ಸಾರಾಂಶ
ಹಾನಗಲ್ಲ: ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ಪರಿಕಲ್ಪನೆಗೆ ಒಂದು ದೊಡ್ಡ ಮಾದರಿ ಹಾನಗಲ್ಲ ತಾಲೂಕಿನ ಶೇಷಗಿರಿ ಕಲಾ ತಂಡ. ಪ್ರತಿಭೆಗಳು ಹುಟ್ಟುವುದೇ ಹಳ್ಳಿಗಳಲ್ಲಿ. ಇಂದು ನಾಡಿನ ಅನೇಕ ಪ್ರತಿಭಾಶಾಲಿಗಳು ಬಂದದ್ದು, ಗ್ರಾಮೀಣ ಮೂಲದಿಂದಲೇ ಎಂದು ಧಾರವಾಡ ರಂಗಾಯಣದ ನೂತನ ಅಧ್ಯಕ್ಷ ಡಾ. ರಾಜು ತಾಳಿಕೋಟಿ ಹೇಳಿದರು.
ಹಾನಗಲ್ಲ ತಾಲೂಕಿನ ಶೇಷಗಿರಿಯಲ್ಲಿ ನವೀಕರಣಗೊಳ್ಳುತ್ತಿರುವ ಸಿ.ಎಂ. ಉದಾಸಿ ಕಲಾಕ್ಷೇತ್ರಕ್ಕೆ ಭೇಟಿ ನೀಡಿ, ಶೇಷಗಿರಿ ಕಲಾ ತಂಡದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಗೆ ಶೇಷಗಿರಿ ಕಲಾತಂಡ ಮಾದರಿಯಾದುದು. ಗ್ರಾಮೀಣ ಪ್ರತಿಭೆಗಳನ್ನು ಬೆಳಗಿಸಲು ಇದು ಸರಿಯಾದ ಸ್ಥಳ. ಪ್ರತಿಭೆಗಳು ಹುಟ್ಟುವುದೇ ಹಳ್ಳಿಗಳಲ್ಲಿ. ಇಲ್ಲಿ ಸಮಾಧಾನದ ಬದುಕಿದೆ. ಶೇಷಗಿರಿ ಕಲಾ ತಂಡ ಆಧುನಿಕತೆಗೆ ಒಡ್ಡಿಕೊಂಡು ಮುನ್ನಡೆಯುತ್ತದೆ. ಇಲ್ಲಿಗೆ ಬಂದು ಸಂತೋಷವಾಗಿದೆ. ಇಂತಹ ಹಳ್ಳಿಯಲ್ಲಿ ಇಂತದ್ದೊಂದು ರಂಗ ತರಬೇತಿ ಪ್ರದರ್ಶನ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ರಂಗಾಯಣ ಇಂತಹ ಪ್ರತಿಭೆಗಳನ್ನು ಹುಡುಕುತ್ತಿದೆ. ಇಲ್ಲಿ ರಂಗ ತರಬೇತಿ ವಿಚಾರ ಸಂಕಿರಣಗಳಿಗೆ ಅವಕಾಶ ಮಾಡಿಕೊಡುವ ಉದ್ದೇಶ ನನಗಿದೆ ಎಂದರು.ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಮಾತನಾಡಿ, ಕಳೆದ ೪ ದಶಕಗಳಿಂದ ಹೆಮ್ಮರವಾಗಿ ಬೆಳೆದಿರುವ ಶೇಷಗಿರಿ ಗಜಾನನ ಯುವಕ ಮಂಡಳದ ಕಲಾತಂಡ ನವೀಕರಣಗೊಂಡ ಕಲಾಮಂದಿರದಲ್ಲಿ ಇನ್ನಷ್ಟು ಅತ್ಯುತ್ತಮ ರಂಗ ಚಟುವಟಿಕೆ ಮಾಡಲಿ. ನಾಡಿಗೆ ಹೆಮ್ಮೆ ತಂದಿರುವ ಈ ಕಲಾ ತಂಡ ರಂಗ ವೈಭವದಲ್ಲಿ ದೇಶವ್ಯಾಪ್ತಿಯಲ್ಲಿ ಹೆಸರು ಮಾಡಲಿ ಎಂದರು. ಸಾಹಿತಿ ಸತೀಶ ಕುಲಕರ್ಣಿ, ಕಲಾವಿದರಾದ ಮಧುಕರ ಹರಿಜನ, ಬಾಲಚಂದ್ರ ಅಂಬಿಗೇರ, ಹಾವೇರಿಯ ಡಾ. ಅಂಬಿಕಾ ಹಂಚಾಟೆ, ಮಂಜುನಾಥ ಸಣ್ಣಿಂಗಮ್ಮನವರ, ಶೇಷಗಿರಿ ಕಲಾತಂಡದ ಪ್ರಭು ಗುರಪ್ಪನವರ, ಶಂಕರಣ್ಣ ಗುರಪ್ಪನವರ, ನಾಗರಾಜ ಧಾರೇಶ್ವರ, ಸಿದ್ಧಪ್ಪ ರೊಟ್ಟಿ, ಶಿವಮೂರ್ತಿ ಹುಣಸಿಹಳ್ಳಿ, ಸಿದ್ಧು ಕೊಂಡೋಜಿ, ಸಣ್ಣಪ್ಪ ಗೊರವರ, ಶಂಭು ಬಣಕಾರ, ಸಿದ್ಧಪ್ಪ ಅಂಬಿಗೇರ, ಮಹಾಂತೇಶ ರೊಟ್ಟಿ, ಅರುಣ ಕೊಂಡೋಜಿ ಹಾಗೂ ನಿಂಗಪ್ಪ ಹರಿಜನ ಮುಂತಾದವರು ತಾಳಿಕೋಟಿ ಅವರೊಂದಿಗೆ ರಂಗ ಮಂದಿರದ ನವೀಕರಣದ ಕೆಲಸ ವೀಕ್ಷಿಸಿದರು.