ಪಂಜೆಯವರ ಸ್ಮರಣೆಯಲ್ಲಿ ಶಾಲಾ ಕೊಠಡಿ ಮೀಸಲಿರಿಸಿ ಗ್ರಂಥಾಲಯ ರೂಪಿಸಿ: ಚಿದ್ವಿಲಾಸ್ ಸಲಹೆ

| Published : Feb 21 2025, 11:45 PM IST

ಪಂಜೆಯವರ ಸ್ಮರಣೆಯಲ್ಲಿ ಶಾಲಾ ಕೊಠಡಿ ಮೀಸಲಿರಿಸಿ ಗ್ರಂಥಾಲಯ ರೂಪಿಸಿ: ಚಿದ್ವಿಲಾಸ್ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಪಂಜೆ ಮಂಗೇಶರಾಯರ ಪ್ರಸಿದ್ಧ ಹಾಡುಗಳನ್ನು ಆಧರಿಸಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡದ ಹೆಸರಾಂತ ಸಾಹಿತಿಗಳಾಗಿದ್ದ, ಮಡಿಕೇರಿಯ ಜೂನಿಯರ್ ಕಾಲೇಜಿನಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಪಂಜೆ ಮಂಗೇಶರಾಯರ ನೆನಪನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಅವರು ಕರ್ತವ್ಯ ಸಲ್ಲಿಸಿದ್ದ ಶಾಲೆಯ ಕೊಠಡಿಯೊಂದನ್ನು ಸ್ಮಾರಕವಾಗಿಸಿ, ಶಾಲೆಯಲ್ಲಿ ಪಂಜೆಯವರ ಪುತ್ತಳಿ ಸ್ಥಾಪಿಸಬೇಕು ಎಂದು ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಸಲಹೆ ನೀಡಿದ್ದಾರೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಕೊಡಗು ಘಟಕದಿಂದ ಆಯೋಜಿತ ಪಂಜೆ ಮಂಗೇಶರಾಯರ 150 ನೇ ವರ್ಷಾಚರಣೆ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಚಿದ್ವಿಲಾಸ್, ಮಡಿಕೇರಿಯ ಅಂದಿನ ಸೆಂಟ್ರಲ್ ಹೈಸ್ಕೂಲಿನಲ್ಲಿ ಪಂಜೆ ಮಂಗೇಶರಾಯರು ಮುಖ್ಯೋಪಾಧ್ಯಾಯರಾಗಿದ್ದರು ಎಂಬುದೇ ಕೊಡಗಿಗೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಹೀಗಿರುವಾಗ ಪಂಜೆ ಮಂಗೇಶರಾಯರ ಸಾಹಿತ್ಯ ಲೋಕದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತಷ್ಟು ರೀತಿಯಲ್ಲಿ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಅವರು ಪಾಠ ಮಾಡುತ್ತಿದ್ದ ತರಗತಿಯನ್ನು ಪಂಜೆಯವರ ಹೆಸರಿನಲ್ಲಿ ಗುರುತಿಸಿ, ಉತ್ತಮ ಕೃತಿಗಳ ಗ್ರಂಥಾಲಯವನ್ನು ಸ್ಥಾಪಿಸಬೇಕು. ಆ ಮೂಲಕ ಸಾಹಿತ್ಯ ಪ್ರೇಮಿಗಳ ಮನದಲ್ಲಿ ಪಂಜೆಯವರ ನೆನಪನ್ನು ಚಿರಸ್ಥಾಯಿಯಾಗಿಸಬೇಕೆಂದರು.

ಅಂತೆಯೇ, ಜೂನಿಯರ್ ಕಾಲೇಜಿನ ಆವರಣದಲ್ಲಿ ಪಂಜೆ ಮಂಗೇಶರಾಯರ ಪುತ್ಥಳಿಯನ್ನು ಸ್ಫಾಪಿಸುವ ಮೂಲಕ ಅವರನ್ನು ಸದಾ ಸ್ಮರಿಸುವಂತಾಗಬೇಕೆಂದೂ ಚಿದ್ವಿಲಾಸ್ ಅಭಿಪ್ರಾಯಪಟ್ಟರು.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಡೊಳ್ಳು ಬಾರಿಸಿ ಉದ್ಘಾಟಿಸಿದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಕವಿಶಿಷ್ಯ ಎಂಬ ಹೆಸರಿನಿಂದ ಅನೇಕ ಸಾಹಿತ್ಯ ಲೇಖನ, ಕವಿತೆಗಳನ್ನು ಬರೆಯುವ ಮೂಲಕ ಕವಿಋಷಿಯಾಗಿದ್ದ ಪಂಜೆ ಮಂಗೇಶರಾಯರು ನಿಜವಾದ ಅರ್ಥದಲ್ಲಿ ಕವಿಗುರುವಿನಂತೆ ಇದ್ದರು. ಕೊಡಗಿನ ಕುರಿತಾದ ಎಲ್ಲಿ ಭೂರಮೆಯಂಥ ಪದ್ಯದ ಮೂಲಕ ಇಡೀ ಜಗತ್ತೇ ಕೊಡಗನ್ನು ಹಾಡಿನ ಮೂಲಕ ಗುರುತಿಸುವಂತೆ ಮಾಡಿದ್ದರು. ಕೇರಳ ಪ್ರವಾಸೋದ್ಯಮ ಇಲಾಖೆಯು ದೇವರ ನಾಡು ಎಂದು ಬಿಂಬಿಸಿಕೊಳ್ಳುತ್ತಿದೆಯಾದರೂ 1923 ರಲ್ಲಿಯೇ ಪಂಜೆಯವರು ಕೊಡಗನ್ನು ಭೂರಮೆ ದೇವನ ಸನ್ನಿಧಿ ಬಯಸಿ ಭಿಮ್ಮನೆ ಬಂದ ನಾಡೆಂದು ವಣಿ೯ಸಿದ್ದರು ಎಂದು ಹೇಳಿದರು.

