ಸಾರಾಂಶ
ಗದಗ: ನಮ್ಮ ದೇಶದ ಪಂಚಾಯತ್ ವ್ಯವಸ್ಥೆಗೆ ಮಹತ್ವದ ಶಕ್ತಿ ಇದೆ, ಅದು ಹಲವಾರು ಬಾರಿ ಸಾಬೀತಾಗಿದೆ. ಇಂದಿಗೂ ಕೆಲವು ಗ್ರಾಮಗಳಲ್ಲಿನ ಜನರು ಠಾಣೆಗಳಿಗೆ ಬರದೇ ಸಮಸ್ಯೆ ಮುಕ್ತವಾಗಿ ಬದುಕುತ್ತಿದ್ದಾರೆ. ಇಂತಹ ಮಹತ್ವ ಹೊಂದಿರುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ರಾಜ್ಯಪಾಲ ಥಾವರ್‌ಚಂದ ಗೆಹಲೋತ್ ಹೇಳಿದರು.
ಬುಧವಾರ ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಳ್ಳಿಗಳನ್ನು ಸ್ವಾವಲಂಬಿ ಮತ್ತು ಸುಸಜ್ಜಿತವಾಗಿ ಮಾಡದಿದ್ದರೆ, ದೇಶದ ಸರಿಯಾದ ಮತ್ತು ಸಮತೋಲಿತ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಸಾರ್ವತ್ರಿಕವಾಗಿ ಒಪ್ಪಿಕೊಂಡ ಸತ್ಯವಾಗಿದೆ ಎಂದು ಹೇಳಿದರು.ಶಿಕ್ಷಣ, ಕೃಷಿ ಮತ್ತು ಇತರ ಉದ್ಯೋಗ ಸಂಬಂಧಿತ ಕೆಲಸಗಳನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಪ್ರತಿಯೊಂದು ಗ್ರಾಮ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಪಂಚಾಯತ್ ರಾಜ್ ವ್ಯವಸ್ಥೆಯು ಭಾರತೀಯ ದೃಷ್ಟಿಕೋನದಿಂದ ಬಹಳ ಪ್ರಾಚೀನ ಕಲ್ಪನೆಯಾಗಿದೆ. ನಮ್ಮ ಮೂರು ಹಂತದ ಆಡಳಿತ ವ್ಯವಸ್ಥೆಯಲ್ಲಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜತೆಗೆ ಸ್ಥಳೀಯ ಆಡಳಿತದ ಘಟಕವಾಗಿ ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಹೆಚ್ಚು ಅಧಿಕಾರವನ್ನು ನೀಡುವ ಮೂಲಕ ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ಹೇಳಿದರು. ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ಯುವಜನರು ವಲಸೆ ಬರುವುದು ಗಂಭೀರ ಸಮಸ್ಯೆಯಾಗಿದೆ. ಜನಹಿತ ಗ್ರಾಮೀಣ ಹಿತ ದೇಶದ ಹಿತಕ್ಕಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಗ್ರಾಮೀಣ ಅಭಿವೃದ್ಧಿಗಾಗಿ, ಪಂಚಾಯತ್ ರಾಜ್, ಶಿಕ್ಷಣ, ಕೃಷಿ ಮತ್ತು ಇತರ ಉದ್ಯೋಗ ಸಂಬಂಧಿತ ಕೆಲಸಗಳನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಬಹಳ ಮುಖ್ಯ ಎಂದರು.
ಗದಗ ಗ್ರಾಮೀಣಾಭಿವೃದ್ಧಿ ವಿವಿ ಭಾರತದಲ್ಲೇ ಒಂದು ವಿಶಿಷ್ಟವಾದ ವಿಶ್ವವಿದ್ಯಾಲಯವಾಗಿದೆ ಎಂದ ಅವರು ಗೌರವ ಡಾಕ್ಟರೆಟ್ ಪಡೆದವರನ್ನು ಅಭಿನಂದಿಸಿದರು.ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಪಂಚಾಯತ್‌ರಾಜ್ ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಟಿ.ಆರ್. ರಘುನಂದನ್, ವಿವಿ ಕುಲಪತಿ ವಿಷ್ಣುಕಾಂತ್ ಎಸ್. ಚಟಪಲ್ಲಿ ಹಾಜರಿದ್ದರು.