ಸಾರಾಂಶ
ರಾಜ್ಯ ಸರ್ಕಾರವು ‘ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಕಾಯಿದೆ -1996’ ಪ್ರಕಾರ ಬೆಂಗಳೂರು ಅರಮನೆಯ 472.16 ಎಕರೆ ಜಾಗ ಸ್ವಾಧೀನಕ್ಕೆ ಕ್ರಮ ಕೈಗೊಂಡಿತ್ತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಸರ್ಕಾರವು ‘ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಕಾಯಿದೆ -1996’ ಪ್ರಕಾರ ಬೆಂಗಳೂರು ಅರಮನೆಯ 472.16 ಎಕರೆ ಜಾಗ ಸ್ವಾಧೀನಕ್ಕೆ ಕ್ರಮ ಕೈಗೊಂಡಿತ್ತು.
ಇದನ್ನು ಪ್ರಶ್ನಿಸಿ ಖಾಸಗಿ ವ್ಯಕ್ತಿಗಳು ಸುಪ್ರೀಂ ಕೋರ್ಟ್‌ನಲ್ಲಿ ಹೂಡಿರುವ ಮೂಲ ದಾವೆಯನ್ನು ಕೂಡಲೇ ಇತ್ಯರ್ಥಪಡಿಸಿ ಜಾಗ ಸ್ವಾಧೀನಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಉತ್ತಮ ವಕೀಲರನ್ನು ನಿಯೋಜಿಸಿ ಮೂಲ ದಾವೆಯನ್ನು ಇತ್ಯರ್ಥಪಡಿಸಿ. ಇಷ್ಟು ವರ್ಷಗಳಾದರೂ ದಾವೆ ಯಥಾಸ್ಥಿತಿಯಲ್ಲಿದೆ ಎಂದರೆ ಅದಕ್ಕೆ ನಿಮ್ಮ ನಿರ್ಲಕ್ಷ್ಯ ಕಾರಣವಲ್ಲವೇ?’ ಎಂದು ಕಿಡಿ ಕಾರಿದರು ಎಂದು ಮೂಲಗಳು ಮಾಹಿತಿ ನೀಡಿವೆ.
ರಸ್ತೆ ಅಗಲೀಕರಣ ಸಂಬಂಧದ ನ್ಯಾಯಾಂಗ ನಿಂದನೆ ಪ್ರಕರಣದ ಚರ್ಚೆ ವೇಳೆ ಮಾತನಾಡಿದ ಅವರು, ‘ಅರಮನೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು 1996ರಲ್ಲಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗಲೇ ವಿಧೇಯಕ ಮಂಡಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆದು ಕಾಯ್ದೆ ಮಾಡಲಾಗಿದೆ.
ಜಾಗವನ್ನು ಸಾರ್ವಜನಿಕ ಬಳಕೆಗೆ ಮೀಸಲಿಡಲು ಉದ್ದೇಶಿಸಲಾಗಿತ್ತು. ಇದನ್ನು ಪ್ರಶ್ನಿಸಿ ರಾಜಮನೆತನದವರು ಹೈಕೋರ್ಟ್‌ಗೆ ಹೋಗಿದ್ದರೂ ಹೈಕೋರ್ಟ್ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿತ್ತು.
ಈ ಬಗ್ಗೆ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗಿದ್ದರು. ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನೀಡಿದ್ದ ಮಧ್ಯಂತರ ಆದೇಶ ಈಗಲೂ ಮುಂದುವರೆದಿದೆ ಎಂದರೆ ಏನರ್ಥ?’ ಎಂದು ಪ್ರಶ್ನಿಸಿದರು ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?
ರಾಜ್ಯ ಸರ್ಕಾರವು 1996ರಲ್ಲಿ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಕಾಯಿದೆ -1996ರ ಅಡಿ ಒಟ್ಟು 472.16 ಎಕರೆ ವಿಸ್ತೀರ್ಣದ ಬೆಂಗಳೂರು ಅರಮನೆ (ರಾಜ್‌ಮಹಲ್ ವಿಲಾಸ್) ಜಾಗವನ್ನು ನಿಗದಿತ ಪರಿಹಾರ ನೀಡಿ ಸ್ವಾಧೀನಪಡಿಸಿಕೊಳ್ಳಲು ಕಾಯಿದೆ ಮಾಡಿತ್ತು. ಕಾಯಿದೆಯನ್ನು 1996ರ ನವೆಂಬರ್ 21ರಿಂದ ಅನ್ವಯವಾಗುವಂತೆ ಅನುಷ್ಠಾನಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿತ್ತು.
ಇದರ ವಿರುದ್ಧ ಸುಪ್ರೀಂ ಮೊರೆ ಹೋದ ಅವರು, ಆಸ್ತಿಯಲ್ಲಿ ತಮ್ಮ ಸಹೋದರಿಯರಿಗೂ ಪಾಲು ಈಗಾಗಲೇ ನೀಡಿರುವುದಾಗಿ ಹೇಳಿ ವಾದ ಮಂಡಿಸಿದ್ದರು.
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹಾಗೂ ಯಾವುದೇ ಶಾಶ್ವತ ಕಟ್ಟಡಗಳನ್ನು ನಿರ್ಮಾಣ ಮಾಡದಂತೆ ಆದೇಶಿಸಿದೆ. ಈ ದಾವೆಯ ಅಂತಿಮ ತೀರ್ಪು ಯಾರ ಪರ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಅರಮನೆ ಮೈದಾನವನ್ನು ಸ್ವಾಧೀನಪಡಿಸಿಕೊಳ್ಳುವ ಸಂಬಂಧ 1996ರಲ್ಲೇ ಕಾಯ್ದೆ ಮಾಡಲಾಗಿದೆ. ಇದನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ. ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ಮಾಡಿದ್ದು, ತುಂಬಾ ವರ್ಷಗಳಿಂದ ದಾವೆ ಇತ್ಯರ್ಥವಾಗಿಲ್ಲ.
ಈ ಸಂಬಂಧ ಮುಖ್ಯಮಂತ್ರಿಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೂಕ್ತ ವಕೀಲರನ್ನು ನಿಯೋಜಿಸಿ ಇತ್ಯರ್ಥಪಡಿಸಲು ಸೂಚಿಸಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.