ಅರಣ್ಯ ಇಲಾಖೆ ಡಿಸಿಎಫ್ ಬಾಸ್ಕರ್, ಶ್ರೀಪತಿಗಳವರಂತಹ ಅಧಿಕಾರಿಗಳ ದೋರಣೆ, ನಿರ್ಲಕ್ಷ್ಯದಿಂದಾಗಿ ಸರ್ಕಾರದ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತಿಲ್ಲ. ಸಕಾಲದಲ್ಲಿ ಅನುದಾನವೂ ಬಳಕೆಯಾಗದೆ ಕಾಮಗಾರಿಗಳು ಕುಂಠಿತವಾಗುತ್ತಿವೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಅರಣ್ಯ ಇಲಾಖೆ ಡಿಸಿಎಫ್ ಬಾಸ್ಕರ್, ಶ್ರೀಪತಿಗಳವರಂತಹ ಅಧಿಕಾರಿಗಳ ದೋರಣೆ, ನಿರ್ಲಕ್ಷ್ಯದಿಂದಾಗಿ ಸರ್ಕಾರದ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತಿಲ್ಲ. ಸಕಾಲದಲ್ಲಿ ಅನುದಾನವೂ ಬಳಕೆಯಾಗದೆ ಕಾಮಗಾರಿಗಳು ಕುಂಠಿತವಾಗುತ್ತಿವೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.ತಾಲೂಕಿನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅಯೋಜಿಸಲಾಗಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಶಾಸಕರು ಗುಂಡು ಎಸೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. 9ಗಂಟೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಿಗದಿತ ಸಮಯಕ್ಕೆ ಬಂದು ಒಂದು ಗಂಟೆ ಪ್ರವಾಸಿ ಮಂದಿರದಲ್ಲಿ ಕಾದಿದ್ದೆನೆ. ನಾನು ಬಂದಾಗ ಕ್ರೀಡಾಕೂಟ ಅಯೋಜಕರು, ಕ್ರೀಡಾ ಶಿಕ್ಷಕರು, ಅಧಿಕಾರಿಗಳು ಇರಲಿಲ್ಲ. ಕ್ರೀಡಾಪಟುಗಳೂ ಬಂದಿರಲಿಲ್ಲ. ನಿಜಕ್ಕೂ ಈ ಬೆಳವಣಿಗೆ ಸರಿಯಲ್ಲ ಎಂದು ಹೇಳಿದರು.
ಯಳಂದೂರು ತಾಲೂಕಿನ ಮಹಿಳಾ ಕ್ರೀಡಾಪಟುಗಳಿಗಾಗಿ ಎರಡೂವರೆ ಕೋಟಿ ಅನುದಾನ ಬಿಡುಗಡೆಗೊಳಿಸಿ ಹೆಣ್ಣು ಮಕ್ಕಳ ವಸತಿ ಗೃಹ ನಿರ್ಮಾಣ ಕಾರ್ಯ ಸಾಗಿದೆ. ಕೊಳ್ಳೇಗಾಲ ಮಹದೇಶ್ವರ ಕಾಲೇಜಿನ ಒಳಾಂಗಣ ಕ್ರೀಡಾಂಗಣ 4 ಕೋಟಿ ರು. ಅಂದಾಜಿನ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಕೆಲಸ ನಿಧಾನಗತಿಲ್ಲಿ ಸಾಗುತ್ತಿದೆ. ಅರಣ್ಯ ಇಲಖೆ ಡಿಸಿಎಫ್ ಬಾಸ್ಕರ್ ಅವರ ನಿರ್ಲಕ್ಷ್ಯದಿಂದ ಕಾಮಗಾರಿಗೆ ಹಿನ್ನಡೆಯಾಗಿದೆ. ಕಾಲೇಜಿನ ಸುತ್ತಮುತ್ತಲಿರುವ ಕೆಲ ಮರಗಳ ಕಟಾವು ಆಗಬೇಕಿದೆ. ಪರಿಶೀಲಿಸಿ ಕಾಟಾವಿಗೆ ಅನುಮತಿ ನೀಡಿ ಎಂದು ನಾನೇ ದೂರವಾಣಿ ಕರೆ ಮಾಡಿ ಹೇಳಿದ್ದೆನೆ. ತಿಂಗಳುಗಳೇ ಆದರೂ ಸಹಾ ಬಾಸ್ಕರ್ ಈ ಕೆಲಸ ಮಾಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಈಗಲಾದರೂ ಮರ ಕಟಾವಿಗೆ ತ್ವರಿತ ಆದೇಶ ಮಾಡಬೇಕು. ಇಲ್ಲದಿದ್ದರೆ ಶಾಸಕನಾದ ನಾನೇ ಗುತ್ತಿಗೆದಾರರಿಗೆ ನಿಯಮಾನುಸಾರ ಲೆಕ್ಕಹಾಕಿ ಮರ ಕಟ್ ಮಾಡಿ. ಕಾನೂನು ಪ್ರಕಾರವಾಗಿ ಹಾಗೆಯೇ ಇಡಿ. ಬಳಿಕ ಅವರು ಬಹಿರಂಗವಾಗಿ ಹರಾಜಿಗೆ ಮುಂದಾಗಲಿ ಎಂಬ ಸಂದೇಶ ರವಾನಿಸಬೇಕಾಗುತ್ತದೆ. ಇದೇ ರೀತಿ ಚಾಮರಾಜನಗರ ಡಿಸಿಎಫ್ ಶ್ರೀಪತಿ ಅವರು ಸಹಾ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕಾನೂನು ಪ್ರಕಾರ ಪರಿಶೀಲಿಸಿ ಅನುಮತಿ ನೀಡಿ ಅಂದರೂ ಕೇಳುತ್ತಿಲ್ಲ ಎಂದು ಆಕ್ಷೇಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ತಾಪಂ ಇಒ ಕುಮಾರ್, ಬಿಇಒ ಮಂಜುಳಾ, ನಗರಸಭೆ ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು, ರಮೇಶ್, ಸದಸ್ಯರಾದ ಸ್ವಾಮಿ ನಂಜಪ್ಪ, ಮುಖಂಡರಾದ ಬಾಬು, ಪರಮೇಶ್, ಹೇಮಂತ್ ಇತರರು ಹಾಜರಿದ್ದರು.ಕುರುಬೂರಿನ ಖಾಸಗಿ ಶಾಲೆಯೊಂದರಲ್ಲಿನ ಗಣಿತ ಪಾಠ ಮಾಡುವ ಶಿಕ್ಷಕರು ಕೋಕೋ ಅಭ್ಯಾಸ ಮಾಡಿಸಿದ ಪರಿಣಾಮ ಅಂದು ಆ ಶಾಲೆ ಮಕ್ಕಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಶಸ್ತಿ ಪಡೆದಿದ್ದಾರೆ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ ಜೊತೆ ಇಚ್ಛಾಶಕ್ತಿ ಮುಖ್ಯ. ಕಾಟಾಚಾರಕ್ಕೆ ಪಾಲ್ಗೊಳ್ಳುವುದು ಸರಿಯಲ್ಲ. ನಮ್ಮ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟದಲ್ಲಿ ಸಾಧನೆಮಾಡುವಂತಾಗಲಿ. ಕ್ರೀಡಾಕೂಟ ಅಯೋಜಕರು ತಾತ್ಸಾರ ಮನೋಭಾವ ಬಿಡಬೇಕು.
ಎ.ಆರ್.ಕೃಷ್ಣಮೂರ್ತಿ .ಕೊಳ್ಳೇಗಾಲ ಶಾಸಕ