ಕಂಟ್ರೋಲ್ ರೂಂ ಸ್ಥಾಪಿಸಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ

| Published : Mar 12 2024, 02:03 AM IST

ಸಾರಾಂಶ

ಕಡ್ಡಾಯವಾಗಿ ಪ್ರತಿ ಸೋಮವಾರ ಟಾಸ್ಕ್‌ ಫೋರ್ಸ್‌ ಸಮಿತಿ ಸಭೆ ನಡೆಸಬೇಕು. ತಕ್ಷಣ ಕಂಟ್ರೋಲ್ ರೂಂ ಆರಂಭಿಸಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾನಗಲ್ಲ: ಕಡ್ಡಾಯವಾಗಿ ಪ್ರತಿ ಸೋಮವಾರ ಟಾಸ್ಕ್‌ ಫೋರ್ಸ್‌ ಸಮಿತಿ ಸಭೆ ನಡೆಸಬೇಕು. ತಕ್ಷಣ ಕಂಟ್ರೋಲ್ ರೂಂ ಆರಂಭಿಸಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಸ್ಥಳೀಯ ಮಟ್ಟದ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಿ. ಮಾ. ೨೦ರ ಒಳಗಾಗಿ ನೀರು ಪೂರೈಸಲು ಟ್ಯಾಂಕರ್ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಪೂರೈಕೆ ಆರಂಭಿಸಿ. ಸಾರ್ವಜನಿಕರ ದೂರವಾಣಿ ಕರೆಗಳನ್ನು ಸ್ವೀಕರಿಸಿ, ಮುಂದಿನ ಎರಡು, ಎರಡೂವರೆ ತಿಂಗಳು ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದಿರಿ ಎಂದು ಸೂಚಿಸಿದರು.

ತಾಲೂಕಿನಲ್ಲಿ ಯಾವುದೇ ಗ್ರಾಮದಲ್ಲಿಯೂ ಸಹ ಕೊಳವೆ ಬಾವಿ ಕೊರೆಯಿಸಬೇಕಾದರೂ ಕಡ್ಡಾಯವಾಗಿ ಟಾಸ್ಕ್‌ಫೋರ್ಸ್‌ ಸಮಿತಿಯ ಗಮನಕ್ಕೆ ತರಬೇಕು. ಅನಗತ್ಯವಾಗಿ ಕೊಳವೆ ಬಾವಿ ಕೊರೆಯಿಸಿ ಹಣ ಪೋಲು ಮಾಡುವ ಬದಲಿಗೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ಪೂರೈಕೆಗೆ ಮುಂದಾಗಿ. ಕೊಳವೆ ಬಾವಿಗಳಿಂದ ನೀರು ಪೂರೈಸಲು ಪೈಪ್‌ಲೈನ್ ಅಳತೆ ಹೆಚ್ಚಿದ್ದರೆ ಅಂಥಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಿ. ಕುಡಿಯುವ ನೀರಿನ ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ಅಲಕ್ಷಿಸುವಂತಿಲ್ಲ ಎಂದು ಶ್ರೀನಿವಾಸ ಮಾನೆ ಹೇಳಿದರು.

ತಹಸೀಲ್ದಾರ್, ತಾಪಂ ಇಒ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ನಿತ್ಯವೂ ಕನಿಷ್ಠ ಅರ್ಧ ಗಂಟೆ ಒಂದೆಡೆ ಸೇರಿ ಚರ್ಚೆ ಕೈಗೊಳ್ಳಿ. ಸಮಸ್ಯೆಗಳಿರುವ ಗ್ರಾಮಗಳ ಮಾಹಿತಿ ಪಡೆದು ಪರಿಹಾರದ ಕ್ರಮಗಳನ್ನು ಪರಾಮರ್ಶಿಸಿ. ಚುನಾವಣೆ ನೀತಿ ಸಂಹಿತೆ ಬರುವುದರಿಂದ ಅಧಿಕಾರಿಗಳೇ ಹೆಚ್ಚಿನ ಕಾಳಜಿ, ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದ ಶಾಸಕ ಮಾನೆ ಅವಶ್ಯವಿದ್ದಲ್ಲಿ ಪೈಪ್‌ಲೈನ್ ಅಳವಡಿಸಲು ಈಗಾಗಲೇ ೨೫ ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು, ಇನ್ನೂ ೨೦ ಲಕ್ಷ ರು. ಶೀಘ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಎಸ್. ರೇಣುಕಮ್ಮ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ೧೦ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ನೀರು ಪೂರೈಸಲಾಗುತ್ತಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಪೂರೈಕೆ ಸವಾಲಿನಿಂದ ಕೂಡಿದೆ. ಆದರೂ ಕೂಡ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಕಾಳಜಿ ವಹಿಸಲಾಗಿದೆ ಎಂದು ತಿಳಿಸಿದರು.

ತಾಪಂ ಇಒ ದೇವರಾಜ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ಆರ್.ಸಿ. ನೆಗಳೂರ, ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ., ಪಶುಪಾಲನೆ ಮತ್ತು ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗಿರೀಶ ರೆಡ್ಡೇರ, ಉಪ ತಹಸೀಲ್ದಾರ್‌ಗಳಾದ ಎಂ.ಎಸ್. ಮುಗದುಂ, ಟಿ.ಕೆ. ಕಾಂಬ್ಳೆ, ಕಂದಾಯ ನಿರೀಕ್ಷಕರು ಇದ್ದರು.