ವಕ್ಫ್ ಆಸ್ತಿಗಳ ಪ್ರಕರಣಗಳನ್ನು ತಿಂಗಳೊಳಗಾಗಿ ಇತ್ಯರ್ಥಪಡಿಸಿ

| Published : Sep 04 2024, 01:50 AM IST

ವಕ್ಫ್ ಆಸ್ತಿಗಳ ಪ್ರಕರಣಗಳನ್ನು ತಿಂಗಳೊಳಗಾಗಿ ಇತ್ಯರ್ಥಪಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಬಾಕಿ ಇರುವ ವಕ್ಪ್ ಆಸ್ತಿಗಳ ಪ್ರಕರಣಗಳನ್ನು ಒಂದು ತಿಂಗಳೊಳಗಾಗಿ ಇತ್ಯರ್ಥಪಡಿಸಬೇಕು. ತಹಸೀಲ್ದಾರ್‌ಗಳು ಆಸ್ತಿಗಳ ಫ್ಲಾಗಿಂಗ್‌ ಅನ್ನು ಶೀಘ್ರವಾಗಿ ಮಾಡಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಬಿ.ಝಡ್. ಜಮೀರ್ ಅಹ್ಮದಖಾನ್ ಎಚ್ಚರಿಕೆ ನೀಡಿದರು.

