುರುಬಸವ ನಾಯಕ, ಆಂಜನೇಯ, ಬರಮಯ್ಯ ಪೂಜಾರಿ, ಬಸವರಾಜ ಸಾಹುಕಾರ, ಸಾಬಪ್ಪಗೌಡ ಮಾಲಿ ಪಾಟೀಲ್, ಸಂಜೀವಪ್ಪ ನಾಯಕ, ಸಾಬಪ್ಪ ಬಾಗಲವಾಡ ಮತ್ತು ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದ್ದರು.