ಮಹದಾಯಿ ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರ ಆದಷ್ಟು ಬೇಗ ಸರ್ವಪಕ್ಷಗಳ ನಿಯೋಗ ದೆಹಲಿಗೆ ತೆಗೆದುಕೊಂಡು ಹೋಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಇಲ್ಲದಿದ್ದರೆ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿಗಾಗಿ ತೊಂದರೆ ಆಗುವುದು ಖಚಿತ.

ನರಗುಂದ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ನಾಲ್ವರು ಬಿಜೆಪಿ ಅಭ್ಯರ್ಥಿಗಳೇ ಜಯಗಳಿಸಿದ್ದರಿಂದ ಮಹದಾಯಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡುತ್ತಿಲ್ಲವೆಂದು ರೈತಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಒಬ್ಬ ಬಿಜೆಪಿ ಸಂಸದರನ್ನು ನಾನು ಇತ್ತೀಚೆಗೆ ಸಂಪರ್ಕಿಸಿ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡುವಂತೆ ಕೇಂದ್ರ ಸಚಿವ ಅಮಿತ್ ಶಾ ಅವರ ಜತೆ ಚರ್ಚಿಸುವಂತೆ ಕೇಳಿದ್ದೆ. ಆಗ ಸಂಸದರು, ಈ ಯೋಜನೆ ಜಾರಿಗಾಗಿ ಕೇಂದ್ರ ಸಚಿವ ಅಮಿತ್ ಶಾ ಅವರ ಜತೆ ಚರ್ಚಿಸಿದ್ದೇವೆ. ಆಗ ಶಾ ಅವರು ಆ ಭಾಗದಲ್ಲಿ ಯೋಜನೆ ಜನರಿಗೆ ಅವಶ್ಯವಿದ್ದರೆ ಚುನಾವಣೆಯಲ್ಲಿ ನೀವು ಹೇಗೆ ಜಯಗಳಿಸಿದ್ದಿರಿ? ಎಂದು ಸಂಸದರನ್ನು ಕೇಳಿದ್ದರು. ಆ ಯೋಜನೆ ಅವಶ್ಯ ಇದ್ದಿದ್ದರೆ ಅಲ್ಲಿನ ಜನ ನಿಮ್ಮನ್ನು ಸೋಲಿಸಬೇಕಾಗಿತ್ತು ಎಂದು ಸಚಿವ ಶಾ ಅವರು ಈ ಭಾಗದ ಬಿಜೆಪಿ ಸಂಸದರೊಬ್ಬರಿಗೆ ಹೇಳಿದ್ದರು. ಹೀಗಾಗಿ ಬಿಜೆಪಿ ಸಂಸದರಿಂದಲೇ ಯೋಜನೆ ಜಾರಿಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹದಾಯಿ ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರ ಆದಷ್ಟು ಬೇಗ ಸರ್ವಪಕ್ಷಗಳ ನಿಯೋಗ ದೆಹಲಿಗೆ ತೆಗೆದುಕೊಂಡು ಹೋಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಇಲ್ಲದಿದ್ದರೆ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿಗಾಗಿ ತೊಂದರೆ ಆಗುವುದು ಖಚಿತ ಎಂದರು.

ರಾಜ್ಯದಲ್ಲಿ ಈ ವರ್ಷ ತೀವ್ರ ಬರಗಾಲವಿದೆ. ಆದ್ದರಿಂದ ರಾಜ್ಯ ಸರ್ಕಾರ ಮುಂಗಾರು ಹಂಗಾಮಿನಲ್ಲಿ ಬೆಳೆಹಾನಿ ಮಾಡಿಕೊಂಡ ರೈತರಿಗೆ ಪ್ರತಿ 1 ಹೆಕ್ಟೇರ್‌ಗೆ ₹25 ಸಾವಿರ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಿ.ಎಸ್. ಪಾಟೀಲ, ವೀರಭಸಪ್ಪ ಹೂಗಾರ, ಎಸ್.ಬಿ. ಜೋಗಣ್ಣವರ, ಪರಶುರಾಮ ಜಂಬಗಿ, ಹನುಮಂತ ಸರನಾಯ್ಕರ, ಸುಭಾಸ ಗಿರಿಯಣ್ಣವರ, ರಾಘವೇಂದ್ರ, ಯಲ್ಲಪ್ಪ ಚಲವಣ್ಣವರ, ಅರ್ಜುನ ಮಾನೆ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ಹೇಮಕ್ಕ ಘಾಳಿ, ಆನಂದಮ್ಮ ಹಿರೇಮಠ, ವಾಸು ಚವಾನ, ವಿಜಯಕುಮಾರ ಹೂಗಾರ ಇದ್ದರು.