ಸಾರಾಂಶ
ಪಶುಗಣತಿ ಆಧಾರವಾಗಿ ಪಶು ಚಿಕಿತ್ಸಾಲಯಗಳನ್ನು ಮುಚ್ಚಲು ಮುಂದಾಗಿದ್ದು, ಬಡ ಹೈನುಗಾರರಿಗೆ ಸಮಸ್ಯೆ ಸೃಷ್ಟಿಸಿದೆ
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯ ಸರ್ಕಾರದ ಪಶು ಸಂಗೋಪನೆ ಇಲಾಖೆಯ ಜಿಲ್ಲೆಯ ಹೈನುಗಾರರ ಅಭಿಪ್ರಾಯ ಪಡೆಯದೇ 2019ನೇ ಸಾಲಿನ ಪಶುಗಣತಿ ಆಧಾರವಾಗಿ ಪಶು ಚಿಕಿತ್ಸಾಲಯಗಳನ್ನು ಮುಚ್ಚಲು ಮುಂದಾಗಿದ್ದು, ಬಡ ಹೈನುಗಾರರಿಗೆ ಸಮಸ್ಯೆ ಸೃಷ್ಟಿಸಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆರೋಪಿದ್ದಾರೆ.ಅವರು ನಗರದ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಪಶು ಸಂಗೋಪನೆ ಇಲಾಖೆಯ ನೂತನ ನಿಯಮಾವಳಿಗಳ ಸಾಧಕ ಬಾಧಕಗಳ ಬಗ್ಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಬದಲು ರಾಜ್ಯ ಸರ್ಕಾರ 6 ತಿಂಗಳಿಂದ ಹಾಲಿನ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಿಲ್ಲ, ಹಸುಗಳಿಗೆ ಮಾರಣಾಂತಿಕ ಕಾಯಿಲೆ, ಹಸಿರು ಮೇವು, ನೀರಿನ ಕೊರತೆ ಮುಂತಾದ ಸಮಸ್ಯೆಗಳಿಂದ ಹೈನುಗಾರರು ಸಂಕಷ್ಟ ಎದುರಿಸುತ್ತಿರುವಾಗ, ಸರ್ಕಾರ ಕೂಡಲೇ ಪಶು ಚಿಕಿತ್ಸಾಲಯಗಳನ್ನು ಮುಚ್ಚುವ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.ಸಭೆಯಲ್ಲಿ ಭಾಗವಹಿಸಿದ್ದ ಉಡುಪಿ ಬ್ರಹ್ಮಾವರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿಗಳು ಸರ್ಕಾರದ ನಿರ್ಧಾರವನ್ನು ಒಕ್ಕೊರಲಿನಿಂದ ವಿರೋಧಿಸಿದರು.ಸಭೆಯಲ್ಲಿ ಪಶು ಸಂಗೋಪನೆ ಉಪನಿರ್ದೇಶಕ ಡಾ. ರೆಡ್ಡಪ್ಪ, ಹಿರಿಯ ಪಶು ವೈದ್ಯಾಧಿಕಾರಿಗಳಾದ ಡಾ. ಪ್ರಶಾಂತ್ ಕುಮಾರ್ ಶೆಟ್ಟಿ, ಡಾ. ಪ್ರದೀಪ್, ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕರಾದ ರವಿರಾಜ ಹೆಗ್ಡೆ, ಸಾಣೂರು ನರಸಿಂಹ ನಾಯಕ್, ಬೋಳ ಸದಾಶಿವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಒಕ್ಕೂಟದ ನಿರ್ದೇಶಕರಾದ ಕಮಲಾಕ್ಷ ಹೆಬ್ಬಾರ್ ಸ್ವಾಗತಿಸಿ, ಶ್ಯಾಮ್ ಪ್ರಸಾದ್ ಭಟ್ ನಿರೂಪಿಸಿದರು.