ಕನ್ನಡಪ್ರಭ ವಾರ್ತೆ ಪಾಂಡವಪುರ
ಮಾ.14ರಂದು ರಾಜ್ಯಾದ್ಯಂತ ರಾಷ್ಟ್ರೀಯ ಲೋಕ್-ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಪಾಂಡವಪುರದಲ್ಲಿಯೂ ರಾಷ್ಟ್ರೀಯ ಲೋಕ್-ಅದಾಲತ್ ಆಯೋಜಿಸಲಾಗಿದ್ದು, ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ಹೇಳಿದರು.ಸಾರ್ವಜನಿಕರು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಲು ಇಚ್ಛಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ, ಕಾನೂನು ಸೇವೆಗಳ ಪ್ರಾಧಿಕಾರ/ ತಾಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಆನ್-ಲೈನ್/ವೀಡಿಯೋಕಾನ್ಫರೆನ್ಸ್/-ಮೇಲ್/ಮುಖಾಂತರ/ E-mail: tiscpandavapura@gmail.com ಅಥವಾ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳನ್ನು ಮತ್ತು ತಾಲ್ಲೂಕು ಕಾನೂನು ಸೇವೆಗಳ ಸಮಿತಿಗಳನ್ನು ಖುದ್ದಾಗಿ ಆನ್-ಲೈನ್/ವೀಡಿಯೋ ಕಾನ್ಸೆರೆನ್ಸ್ /ಇ-ಮೇಲ್/ ವಾಟ್ಸ್ ಆಪ್/ ಎಲೆಕ್ಟ್ರಾನಿಕ್ ಮೋಡ್ ಮೂಲಕ ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕೋರಿದರು.ಪಾಂಡವಪುರ ತಾಲೂಕಿನಲ್ಲಿ ಫೆ.1, 2026ರ ಅನ್ವಯ ಒಟ್ಟು 6397 ಪ್ರಕಣಗಳಲ್ಲಿ, ಬಾಕಿ ಇರುವ ಪ್ರಕರಣಗಳನ್ನು ರಾಜಿಗಾಗಿ ತೆಗೆದುಕೊಳ್ಳಲಾಗಿದ್ದು, ಎಂ.ವಿ.ಸಿ ಪ್ರಕರಣಗಳು 120, ಎಂ.ಎಂ.ಆರ್.ಡಿ ಪ್ರಕರಣಗಳು 5, ಎಲ್.ಎ.ಸಿ ಪ್ರಕರಣಗಳು 2, ವಿಭಾಗದ ದಾವೆ ಪ್ರಕರಣಗಳು 140, ಇತರೆ ಸಿವಿಲ್ ಪ್ರಕರಣಗಳು 250, ನಿರ್ಧಿಷ್ಟ ಪರಿಹಾರಕ್ಕಾಗಿ ದಾವೆ 200, ಕ್ರಿಮಿನಲ್ ಪ್ರಕರಣಗಳು 50 ಹಾಗೂ ಎನ್.ಐ ಆಕ್ಟ್ ಪ್ರಕರಣಗಳು 360 ಸೇರಿದಂತೆ ಒಟ್ಟು 1127 ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಆದಾಲತ್ಗೆ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.
ಜತೆಗೆ ಪ್ರತಿದಿನ ಪಾಂಡವಪುರದ ಎಲ್ಲಾ ನ್ಯಾಯಾಲಯಗಳಲ್ಲಿ ಲೋಕ್-ಅದಾಲತ್ಗೆ ಸಂಬಂಧಿಸಿದಂತೆ ಪೂರ್ವಭಾವಿ ಬೈಠಕ್/ ಪೀಠಗಳು ನಡೆಯುತ್ತಲಿವೆ- ನೀರಿನ ಬಿಲ್ ಪಾವತಿ, ಟೆಲಿಫೋನ್ ಬಿಲ್, ವಿದ್ಯುತ್ ಬಿಲ್ಲು ಹಾಗೂ ಸಣ್ಣ ಪುಟ್ಟ ಬ್ಯಾಂಕ್ ಸಾಲ ವಸೂಲಾತಿಗಾಗಿ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಸಿವಿಲ್ ವ್ಯಾಜ್ಯ ಮತ್ತು ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿ ಮುಖಾಂತರ ವಿಶೇಷ ಪೀಠ ನಡೆಯುತ್ತಲಿವೆ. ಇದನ್ನೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗೋಷ್ಠಿಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಬಿ.ಪಾರ್ವತಮ್ಮ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಬಾಬು, ವಕೀಲರ ಸಂಘದ ಅಧ್ಯಕ್ಷ ಗಂಗರಾಜು ಇತರರಿದ್ದರು.