ಸಾರಾಂಶ
ಗಣೇಶ ಕಾಮತ್, ಮೂಡುಬಿದಿರೆ
ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣದ ಕನಸು ನನಸಾಗಿ ಇದೀಗ ರಾಮಲಲ್ಲಾನ ಪ್ರತಿಷ್ಠೆಯನ್ನು ಕಣ್ತುಂಬಿಕೊಳ್ಳುವ ಭಾಗ್ಯ ನಮ್ಮೆಲ್ಲರದ್ದು. ಶ್ರೀರಾಮ ಮಂದಿರ ನಿರ್ಮಾಣದಂತಹ ಮಹತ್ಕಾರ್ಯದಲ್ಲಿ ಅದೆಷ್ಟೋ ಮಂದಿ ತಮ್ಮನ್ನು ತೊಡಗಿಸಿಕೊಂಡು ಪುಳಕಿತರಾಗಿದ್ದಾರೆ. ಈ ಪೈಕಿ ಕರುನಾಡಿನ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಜನತೆಗೆ ದೊರೆತ ಶ್ರೀರಾಮ ಸೇವೆಯ ಅವಕಾಶವೇ ಅನನ್ಯ ಹಾಗೂ ಅವಿಸ್ಮರಣೀಯವಾದುದು.ಮಹತ್ವದ ತೀರ್ಪು!: ಹಲವು ದಶಕಗಳ ವಿವಾದ ಕೋರ್ಟ್ ಮೆಟ್ಟಿಲೇರಿ ಸಾಕಷ್ಟು ಸಂಶೋಧನೆ, ಸಾಕ್ಷಿ, ಉತ್ಖನನ, ಪೌರಾಣಿಕ ಗ್ರಂಥ ದಾಖಲೆಗಳ ಆಧಾರದಲ್ಲಿ ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ೨೦೧೯ರಲ್ಲಿ ನೀಡಿದ ತೀರ್ಪು ಐತಿಹಾಸಿಕ. ಈ ಸರ್ವಾನುಮತದ ತೀರ್ಪು ನೀಡಿದ ನ್ಯಾಯ ಪೀಠದ ನ್ಯಾಯಾಧೀಶರುಗಳ ಪೈಕಿ ಒಬ್ಬರಾಗಿದ್ದ ನ್ಯಾಯಮೂರ್ತಿ ಅಬ್ದುಲ್ ನಝೀರ್ ಮೂಲತಃ ಮೂಡುಬಿದಿರೆಯ ಬೆಳುವಾಯಿ ಕಾನದವರು. ತೀರ್ಪು ಪ್ರಕಟವಾದ ಬಳಿಕ ನಝೀರ್ ಕರಾವಳಿ ಮೂಲದವರು ಎನ್ನುವುದು ಸಾಕಷ್ಟು ಸುದ್ದಿಯಾಯಿತು.ರಾಮನಾಗುವತ್ತ ಶಿಲೆ: ಮೂಡುಬಿದಿರೆಯ ಗಡಿ ಭಾಗದಲ್ಲಿನ ಈದು ನೆಲ್ಲಿಕಾರಿನ ತುಂಗಪ್ಪ ಪೂಜಾರಿ ಎಂಬವರ ಜಾಗದ ಕೃಷ್ಣಶಿಲೆಯನ್ನು ಅಯೋಧ್ಯೆಯಲ್ಲಿ ರಾಮಮೂರ್ತಿಯಾಗಿ ನೆಲೆನಿಲ್ಲಲು ಹೋಗುತ್ತದೆ ಎಂದು ಯಾರೂ ಕನಸಲ್ಲೂ ಊಹಿಸಿರಲಿಲ್ಲ. ತುಂಗಪ್ಪ ಪೂಜಾರಿ ಮನೆಯ ಆವರಣದಿಂದ ಮಂದಿರ ಲೋಕಾರ್ಪಣೆಗೆ ಒಂಭತ್ತು ತಿಂಗಳಿರುವಾಗಲೇ ಕಳೆದ ಫಾಲ್ಗುಣ ‘ನವಮಿ’ಯಂದೇ ಅಯೋಧ್ಯೆಗೆ ಹೊರಟು ನಿಂತದ್ದು ಕಂಡಾಗ ಇದು ರಾಮನಿಚ್ಛೆ ಎನ್ನಬಹುದೇನೋ.