ಸಾರಾಂಶ
ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಉತ್ತರ ಕರ್ನಾಟಕದ ಪ್ರಮುಖ ಆರಾಧ್ಯ ದೈವವಾಗಿರುವ ಇಲ್ಲಿನ ಶ್ರೀ ಸಿದ್ಧಾರೂಢ ಮಠದ ಜಾತ್ರೆಯನ್ನು ಮತ್ತಷ್ಟು ಅಚ್ಚುಕಟ್ಟು ಮಾಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ "ಸ್ವಯಂ ಸೇವಕರಿಗೆ " ಗುರುತಿನ ಕಾರ್ಡ್ ವಿತರಿಸುತ್ತಿದೆ. ಸದ್ಯ ಸೇವಾ ಕಾರ್ಡ್ ಕೊಡುತ್ತಿದ್ದು, ಮುಂದೆ ಭಾವಚಿತ್ರ ಅಂಟಿಸಿ ಗುರುತಿನ ಚೀಟಿ ನೀಡುವ ಯೋಚನೆ ಮಠದ ಟ್ರಸ್ಟ್ ಕಮಿಟಿಯದ್ದು.
ಹುಬ್ಬಳ್ಳಿ ಎಂದರೆ ಸಿದ್ಧಾರೂಢ. ಸಿದ್ಧಾರೂಢ ಎಂದರೆ ಹುಬ್ಬಳ್ಳಿ ಎಂಬ ಮಾತಿದೆ. ಪ್ರತಿ ಶಿವರಾತ್ರಿ ವೇಳೆ ನಡೆಯುವ ಅಜ್ಜನ ಜಾತ್ರೆ ಅತ್ಯದ್ಭುತ. ಇಲ್ಲಿ ಸ್ವಯಂಪ್ರೇರಕರಾಗಿ ಸೇವೆ ಮಾಡುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಯಾರೂ ಎಲ್ಲಿ ಬೇಕೋ ಅಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ.ವರ್ಷದಿಂದ ವರ್ಷಕ್ಕೆ ಜಾತ್ರೆಗೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜತೆ ಜತೆಗೆ ಸ್ವಯಂ ಸೇವಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೂ ಭಕ್ತರಿಗೆ ಸಕಲ ವ್ಯವಸ್ಥೆ ಮಾಡುವುದು ಕಷ್ಟವೇ ಆಗುತ್ತದೆ. ಅಷ್ಟೊಂದು ಜನಜಂಗುಳಿ ಇಲ್ಲಿ ಇರುತ್ತದೆ. ಹಾಗಂತ ಸ್ವಯಂ ಸೇವಕರ ಸಂಖ್ಯೆಯೇನೂ ಕಡಿಮೆ ಇರಲ್ಲ. ಅದು ಕೂಡ ಭರಪೂರಾಗಿಯೇ ಇರುತ್ತದೆ. ಆದರೆ ಯಾರೂ ಎಲ್ಲಿ ಸೇವೆ ಸಲ್ಲಿಸಬೇಕು ಎಂಬುದು ಗೊತ್ತಾಗದೇ ಸ್ವಯಂ ಸೇವಕರು ಮನಸು ಬಂದಲ್ಲಿ ಸೇವೆ ಸಲ್ಲಿಸುತ್ತಾರೆ. ಕೆಲ ತಂಡ ಊಟ ಬಡಿಸುವುದಕ್ಕೆ ನಿಂತರೆ, ಕೆಲವರು ಭಕ್ತರನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ನೋಡಿಕೊಳ್ಳುವುದರಲ್ಲಿ ಬ್ಯುಜಿ ಆಗಿರುತ್ತಾರೆ. ಮತ್ತೆ ಕೆಲವರು ತೆಂಗಿನಕಾಯಿ ಒಡೆಯುವುದರೊಳಗೆ ನಿರತರಾಗಿರುತ್ತಾರೆ.