ಮಡಿಕೇರಿಗೆ ಮುಖ್ಯೋಪಾಧ್ಯಾಯರಾಗಿ ಕತ೯ವ್ಯಕ್ಕೆ ಬಂದ ಮೊದಲ ಭಾರತೀಯ ಮುಖ್ಯೋಪಾಧ್ಯಾಯರಾಗಿದ್ದ ಪಂಜೆಯವರಿಗೆ ನಿರೀಕ್ಷಿತ ರೀತಿಯಲ್ಲಿ ಸ್ವಾಗತ ದೊರಕಲಿಲ್ಲ. ಯುರೋಪಿಯನ್ ಮುಖ್ಯೋಪಾಧ್ಯಾಯರನ್ನೇ ಬಯಸಿದ್ದ ಶಿಕ್ಷಕ ವೃಂದ ಪಂಜೆಯವರನ್ನು ಹತ್ತಿರಕ್ಕೆ ಸೇರಿಸಿರಲಿಲ್ಲ. ಹೀಗಿದ್ದರೂ ಬೇಸರಿಸಿಕೊಳ್ಳದೇ, ಕಾಲಕ್ರಮೇಣ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಕೊಡಗಿನ ಜನತೆ ಇಂದಿಗೂ ತಮ್ಮ ನಾಡಗೀತೆಯಂತೆ ಸ್ವೀಕರಿಸಿರುವ ಹುತ್ತರಿ ಹಾಡನ್ನು ಪಂಜೆಯವರು ಬರೆದರು ಎಂದೂ ಅನಿಲ್ ಸ್ಮರಿಸಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ ನ ಕೊಡಗು ಘಟಕದ ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಮಡಿಕೇರಿಯ ಜ್ಯೂನಿಯರ್ ಕಾಲೇಜು ರಸ್ತೆಗೆ ಮತ್ತೊಮ್ಮೆ ಕಸಾಪ ವತಿಯಿಂದ ಮಂಜೆ ಮಂಗೇಶರಾಯರ ಹೆಸರಿನ ನಾಮಫಲಕವನ್ನು ಲೋಕಾರ್ಪಣೆ ಮಾಡಲಾಗಿದ್ದು ಅಂತೆಯೇ ವಿವಿಧ ಶಾಲಾಕಾಲೇಜುಗಳಿಗೆ ಪಂಜೆ ಮಂಗೇಶರಾಯರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಲಾಗಿದೆ ಎಂದರು. ಈ ಮೊದಲು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಕಟಿಸಲಾಗಿದ್ದ ಪಂಜೆ ಮಂಗೇಶರಾಯರ ಕೃತಿಗಳನ್ನು ಮರುಮುದ್ರಣ ಮಾಡುವಂತೆಯೂ ರಮೇಶ್ ಕಸಾಪಕ್ಕೆ ಸಲಹೆ ನೀಡಿದರು.

ಕಸಾಪ ಜಿಲ್ಲಾ ಅಧ್ಯಕ್ಷ ಎಂ.ಪಿ. ಕೇಶವಕಾಮತ್, ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಸಹಕಾಯ೯ದಶಿ೯ ಜಲಜಾಶೇಖರ್, ಸಹಕಾಯ೯ದಶಿ೯ ಎ.ವಿ. ಮಂಜುನಾಥ್, ಸಂಘಟನಾ ಕಾಯ೯ದಶಿ೯ಗಳಾದ ಆರ್. ಪಿ. ಚಂದ್ರಶೇಖರ್, ಕೆ.ಎನ್. ದೇವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ದೊಡ್ಡೇಗೌಡ, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಡಿ.ಶಿವಶಂಕರ್, ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್ ಜಗದೀಶ್, ಸರ್ಕಾರಿ ಪ್ರಥಮ ದಜೆ೯ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ವರ ಪ್ರಸನ್ನ, ಪ. ಪೂ ಕಾಲೇಜು ಪ್ರಾಂಶುಪಾಲ ಪಿ.ಆರ್. ವಿಜಯ, ಮಡಿಕೇರಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪೆರಾಜೆ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ವಿ. ಶಶಿಕಲಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಕೆ. ಸುಶೀಲಾ ವೇದಿಕೆಯಲ್ಲಿದ್ದರು.

ಡಾ.ಕಾವೇರಿ ಪ್ರಕಾಶ್ ನಿರೂಪಿಸಿ, ಮೆ.ನಾ.ವೆಂಕಟನಾಯಕ ಸ್ವಾಗತಿಸಿದ ಕಾರ್ಯಕ್ರಮವನ್ನು ಈರಮಂಡ ಹರಿಣಿ, ಚೊಕ್ಕಾಡಿ ಪ್ರೇಮಾ ರಾಘವಯ್ಯ ಪಿ.ಎಫ್. ಸಬಾಸ್ಟಿನ್ ನಿರ್ವಹಿಸಿದರು.

ಪಂಜೆ ಮಂಗೇಶರಾಯರ ಪ್ರಸಿದ್ಧ ಹಾಡುಗಳನ್ನು ಆಧರಿಸಿ ವಿವಿಧ ಶಾಲಾ ವಿದ್ಯಾಥಿ೯ಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರಗೊಂಡವು.