ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಯುಐಡಿಎಫ್ (Urban Infrastructure Development Fund) ಅನುದಾನದ ಅಡಿಯಲ್ಲಿ ಕೈಗೆತ್ತಿಗೊಂಡಿರುವ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡುವಂತೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದರು
ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಯುಐಡಿಎಫ್ (Urban Infrastructure Development Fund) ಅನುದಾನದ ಅಡಿಯಲ್ಲಿ ಕೈಗೆತ್ತಿಗೊಂಡಿರುವ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡುವಂತೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಹಲವು ವಾರ್ಡುಗಳಲ್ಲಿ ಯುಐಡಿಎಫ್ ಅನುದಾನದಡಿ ನಡೆಯುತ್ತಿರುವ ಕಾಮಗಾರಿ ವೀಕ್ಷಣೆ ವೇಳೆ ಕೆಲವೆಡೆ ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದು, ಚರಂಡಿಗೆ ಸ್ಲಾಬ್ ಹಾಕದಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರಸಭಾಧ್ಯಕ್ಷ ಶೇಷಾದ್ರಿ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ಮುಲಾಜಿಲ್ಲದೆ ನೋಟಿಸ್ ನೀಡಿ ಕಠಿಣ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.ಯುಐಡಿಎಫ್ ನ 82 ಕೋಟಿ ರು.ಗಳ ವೆಚ್ಚದಲ್ಲಿ ಕೈಗೊಂಡಿರುವ ಮೂರು ಹಂತದ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅಧ್ಯಕ್ಷರು, ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಅಗತ್ಯ ಅನುದಾನ ಲಭ್ಯವಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
18 ಕಿ.ಮೀ ಚರಂಡಿ ನಿರ್ಮಾಣ:ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಐಡಿಎಫ್ ಯೋಜನೆಯಡಿ ಮೂರು ಪ್ಯಾಕೇಜ್‌ನಲ್ಲಿ ಒಟ್ಟು 54 ಕಿಲೋ ಮೀಟರ್ ರಸ್ತೆ, ಚರಂಡಿ ಹಾಗೂ ಸೀರಳ್ಳ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದರೆ, 3ನೇ ಪ್ಯಾಕೇಜ್‌ನಲ್ಲಿ 15.40 ಕೋಟಿ ವೆಚ್ಚದಲ್ಲಿ ಸೀರಳ್ಳಕ್ಕೆ 1450 ಮೀಟರ್‌ನಷ್ಟು ತಡೆಗೋಡೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ನಗರ ವ್ಯಾಪ್ತಿಯಲ್ಲಿ ಪ್ಯಾಕೇಜ್ 1 ರಲ್ಲಿ 47.05 ಕೋಟಿ ವೆಚ್ಚದಲ್ಲಿ 43.72 ಕಿಲೋ ಮೀಟರ್ ಪೈಕಿ ಸುಮಾರು 25 ಕಿ.ಮೀ ರಸ್ತೆ ಕಾಮಗಾರಿ ಮುಗಿದಿದೆ. ಪ್ಯಾಕೇಜ್ -2ರಲ್ಲಿ 19.52 ಕೋಟಿ ವೆಚ್ಚದಲ್ಲಿ 10.7 ಕಿ.ಮೀ ಪೈಕಿ 3 ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. 1 ರಿಂದ 31 ವಾರ್ಡುಗಳಲ್ಲಿ ಸುಮಾರು 18 ಕಿ.ಮೀ ಉದ್ದ ಚರಂಡಿ ನಿರ್ಮಾಣ ಕಾಮಗಾರಿ ನಡೆದಿದೆ ಎಂದು ಹೇಳಿದರು.ಈಗ ಕಾಮಗಾರಿಯಲ್ಲಿ ಶೇಕಡ 40ರಷ್ಟು ಪ್ರಗತಿ ಮಾತ್ರ ಸಾಧಿಸಿದ್ದೇವೆ. ಕೆಲ ವಾರ್ಡುಗಳಲ್ಲಿ ಒಳಚರಂಡಿ ಕಾಮಗಾರಿ ಆಗದಿರುವುದು, ಕಿರಿದಾದ ರಸ್ತೆಗಳು, ಜೆಸಿಬಿಯಲ್ಲಿ ಕೆಲಸ ಮಾಡುವಾಗ ಯುಜಿಡಿ ಮತ್ತು ನೀರಿನ ಪೈಪ್ ಗಳು ಒಡೆದು ಹೋಗುತ್ತಿವೆ. ಅವುಗಳನ್ನು ರಿಪೇರಿ ಮಾಡಿ ಕಾಮಗಾರಿ ಮಾಡಲು ವಿಳಂಬವಾಗುತ್ತಿದೆ ಎಂದು ತಿಳಿಸಿದರು.
ರಸ್ತೆ ಕಾಮಗಾರಿ ಕೈಗೆತ್ತಿಗೊಂಡಾಗ ಯುಜಿಡಿ-ನೀರು ಪೈಪ್ ಲೈನ್ ಗೆ ಹಾನಿಯಾಗದಂತೆ ಮುನ್ನಚ್ಚರಿಕೆ ವಹಿಸಬೇಕಿದೆ. ಹೀಗಾಗಿ ಆ ವಿಭಾಗದ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕಿದೆ. ಒಂದು ಕಾಮಗಾರಿ ಪೂರ್ಣವಾದ ಮೇಲೆ ಮತ್ತೊಂದು ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚನೆ ನೀಡಿದ್ದೇವೆ ಎಂದು ಹೇಳಿದರು.ಯುಜಿಡಿ ಸಂಪರ್ಕ ಇರುವ ಕಡೆಗಳಲ್ಲಿ ಮಾತ್ರ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಉಳಿದ ವಾರ್ಡುಗಳಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಡಾಂಬರೀಕರಣ ಮಾಡಲಾಗುವುದು. ಯುಜಿಡಿ ಕಾಮಗಾರಿಗೆ ಸುಮಾರು 200 ಕೋಟಿ ರುಪಾಯಿ ಅಗತ್ಯವಿದ್ದು, ಇದಕ್ಕಾಗಿ ಉಪಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಹಾಗೂ ಪೌರಾಡಳಿತ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಕೆ.ಶೇಷಾದ್ರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೊದಲು 2ನೇ ವಾರ್ಡ್ ಮಾರುತಿ ನಗರ ಬಡಾವಣೆಗೆ ಭೇಟಿ ನೀಡಿದ ಕೆ.ಶೇಷಾದ್ರಿರವರು, ರಸ್ತೆ - ಚರಂಡಿ ಕಾಮಗಾರಿ ವೀಕ್ಷಿಸಿದರು. ಅಲ್ಲಿಂದ 8 ಮತ್ತು 27 ನೇವಾರ್ಡ್ ವಿವೇಕಾನಂದ ನಗರ ಬಡಾವಣೆ, 30 ನೇವಾರ್ಡ್ ನ ಐಜೂರು ಹಾಗೂ 29 ವಾರ್ಡ್ ನ ಮುಸ್ಲಿಂ ಬ್ಲಾಕ್ ಬಡಾವಣೆಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.ಈ ವೇಳೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಪಾರ್ವತಮ್ಮ, ಆಯುಕ್ತ ಜಯಣ್ಣ, ಎಇಇ ವಿಶ್ವನಾಥ್, ಸಹಾಯಕ ಅಭಿಯಂತರರಾದ ನಿರ್ಮಲಾ, ಪವಿತ್ರ, ಗುತ್ತಿಗೆದಾರ ಆಂಜನಪ್ಪ, ರಘು ಮತ್ತಿತರರು ಹಾಜರಿದ್ದರು.
16ಕೆಆರ್ ಎಂಎನ್ 1.ಜೆಪಿಜಿರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಯುಐಡಿಎಫ್ ಅನುದಾನದಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ವೀಕ್ಷಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಪಾರ್ವತಮ್ಮ, ಆಯುಕ್ತ ಜಯಣ್ಣ ಇತರರಿದ್ದರು.