ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ರಾಜ್ಯದಲ್ಲಿಯೇ ಅತಿ ಹೆಚ್ಚು ಕೊಬ್ಬರಿ ಬೆಳೆಯುವ ತುಮಕೂರು ಜಿಲ್ಲೆಗೆ ನಫೆಡ್ ಮೂಲಕ ಕೊಂಡುಕೊಳ್ಳುವ ಕೊಬ್ಬರಿ ಪ್ರಮಾಣದ ಹಂಚಿಕೆಯ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಎಪಿಎಂಸಿ ರೈತ ಭವನದಲ್ಲಿ ರೈತ ಸಂಘದ ಸಾಮೂಹಿಕ ನಾಯಕತ್ವದ ರೈತ ಸಂಘ, ಹಸಿರು ಸೇನೆ, ಪ್ರಾಂತ್ಯ ರೈತ ಸಂಘದ ವತಿ ಯಿಂದ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಜಯಚಂದ್ರ ಶರ್ಮ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ 1,74,376 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು ಶೇ.65ರಷ್ಟು ತೆಂಗು ಬೆಳೆಗಾರರಿದ್ದಾರೆ. ಆದರೆ ತೋಟಗಾರಿಕೆಯ ವರದಿಯ ಎಡವಟ್ಟಿನಿಂದ ತುಮಕೂರು ಜಿಲ್ಲೆಗೆ ಕೊಬ್ಬರಿ ಹಂಚಿಕೆಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸರ್ಕಾರ ಈ ಬಾರಿ ಕೊಬ್ಬರಿ ನಾಫೆಡ್ ಮೂಲಕ ತುಮಕೂರು ಜಿಲ್ಲೆಗೆ 3 ಲಕ್ಷದ 50 ಸಾವಿರ ಕ್ವಿಂಟಾಲ್ ಕೊಂಡುಕೊಳ್ಳುವಂತೆ ಆದೇಶ ನೀಡಿದೆ. ಆದರೆ ನಮ್ಮ ಜಿಲ್ಲೆಗೆ 3 ಲಕ್ಷದ 78 ಸಾವಿರ ಕ್ವಿಂಟಲ್ ನಿಗಸಿಪಡಿಸಬೇಕಾಗಿದ್ದು, ಉಳಿದ 28 ಸಾವಿರ ಕ್ವಿಂಟಾಲ್ ಪ್ರಮಾಣದ ಕೊಬ್ಬರಿ ಖರೀದಿಯಿಂದ ವಂಚಿತವಾಗಿದೆ ಎಂದರು.ಶೇ.10ರಷ್ಟು ತೆಂಗು ಬೆಳೆಯುವ ಹಾಸನ ಜಿಲ್ಲೆಗೆ ನಮ್ಮ ಜಿಲ್ಲೆಯ ಪಾಲನ್ನು ಸಹ ವಿಂಗಡಿಸಿ ಕೊಡುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಹಾಸನ ಜಿಲ್ಲೆಗೆ 1.75 ಸಾವಿರ ಕ್ವಿಂಟಲ್ ಕೊಂಡುಕೊಳ್ಳುವಂತೆ ಸರ್ಕಾರ ಆದೇಶ ನೀಡಿದೆ. ಇದರ ಜೊತೆಗೆ ಶಾಸಕರು ಹಾಗೂ ಗೃಹ ಮಂಡಳಿ ಅಧ್ಯಕ್ಷರಾದ ಶಿವಲಿಂಗೇಗೌಡರು ಹೆಚ್ಚುವರಿಯಾಗಿ 50 ಸಾವಿರ ಕ್ವಿಂಟಾಲ್ ಕೊಬ್ಬರಿ ಖರೀದಿಗೆ ಅನುಮತಿ ದೊರಕಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಹೆಚ್ಚುವರಿ ಪ್ರಮಾಣ ತುಮಕೂರು ಜಿಲ್ಲೆಯದ್ದೆ ಎನ್ನಲಾಗುತ್ತಿದ್ದು, ಇದರಿಂದ ನಮ್ಮ ಜಿಲ್ಲೆಯ ತೆಂಗು ಬೆಳೆಗಾರರಿಗೆ ಅನ್ಯಾಯವಾ ಗಲಿದೆ. ಈ ಬಗ್ಗೆ ಯಾವ ಜನಪ್ರತಿನಿಧಿಗಳು ಚಕಾರವೆತ್ತದೆ ರಾಜಕೀಯ ಲಾಭಕ್ಕಾಗಿ ರೈತರನ್ನು ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರ ನಮ್ಮ ಜಿಲ್ಲೆಗೆ ಕೊಟ್ಟಿರುವ ಪಾಲನ್ನು ಯಾವುದೇ ಕಾರಣಕ್ಕೂ ನಾವು ಬಿಟ್ಟು ಕೊಡುವುದಿಲ್ಲ ಅಲ್ಲದೆ ರೈತರೊಡಗೂಡಿ ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಕೊಬ್ಬರಿ ಹೋರಾಟ ಸಮಿತಿ ಅಧ್ಯಕ್ಷ ಯೋಗೀಶ್ವರಸ್ವಾಮಿ ಮಾತನಾಡಿ, ಮುಕ್ತ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಇಳಿಕೆಯಾಗಿರುವ ಕಾರಣ ನಾಫೆಡ್ ಮೂಲಕ ಕೊಬ್ಬರಿ ಮಾರಾಟ ಮಾಡಿ ಲಾಭ ಸಿಗಲಿದೆ ಎಂದು ಆಸೆಯಿಂದ ರೈತರು ಕಷ್ಟಪಟ್ಟು ಸರದಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದರು.ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಮಾತನಾಡಿ, ನೋಂದಣಿ ಮಾಡಿಸಲು ಮಹಿಳೆಯರು ಬೀದಿಯಲ್ಲಿ ಮಲಗುವ ಸ್ಥಿತಿ ಸರ್ಕಾರ ತಂದಿದೆ. ಜಿಲ್ಲಾವಾರು ಹಂಚಿಕೆ ಹೆಚ್ಚಿಸಿರುವುದು ಸರಿಯಷ್ಟೆ ಆದರೆ ನಮಗೆ ಕೊಟ್ಟಿರುವ ಪಾಲಿನಲ್ಲಿ ಕಡಿಮೆಯಾದರೆ ಸುಮ್ಮನಿರುವುದಿಲ್ಲ. ಇಷ್ಟೆಲ್ಲಾ ಅನ್ಯಾಯವಾದರೂ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಂತಾಗಿದೆ. ಇದೇ ರೀತಿ ಮುಂದುವರೆದರೆ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಶ್ರೀಕಾಂತ್ ಕೆಳಹಟ್ಟಿ, ತಿಮ್ಲಾಪುರ ದೇವರಾಜು, ಮನೋಹರ್ ಪಟೇಲ್, ಶ್ರೀಹರ್ಷ, ರಾಜಮ್ಮ ಮತ್ತಿತರರಿದ್ದರು.