ಇದೆಲ್ಲವೂ ಅಚ್ಚುಕಟ್ಟಾಗಿಯೇ ಆಗುತ್ತದೆ. ಯಾವ ಸ್ವಯಂ ಸೇವಕರಿಗೆ ನಿಗದಿತ ಕೆಲಸದ ಬಗ್ಗೆ ಮಾಹಿತಿ ಇರುವುದಿಲ್ಲ. ಹೀಗಾಗಿ, ಕೆಲವೊಂದಿಷ್ಟು ಗೊಂದಲ, ಗೋಜಲು, ಗದ್ದಲ ನಡೆಯುತ್ತಲೇ ಇರುತ್ತದೆ.ಸೇವಾ ಕಾರ್ಡ್:
ಇದನ್ನು ತಪ್ಪಿಸುವ ಉದ್ದೇಶದಿಂದ ಸೇವಾ ಕಾರ್ಡ್ ಮಾಡಲಾಗುತ್ತಿದೆ. ಮಠದಲ್ಲಿ ಸರಿಸುಮಾರು 500ಕ್ಕೂ ಹೆಚ್ಚು ಜನ ಕಾಯಂ ಸ್ವಯಂ ಸೇವಕರಿದ್ದಾರೆ. ಅಂದರೆ ಮಠದ ಟ್ರಸ್ಟ್ ಕರೆಯಲಿ ಬಿಡಲಿ ಮಠಕ್ಕೆ ಬರುವುದು ಸೇವೆ ಮಾಡುವುದು ತಮ್ಮ ಪಾಡಿಗೆ ಮನೆಗಳಿಗೆ ಹೋಗ್ತಾ ಇರುವುದು. ಇನ್ನು ಸುಮಾರು 1000ಕ್ಕೂ ಹೆಚ್ಚು ಜನ ಗೋಕಾಕ, ತುಕ್ಕಾನಟ್ಟಿ, ಮುರ್ಕಿಬಾವಿ, ಸೇರಿದಂತೆ ವಿವಿಧೆಡೆಯಿಂದ ಏಳೆಂಟು ದಿನ ಮೊದಲಿಗೆ ಬಂದು ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.ಹೀಗೆ ಬರುವ ಸೇವಕರಿಗೆ ಮಠದ ಕಡೆ ಅಥವಾ ಸಿರಿವಂತ ಭಕ್ತರ ಕಡೆಯಿಂದ ಟೀಶರ್ಟ್, ಪಂಚೆ ಮತ್ತಿತರ ವಸ್ತುಗಳನ್ನೇನೋ ಕೊಡಲಾಗುತ್ತದೆ. ಅದನ್ನು ಗಮನಿಸಿದರೆ ಇವರ ಸ್ವಯಂ ಸೇವಕರು ಎಂದು ಗೊತ್ತಾಗುತ್ತದೆ.
ಆದರೆ ಇದೇ ಮೊದಲ ಬಾರಿಗೆ ಸೇವೆ ಸಲ್ಲಿಸುವವರಿಗೆ "ಆರೂಢ ಸೇವಾ ಕಾರ್ಡ್ " ಎಂದು ಕೊಡಲಾಗುತ್ತದೆ. ಇದಕ್ಕಾಗಿ ಮಠದ ಕಚೇರಿಯಲ್ಲಿ ನೋಂದಣಿ ಕೂಡ ಮಾಡಿಸಲಾಗುತ್ತಿದೆ. ಈ ವರೆಗೆ 200ಕ್ಕೂ ಅಧಿಕ ಜನ ನೋಂದಣಿ ಮಾಡಿಸಿ ಕಾರ್ಡ್ ಪಡೆದುಕೊಂಡಿದ್ದಾರೆ. ಇವರಲ್ಲಿ ಬಹುಸಂಖ್ಯಾತರು ಹುಬ್ಬಳ್ಳಿಗರೇ ಆಗಿದ್ದಾರೆ. ಹೀಗೆ ಕಾರ್ಡ್ ಪಡೆದವರಿಗೆ ಯಾವ ವಿಭಾಗದಲ್ಲಿ ಕೆಲಸ ಮಾಡಬೇಕು ಎಂಬುದನ್ನು ಮಠದ ಟ್ರಸ್ಟ್ ಕಮಿಟಿ ತಿಳಿಸುತ್ತದೆ. ಇದಕ್ಕಾಗಿ ಸ್ವಯಂ ಸೇವಕರ ಸಮಿತಿ ಎಂದು ಸಮಿತಿಯನ್ನೂ ರಚಿಸಲಾಗಿದೆ. ಇದು ತಾತ್ಕಾಲಿಕ ಕಾರ್ಡ್, ಜಾತ್ರೆ ಮುಗಿದ ಬಳಿಕ ಈ ಕಾರ್ಡ್‌ನ್ನು ಮರಳಿ ಕೊಡಬೇಕು. ಮುಂದೆ ಎರಡ್ಮೂರು ತಿಂಗಳ ಕಾಲ ಆ ಸ್ವಯಂ ಸೇವಕರ ನಡವಳಿಕೆ, ವರ್ತನೆ ಗಮನಿಸಿ ಮುಂದೆ ಅವರ ಭಾವಚಿತ್ರ ಅಂಟಿಸಿ "ಗುರುತಿನ ಚೀಟಿ " ಯನ್ನೇ ನೀಡುವ ಯೋಚನೆ ಮಠದ್ದು. ಕಾರ್ಡ್ ಪಡೆದು ಯಾವುದೇ ಬಗೆಯ ದುರುಪಯೋಗ ಪಡಿಸಿಕೊಳ್ಳಬಾರದೆಂಬ ಉದ್ದೇಶದಿಂದ ಆ ಸ್ವಯಂ ಸೇವಕನ ನಡವಳಿಕೆ ಗಮನಿಸಲಾಗುತ್ತಿದೆ ಎಂದು ಮಠದ ಟ್ರಸ್ಟ್ ಕಮಿಟಿ ತಿಳಿಸುತ್ತದೆ.ಎಲ್ಲ ಸ್ವಯಂ ಸೇವಕರಿಗೆ ಸದ್ಯ ಕಾರ್ಡ್ ಕೊಡಲು ಸಾಧ್ಯವಾಗದಿದ್ದರೂ ಹಂತ ಹಂತವಾಗಿ ಕಾರ್ಡ್ ನೀಡಲಾಗುತ್ತಿದೆ.
ಗುರುತಿನ ಚೀಟಿಇದೇ ಮೊದಲ ಬಾರಿಗೆ ಸ್ವಯಂ ಸೇವಕರ ನೋಂದಣಿ ಮಾಡಿಸಿಕೊಂಡು ಕಾರ್ಡ್ ಕೊಡಲಾಗುತ್ತಿದೆ. ಮುಂದೆ ಗುರುತಿನ ಚೀಟಿಯನ್ನು ನೀಡುವ ಯೋಚನೆ ಇದೆ. ಅಜ್ಜನ ಜಾತ್ರೆಯನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡುವ ಉದ್ದೇಶದಿಂದ ಈ ರೀತಿ ಹೊಸ ಬಗೆಯ ಪ್ರಯೋಗ ಮಾಡಲಾಗಿದೆ.
- ಶ್ಯಾಮಾನಂದ ಪೂಜೇರಿ, ಅಧ್ಯಕ್ಷರು, ಸ್ವಯಂ ಸೇವಕರ ನಿರ್ವಹಣೆ ಸಮಿತಿ,ಅಚ್ಚುಕಟ್ಟು
ಪರಸ್ಥಳದಿಂದ ಬರುವ ಸ್ವಯಂ ಸೇವಕರಿಗೆ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ನೂರಾರು ಜನ ಸ್ವಯಂ ಸೇವಕರು ಬರುತ್ತಾರೆ. ಆದರೆ ಕೆಲವರಿಗೆ ಯಾವ ಕೆಲಸ ಮಾಡಬೇಕು ಎಂಬುದು ಗೊತ್ತಾಗಲ್ಲ. ಹೀಗಾಗಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುವ ಉದ್ದೇಶದಿಂದ ಈ ಸಲ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ.- ಈರಣ್ಣ ತುಪ್ಪದ, ವ್ಯವಸ್ಥಾಪಕರು, ಮಠದ ಟ್ರಸ್ಟ್ ಕಮಿಟಿ