ಸಾರಾಂಶ
ಮುಳಗುಂದ: ಸಾಧಿಸುವ ಗುರಿ ವಿದ್ಯಾರ್ಥಿ ದೆಸೆಯಿಂದಲೆ ರೂಢಿಸಿಕೊಳ್ಳಬೇಕು. ವರಕವಿ ದ.ರಾ.ಬೇಂದ್ರೆ ಸಹ ವಿದ್ಯಾರ್ಥಿ ಇದ್ದಾಗಲೆ ತಾವು ಸಾಧಿಸಬೇಕಿರುವ ಗುರಿ ರೂಢಿಸಿಕೊಂಡು ವಿದ್ಯಾರ್ಥಿಯಿಂದ ಕಾವ್ಯಾರ್ಥಿ ಬೇಂದ್ರೆಯಾಗಿ ಬದಲಾದರು ಎಂದು ಧಾರವಾಡದ ಸಾಹಿತಿ ಡಾ.ಶ್ಯಾಮಸುಂದರ ಜಿ.ಬಿದರಕುಂದಿ ಹೇಳಿದರು.
ಪಟ್ಟಣದ ಬಿಎಂಎಸ್ ಕಲಾಭವನದಲ್ಲಿ ಮಂಗಳವಾರ ನಡೆದ ಎಸ್.ಜೆ.ಜೆ.ಎಂ ಸಂಯುಕ್ತ ಪಪೂ ಮಹಾವಿದ್ಯಾಲಯದ 2024-25ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವಿದ್ಯಾರ್ಥಿ ಹಂತದಲ್ಲಿ ಬಾಹ್ಯ ಪರೀಕ್ಷೆ ಪಾಸಾಗೋದು ಸುಲಭ, ಆದರೆ ಜೀವನವೆ ಒಂದು ದೊಡ್ಡ ಪರೀಕ್ಷೆ, ಪ್ರತಿ ಗಳಿಗೆಗೂ ಪರೀಕ್ಷೆ ಎದುರಾಗುತ್ತವೆ. ನಮ್ಮ ಅಂತಃ ಸತ್ವ,ಯೋಗ್ಯತೆ, ವ್ಯಕ್ತಿತ್ವ ಪರೀಕ್ಷೆ ಮಾಡುವಂತಹ ಸಮಸ್ಯೆಗಳು ಬರುತ್ತವೆ, ಈ ಪರೀಕ್ಷೆಗೆ ಉತ್ತರ ನಾವೇ ಸಿದ್ಧತೆ ಮಾಡಿಕೊಳ್ಳಬೇಕು. ಗುರುಗಳ, ಹಿರಿಯರ ಮಾರ್ಗದರ್ಶನವು ಮುಖ್ಯವಾಗುತ್ತದೆ. ನಮ್ಮೊಳಗಿರುವ ಏಕಾಗೃತೆ, ಧೈರ್ಯ, ಪ್ರೋತ್ಸಾಹ ಬಳಸಿಕೊಂಡು ಪ್ರತಿಭೆ ಅರಳಿಸಬೇಕು ಎಂದರು.
ವರ್ತಕ ಶಿವಾನಂದ ದಳವೆ ಮಾತನಾಡಿ, ನಾವು ಎಲ್ಲೆ ಇದ್ದರೂ ಪ್ರಾಥಮಿಕ, ಪ್ರೌಢ ಹಂತದಲ್ಲಿ ಕಲೆತ ಶಾಲೆ, ಕಲಿಸಿದ ಗುರುಗಳ ಬಗ್ಗೆ ಅಭಿಮಾನವಿರಬೇಕು, ನಮ್ಮಿಂದ ಸಾಧ್ಯವಾಗುವ ಸಹಾಯ ಶಿಕ್ಷಣದ ಪ್ರಗತಿ, ಶಾಲೆ ಅಭಿವೃದ್ಧಿಗಾಗಿ ಕೊಡಬೇಕು ಎಂದು ಹೇಳಿದರು.ಈ ವೇಳೆ 2023-24ನೇ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು.
ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಸಮಿತಿ ಉಪಾಧ್ಯಕ್ಷ ವಿಜಯ ನೀಲಗುಂದ, ಡಾ.ಎಸ್.ಸಿ. ಚವಡಿ, ಸಿದ್ದು ಕುರ್ತಕೋಟಿ, ಫಕ್ಕಿರಯ್ಯ ಅಮೋಘಿಮಠ, ಪಿ.ಎ. ವಂಟಕರ, ಬಿ.ಸಿ.ಬಡ್ನಿ, ಪ್ರಾ.ಎ.ಎಂ. ಅಂಗಡಿ, ಶಿಕ್ಷಕರಾದ ಇ.ಎಂ. ಗುಳೇದ, ಎಸ್.ಪಿ. ಶಿರೋರ, ಆರ್.ಆರ್. ಪಟ್ಟಣ, ಎಸ್.ಚಂದ್ರಶೇಖರ ಹಾಗೂ ವಿದ್ಯಾರ್ಥಿಗಳು ಇದ್ದರು.ಈ ವೇಳೆ ಬಡ ವಿದ್ಯಾರ್ಥಿಗಳಿಗೆ ಸಹಾಯಾರ್ಥವಾಗಿ ₹60 ಸಾವಿರ ಠೇವಣಿ ದೇಣಿಗೆಯನ್ನು 2000-2001ನೇ ಸಾಲಿನ ವಿದ್ಯಾರ್ಥಿಗಳಿಂದ ನೀಡಲಾಯಿತು. ಫಕ್ಕಿರಪ್ಪ ಬಾತಾಖಾನಿ ಸ್ಮರಣಾರ್ಥ ಸಾವಿತ್ರಿ ಬಾತಾಖಾನಿ ₹25 ಸಾವಿರ ದೇಣಿಗೆ ನೀಡಿದರು.