ಸಾರಾಂಶ
ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ ಗುರುತಿಸಿರುವ ಕೈಗಾರಿಕಾ ವಲಯದ ನಕ್ಷೆಯಲ್ಲಿ ಯದರೂರು ಕಂದಾಯ ವೃತ್ತ ಎಂದು ನಮೂದಿಸಲಾಗಿದ್ದು ಇಲ್ಲಿ ಕಂದಾಯ ಗ್ರಾಮಗಳು ಒಳಪಟ್ಟಿದ್ದು, ಯದರೂರಿನ ಹಲವಾರು ಮನೆಗಳನ್ನು ಗುರುತಿಸಲಾಗಿದೆ. ಇದರಿಂದ ಬಹುತೇಕ ರೈತರು ನೆಲೆ ಕಳೆದುಕೊಳ್ಳಲಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ
ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಹಾಗಿದ್ದರೆ ಹಿಂದೆ ರೈಲ್ವೇ ಕೋಚ್ ಫ್ಯಾಕ್ಟರಿ ಮಾಡಲು ಗುರುತಿಸಿದ್ದ ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ಇಲ್ಲವಾದರೆ ನಮ್ಮ ಕಂದಾಯ ಜಮೀನುಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದು ಬೇಡ ಎಂದು ಯದರೂರು ಭಾಗದ ರೈತರು ಒತ್ತಾಯಿದರು. ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬೇಟಪ್ಪ ಹಾಗು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ಯಾಗತ್ತೂರು ಸುಧಾಕರ್ ನೇತೃತ್ವದಲ್ಲಿ ಯದರೂರು ಅರಕೇರಿ ಭಾಗದ ರೈತರು ಸೋಮವಾರ ಸುದ್ಧಿಗೋಷ್ಠಿಯಲ್ಲಿ ಒತ್ತಾಯಿಸಿದರು.ಕೃಷಿ, ಹೈನುಗಾರಿಕೆಗೆ ಪೆಟ್ಟು
ಎನ್.ಜಿ.ಬೇಟಪ್ಪ ಮಾತನಾಡಿ ಖಾಸಗಿ ಕೈಗಾರಿಕೆಗಳನ್ನು ಸ್ಥಾಪಿಸುವ ಗುಜರಾತ್ ಮಾರ್ವಾಡಿಗಳಿಗೆ ಫಲವತ್ತಾದ ಕೃಷಿ ಜಮೀನು ಬಿಟ್ಟುಕೊಟ್ಟರೆ ರೈತ ಸರ್ವನಾಶವಾಗುತ್ತಾನೆ. ನಾವು ಬೆಳೆದಿರುವಂತ ಮಾವು, ರೇಷ್ಮೆ,ಹೂವಿನ ಬೇಸಾಯ ಅನ್ಯಾಯವಾಗಿ ಹೋಗುತ್ತದೆ. ಹೈನುಗಾರಿಕೆ ಇಲ್ಲವಾಗಿ ಹಾಲು ಉತ್ಪಾದನೆ ಕುಸಿದು ರೈತರು ಆರ್ಥಿಕವಾಗಿ ದಿವಾಳಿಯಾಗುತ್ತಾರೆ ಎಂದರು.ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ ಗುರುತಿಸಿರುವ ಕೈಗಾರಿಕಾ ವಲಯದ ನಕ್ಷೆಯಲ್ಲಿ ಯದರೂರು ಕಂದಾಯ ವೃತ್ತ ಎಂದು ನಮೂದಿಸಲಾಗಿದ್ದು ಇಲ್ಲಿ ಕಂದಾಯ ಗ್ರಾಮಗಳು ಒಳಪಟ್ಟು ಈಗಿರುವ ಯದರೂರಿನ ಹಲವಾರು ಮನೆಗಳನ್ನು ಗುರುತಿಸಲಾಗಿದೆ ಇದರಿಂದ ಬಹುತೇಕ ರೈತರು ನೆಲೆ ಕಳೆದುಕೊಳ್ಳುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನೋಟಿಫಿಕೇಷನ್ ರದ್ಧತಿಗೆ ಅವಕಾಶಈ ಬಗ್ಗೆ ನಿನ್ನೆ ಶಾಸಕರು ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದ ರೈತರು ಜಮೀನು ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಶೇ 60 ಭಾಗದ ರೈತರು ಜಮೀನು ನೀಡಲು ಒಪ್ಪದಿದ್ದರೆ ಭೂ ಸ್ವಾಧೀನ ಪ್ರಕ್ರಿಯೆಗೆ ನೀಡಿರುವಂತ ನೋಟಿಪಿಕೇಷನ್ ರದ್ದಾಗಲು ಅವಕಾಶ ಇರುತ್ತದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಯದರೂರು ಗ್ರಾಪಂ ಸದಸ್ಯ ಸುರೇಶ್, ಅರಕೇರಿಪುಟ್ಟರಾಜು, ವೆಂಕಟರೊಣಪ್ಪ, ಬೀರಗಾನಹಳ್ಳಿನಾರಯಣಸ್ವಾಮಿ, ಮುಂತಾದವರು ಇದ್ದರು.