ಹಾವೇರಿ:ಜಿಲ್ಲೆಯಲ್ಲಿ ಬಾಕಿ ಇರುವ ವಕ್ಪ್ ಆಸ್ತಿಗಳ ಪ್ರಕರಣಗಳನ್ನು ಒಂದು ತಿಂಗಳೊಳಗಾಗಿ ಇತ್ಯರ್ಥಪಡಿಸಬೇಕು. ತಹಸೀಲ್ದಾರ್‌ಗಳು ಆಸ್ತಿಗಳ ಫ್ಲಾಗಿಂಗ್‌ ಅನ್ನು ಶೀಘ್ರವಾಗಿ ಮಾಡಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಬಿ.ಝಡ್. ಜಮೀರ್ ಅಹ್ಮದಖಾನ್ ಎಚ್ಚರಿಕೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಅದಾಲತ್ ಸಂಬಂಧಪಟ್ಟಂತೆ ಅಧಿಕಾರಿಗಳ ಸಭೆ ನಡೆಸಿದ ಅವರು, ವಕ್ಫ್ ಆಸ್ತಿ ಸರ್ಕಾರದ ಆಸ್ತಿ ಎಂಬ ತಪ್ಪು ಕಲ್ಪನೆ ಇದೆ, ಇದು ದಾನಿಗಳು ಸಮಾಜಕ್ಕೆ ಒಳ್ಳೆಯದಾಗಲಿ ಎನ್ನುವ ಉದ್ದೇಶದಿಂದ ನೀಡಿದ ಆಸ್ತಿಯಾಗಿದೆ. ಅಧಿಕಾರಿಗಳು ಆಸ್ತಿಗಳನ್ನು ಉಳಿಸುವ ಮೂಲಕ ಪುಣ್ಯದ ಕೆಲಸ ಮಾಡಬೇಕು ಎಂದರು.ಜಿಲ್ಲೆಯಲ್ಲಿ ೩,೨೩೫ ವಕ್ಪ್ ಆಸ್ತಿಗಳಿದ್ದು, ಈ ಪೈಕಿ ೨,೦೪೬ ಕಂದಾಯ ಇಲಾಖೆಗೆ ಸಂಬಂಧಿಸಿದ ಆಸ್ತಿಗಳಾಗಿದ್ದು, ೩೯೭ ಖಾತಾ ನೋಂದಣಿಯಾಗಿದೆ, ೧,೬೪೯ ಬಾಕಿ ಪ್ರಕರಣಗಳನ್ನು ಕೂಡಲೇ ಇತ್ಯರ್ಥಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಆರ್.ಡಿ.ಪಿ.ಆರ್.ನಲ್ಲಿ ೨೮೦ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಶೇ.೧೦೦ ನಷ್ಟು ಸಾಧನೆ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ೪೭ ಸಾವಿರ ವಕ್ಪ್ ಆಸ್ತಿ ಇದ್ದು, ಈ ಪೈಕಿ ೨೩ ಸಾವಿರ ಆಸ್ತಿ ಮಾತ್ರ ವಕ್ಫ ಮಂಡಳಿ ಅಧೀನದಲ್ಲಿದೆ. ೨೪ ಸಾವಿರ ಆಸ್ತಿ ಒತ್ತುವರಿಯಾಗಿದೆ. ಧಾರವಾಡ, ಕಾರವಾರ, ಗದಗ ಹಾವೇರಿ ಜಿಲ್ಲೆ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ವಕ್ಫ ಅದಾಲತ್ ನಡೆಸಲಾಗಿದೆ ಎಂದು ತಿಳಿಸಿದರು. ಖಬರಸ್ತಾನಕ್ಕೆ ಜಮೀನು: ಸುಪ್ರೀಂ ಕೋರ್ಟ್ ಆದೇಶದನ್ವಯ ಹಿಂದು, ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಎಲ್ಲರಿಗೂ ಸ್ಮಶಾನಕ್ಕೆ ಹಾಗೂ ಖಬರಸ್ತಾನಕ್ಕೆ ಜಮೀನು ನೀಡಬೇಕು ಎಂದು ಆದೇಶವಾಗಿದೆ. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನು ಖರೀದಿಸಿ ಸ್ಮಶಾನಕ್ಕೆ ಹಾಗೂ ಬೇಡಿಕೆ ಇರುವ ಖಬರಸ್ತಾನಕ್ಕೆ ನೀಡಬೇಕು. ಜಿಲ್ಲೆಯಲ್ಲಿ ಹಾವೇರಿ, ರಾಣೇಬೆನ್ನೂರು, ಶಿಗ್ಗಾಂವ ಹಾಗೂ ಸವಣೂರ ತಾಲೂಕಿನಲ್ಲಿ ತಲಾ ಒಂದು, ಹಿರೇಕೆರೂರು ತಾಲೂಕಿನಲ್ಲಿ ಎರಡು ಮತ್ತು ಹಾನಗಲ್ ತಾಲೂಕಿನಲ್ಲಿ ಎಂಟು ಸೇರಿ ೧೪ ಸ್ಥಳಗಳಲ್ಲಿ ಖಬರಸ್ತಾನಕ್ಕೆ ಬೇಡಿಕೆ ಸಲ್ಲಿಸಿದ್ದು, ಕೂಡಲೇ ಜಮೀನು ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗದಗ ಜಿಲ್ಲೆಯಲ್ಲಿ ೧೪೮೬ ವಕ್ಪ್ ಆಸ್ತಿಗಳಿದ್ದು, ಈ ಪೈಕಿ ೬೮೯ ಕಂದಾಯ ಇಲಾಖೆಗೆ ಸಂಬಂಧಿಸಿದ ಆಸ್ತಿಗಳಾಗಿದ್ದು, ೫೨೧ ಖಾತಾ ನೋಂದಣಿಯಾಗಿದೆ, ಜಿಲ್ಲಾಧಿಕಾರಿಗಳು ಹಾಗೂ ವಕ್ಫ್ ಅಧಿಕಾರಿಗಳು ಹೊಸದಾಗಿ ಬಂದಿರುವುದರಿಂದ ೪೩೮ ಬಾಕಿ ಪ್ರಕರಣಗಳನ್ನು ಮೂರು ತಿಂಗಳೊಳಗಾಗಿ ಇತ್ಯರ್ಥಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಪ್ಲಾಗಿಂಗ್ ಪೂರ್ಣಗೊಳಿಸಿದ್ದಕ್ಕೆ ಅಧಿಕಾರಿಗಳನ್ನು ಅಭಿನಂದಿಸಿದರು. ಸಭೆಯಲ್ಲಿ ವಿಧಾನಸಭೆ ಸದಸ್ಯ ಅಬ್ದುಲ್ ಜಬ್ಬಾರ, ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಕೆ.ಅನ್ವರಭಾಷಾ, ರಾಜ್ಯ ವಕ್ಪ್ ಬೋರ್ಡ್ ಅಧಿಕಾರಿ ಜೀಲಿಸಾ ಮುಕಾಶಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾಗೂ ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಹಾವೇರಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.