ಬೆಳಕಾಗುವ ಭಾಗ್ಯ: ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಬೆಳಕು ಅಳವಡಿಕೆಯ ಎಲೆಕ್ಟ್ರಿಕಲ್ ಕಾಮಗಾರಿಯ ಗುತ್ತಿಗೆಗೆ ಹಲವು ಕಂಪನಿಗಳು ಪೈಪೋಟಿಗೆ ಬಿದ್ದಿದ್ದವು. ಆದರೆ ದೇವರಿಚ್ಛೆ ಎಂಬಂತೆ ಈ ಅವಕಾಶ ತನ್ನದಾಗಿಸಿಕೊಂಡದ್ದು ಶಂಕರ್ ಎಲೆಕ್ಟ್ರಿಕಲ್ ಸರ್ವಿಸ್ ಪ್ರೈ. ಇಂಡಿಯಾ ಸಂಸ್ಥೆ. ಈ ಸಂಸ್ಥೆಯ ಮಾಲಕ ಮೂಡುಬಿದಿರೆಯ ಅಶ್ವತ್ಥಪುರದ ರಾಜೇಶ್ ಶೆಟ್ಟಿ. ಅಷ್ಟಕ್ಕೂ ಅಶ್ವತ್ಥಪುರ ಎಂದಾಗ ಇಲ್ಲಿಯೂ ಶ್ರೀರಾಮನ ನಂಟಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಐತಿಹಾಸಿಕ ಮಹತ್ವದ ಶ್ರೀರಾಮ ದೇವಳದದ ಸನ್ನಿಧಿ ಇರುವುದು ಈ ಅಶ್ವತ್ಥಪುರದಲ್ಲಿಯೇ. ಹೀಗೆ ರಾಮಮಂದಿರಕ್ಕೆ ಬೆಳಕಿನ ವ್ಯವಸ್ಥೆ ಕಲ್ಪಿಸುವಲ್ಲಿ ಮೂಡುಬಿದಿರೆಯ ಕೊಡುಗೆ ಇದೆ.ನಿಡ್ಡೋಡಿಯಿಂದ ನಾಗಲಿಂಗಪುಷ್ಪ ಗಿಡ: ನಿಡ್ಡೋಡಿಯ ವೃಕ್ಷ ಪ್ರೇಮಿ ವಿನೇಶ್ ಪೂಜಾರಿ ತಾವು ಅಭಿವೃದ್ಧಿಪಡಿಸಿದ ನಾಗಲಿಂಗಪುಷ್ಪ ಗಿಡಗಳು ಅಯೋಧ್ಯೆ ಶ್ರೀ ರಾಮನ ಮಂದಿರದ ಅಂಗಳವನ್ನು ಅಲಂಕರಿಸುವ ಅವಕಾಶ ಪಡೆದದ್ದೂ ಒಂದು ಸೋಜಿಗವೇ. ದಕ್ಷಿಣ ಅಮೆರಿಕಾದ ಕೆನೋನ್ ಬಾಲ್ ಟ್ರೀ (ನಾಗಲಿಂಗ) ವೃಕ್ಷದ ಬೀಜಗಳನ್ನು ತಂದು ಬೆಳೆಸಿದ ವಿನೇಶ್ ಅಯೋಧ್ಯೆಯ ದೇವಳದ ಆಡಳಿತ ಮಂಡಳಿಯ ಗಮನ ಸೆಳೆದಾಗ ಗಿಡಗಳನ್ನು ಕಳಿಸಿಕೊಡುವ ಸೂಚನೆ ಬಂದಿತ್ತು. ಕರಾವಳಿಯ ದೇವಸ್ಥಾನಗಳ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಗಮನ ಸೆಳೆದ ವಿನೇಶ್ ಅವರು ಬೆಳಸಿದ ನಾಗಲಿಂಗ ಪುಷ್ಪ ಗಿಡುಗಳು ಅಯೋಧ್ಯೆಯ ರಾಮ ಮಂದಿರದ ಅಂಗಳವನ್ನೂ ತಲುಪಿರುವುದು ಗಮನಾರ್ಹವಾದುದು.ಕರಸೇವೆಯಲ್ಲೂ ಮುಂದು: ಅಯೋಧ್ಯೆಗೆ ಕರಸೇವೆಗಾಗಿ ಜೀವದ ಹಂಗು ತೊರೆದು ಹೊರಟ ಅನಂತ ಪ್ರಭು, ಮಾಧವರಾಯ ಕಾಮತ್, ಶೀನ ಸುವರ್ಣ, ಮನೋಹರ ಮಲ್ಯ, ತುಕಾರಾಮ ಮಲ್ಯ, ಬೋಳ ವಿಶ್ವನಾಥ ಕಾಮತ್, ಪದ್ಮನಾಭ, ಕಾನ ಈಶ್ವರ ಭಟ್, ರವೀಂದ್ರ ಪೈ, ಕರಸೇವಕರ ಪೈಕಿ ವೃತನಿರತರಾಗಿರುವ ಪ್ರಸನ್ನ ವಿ. ಶೆಣೈ, ಟಿ. ರಘುವೀರ ಶೆಣೈ ಮೊದಲಾದ ಕರಸೇವಕರು ಮೂಡುಬಿದಿರೆಯವರು.
ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಮೂಡುಬಿದಿರೆಯಲ್ಲೀಗ ಉದ್ಯೋಗಿಗಳಾಗಿ ನೆಲೆಸಿರುವ ಹೊರ ರಾಜ್ಯದ ಅನೇಕ ಮಂದಿಯ ಪೈಕಿ ಉತ್ತರ ಪ್ರದೇಶದವರ ಸಂಖ್ಯೆಯೂ ಗಮನಾರ್ಹವಾಗಿದೆ. ಈ ಪೈಕಿ ಕಳೆದ ಹಲವು ವರ್ಷಗಳಿಂದ ಮೂಡುಬಿದಿರೆಯಲ್ಲೇ ನೆಲೆಸಿರುವ ಉತ್ತರ ಪ್ರದೇಶ ಅಯೋಧ್ಯೆ ಗೋರಖ್‌ಪುರದ ನಿವಾಸಿ ಸ್ಮಿತಾದೇವಿಯವರೇ ಹೇಳುವಂತೆ ಇಲ್ಲಿನ ಜನರ ಧಾರ್ಮಿಕ ಶ್ರದ್ಧೆ, ಶಾಂತಿಯ ವಾತಾವರಣ. ಶಿಕ್ಷಣ ಇಷ್ಟವಾಗಿದೆ. ನಮ್ಮ ಮಕ್ಕಳು ಇಲ್ಲೇ ವ್ಯಾಸಂಗ ನಿರತರಾಗಿದ್ದಾರೆ. ಅಯೋಧ್ಯೆ ಮಂದಿರದಿಂದಾಗಿ ಈಗ ಉತ್ತರ ಪ್ರದೇಶದಲ್ಲೂ ಶಾಂತಿ, ಧರ್ಮ ಜಾಗೃತಿ, ಉದ್ಯೋಗವಾವಕಾಶಗಳು ಹೆಚ್ಚುತ್ತಿರುವುದು ಖುಷಿಯ ವಿಚಾರ ಎನ್ನುತ್ತಾರೆ. ೯೦ರ ದಶಕದಲ್ಲಿ ಶ್ರೀರಾಮ ಮಂದಿರದ ನಿರ್ಮಾಣದ ಕನಸು, ಕಲ್ಪನೆಗೆ ರೂಪುಕೊಡುವ ನಿಟ್ಟಿನಲ್ಲಿ ಶೃಂಗೇರಿ ಶಂಕರ ಮಠಕ್ಕೆ ತೆರಳುವ ಹಾದಿಯಲ್ಲಿ ಈಗ ಮಂದಿರ ನ್ಯಾಸದ ಅಧ್ಯಕ್ಷರಾಗಿರುವ ಮಹಂತ ನೃತ್ಯ ಗೋಪಾಲದಾಸ ಮೊದಲಾದ ಪ್ರಮುಖರು, ಸಂತರು ಮೂಡುಬಿದಿರೆಯ ಹಿರಿಯ ಆರೆಸ್ಸೆಸ್ ಪ್ರಮುಖ ದಿ. ಪಿ.ಎಸ್. ಭಟ್ ಅವರ ‘ರಾಮತೀರ್ಥ’ ನಿವಾಸಕ್ಕೆ ದಿಢೀರ್ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದರು. ರಾಷ್ಟ್ರೀಯತೆಯ ಆಂದೋಲನದಲ್ಲಿ ತಮಿಳುನಾಡಿನ ವೆಲ್ಲೂರು ಜೈಲಿನಲ್ಲಿ ಸೆರೆವಾಸದಲ್ಲಿದ್ದಾಗ ಜತೆಗಿದ್ದ ಪಿ.ಎಸ್. ಭಟ್ಟರನ್ನು ಕಾಣಲು ಎಲ್.ಕೆ. ಅಡ್ವಾಣಿ ಅವರು ೧೯೯೬ರಲ್ಲಿ ಮೂಡುಬಿದಿರೆಗೆ ಬಂದಾಗ ಪಿ.ಎಸ್. ಭಟ್ಟರಮನೆಯಲ್ಲೇ ಉಪಾಹಾರ ಸೇವಿಸಿದ್ದರು. ಹೀಗೆ ಅಯೋಧ್ಯೆಗೂ ಮುೂಡುಬಿದಿರೆಗೂ ಇರುವ ನಂಟು ಐತಿಹಾಸಿಕ ಮಾತ್ರವಲ್ಲ ಅವಿಸ್ಮರಣೀಯವೂ ಹೌದು.ಅಶ್ವತ್ಥಪುರವೆಂಬ ದಕ್ಷಿಣದ ಅಯೋಧ್ಯೆ!
ದೇಶಸ್ಥ ಬ್ರಾಹ್ಮಣ ಸಮಾಜ ಬಾಂಧವರ ಅತಿಶಯ ಕ್ಷೇತ್ರ ಮೂಡುಬಿದಿರೆ ತಾಲೂಕಿನ ಅಶ್ವತ್ಥಪುರದಲ್ಲಿ ಸಾಲಿಗ್ರಾಮ ಶಿಲೆಯ ಸುಂದರ ಸೀತಾ ಲಕ್ಷ್ಮಣ ಸಹಿತ ಶ್ರೀರಾಮಚಂದ್ರ ಮೂರ್ತಿ ಕಣ್ಮನ ಸೆಳೆಯುವಂತಿದೆ. ರಾಮಾಯಣ ಕಾಲದಲ್ಲಿ ಸೀತಾನ್ವೇಷಣೆ ಸಂದರ್ಭ ಇದೇ ಸ್ಥಳದಲ್ಲಿ ಶ್ರೀರಾಮ ಲಕ್ಷ್ಮಣನೊಂದಿಗೆ ಕೆಲಕಾಲ ಇಲ್ಲಿ ತಂಗಿದ್ದ ಎಂಬ ಪ್ರತೀತಿ ಇದೆ. ಶ್ರೀಕ್ಷೇತ್ರ ಅಶ್ವತ್ಥಪುರದಲ್ಲಿ ಚೈತ್ರ, ಫಾಲ್ಗುಣದವರೆಗೆ ಉತ್ಸವಾದಿಗಳು ನಡೆಯುತ್ತವೆ. ಪ್ರತಿ ಏಕಾದಶಿಯಂದು ಶ್ರೀರಾಮನಿಗೆ ಪಂಡರಾಪುರ ಶ್ರೀ ವಿಠಲನ ಅಲಂಕಾರ ಮಾಡಲಾಗುತ್ತದೆ. ವರ್ಷದಲ್ಲಿ ನಾಲ್ಕು ಬಾರಿ ಅಖಂಡ ರಾಮನಾಮ ಸಪ್ತಾಹ, ಎಂಟು ದಿನಗಳ ಅಹೋರಾತ್ರಿ ನಾಮಸಂಕೀರ್ತನೆ ನಡೆಯುತ್ತದೆ. ಕೇರಳದ ಗುರುವಾಯೂರು ಹೊರತುಪಡಿಸಿದರೆ ದೇವಸ್ಥಾನದ ಧ್ವಜಸ್ಥಂಭ ದಕ್ಷಿಣ ಭಾರತದಲ್ಲೇ ಎರಡನೇ ಗರಿಷ್ಠ ಎತ್ತರ (೬೨ ಅಡಿ)ದ ಎಂಬ ಖ್ಯಾತಿಯದ್ದು. ಅಶ್ವತ್ಥಪುರದವರೇ ಆದ ರಥಶಿಲ್ಪಿ ಬಾಬುರಾಯ ಆಚಾರ್ಯರ ಅದ್ಭುತ ಕೈಚಳಕದಿಂದ ಮೂಡಿರುವ ಬ್ರಹ್ಮರಥದ ತುಂಬೆಲ್ಲ ರಾಮಾಯಣದ ಸಂಪೂರ್ಣ ಕಥಾನಕವನ್ನೇ ಹೆಣೆಯಲಾಗಿದೆ.