ಧರ್ಮಗ್ರಂಥ ಸುಟ್ಟಿದ್ದರೂ ಎಫ್ಐಆರ್ ದಾಖಲಿಸಲು ಹಿಂದೇಟು: ವಾಸಿಂ

| Published : Mar 07 2024, 01:47 AM IST

ಧರ್ಮಗ್ರಂಥ ಸುಟ್ಟಿದ್ದರೂ ಎಫ್ಐಆರ್ ದಾಖಲಿಸಲು ಹಿಂದೇಟು: ವಾಸಿಂ
Share this Article
  • FB
  • TW
  • Linkdin
  • Email

ಸಾರಾಂಶ

ಹೈದರಾಬಾದ್‌ನ ಅಯಲೇ ಅದೀಸ್ ಪಂಥದ ನೂರುದ್ದೀನ್ ಉಮೇರಿ ಎಂಬುವರು ಕಾರ್ಯಕ್ರಮಕ್ಕೆ ಸಂಬಂಧವೇ ಇಲ್ಲದ ಪ್ರಚೋದನಾಕಾರಿ ಭಾಷಣದಿಂದ ಪ್ರೇರಿತರಾದ ಶಾಲೆಯವರು ತಮ್ಮ ಶಾಲೆಯಿಂದ ಸುನ್ನಿ ಪಂಗಡದವರು ಅನುಸರಿಸುವ ಕುರಾನ್ ಪ್ರತಿಗಳ ಶಾಲಾವರಣದಲ್ಲಿ ಸುಟ್ಟು, ಚರಂಡಿಗೆ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರೂರು ಗ್ರಾಮದ ವಿಜ್ಹನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಫೆ.17ರಂದು ಮಕ್ಕಳ ಪಾಲನೆಯಲ್ಲಿ ತಾಯಂದಿರ ಪಾತ್ರ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಕುರಾನ್‌ ಹಾಗೂ ಮುಸ್ಲಿಮರ ಬಗ್ಗೆ ಅ‍ವಹೇಳನಕಾರಿಯಾಗಿ ಮಾತನಾಡಿ, ಮೂರು ದಿನದ ನಂತರ ಧರ್ಮಗ್ರಂಥ ಸುಟ್ಟು ಹಾಕಿದ್ದಾರೆ ಎಂದು ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ವಾಸಿಂ ಆರೋಪಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ, ಧರ್ಮಗ್ರಂಥ ಸುಟ್ಟು ಹಾಕಿದ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿದೆ. ವಿಜ್ಹನ್ ಇಂಟರ್ ನ್ಯಾಷನಲ್ ಶಾಲೆ ಆಡಳಿತ ಮಂಡಳಿಯ ಸಜ್ಜಾದ್ ಗೌಸ್‌, ನಸೀನ್‌, ಹಾಜೀರಾ ಹಾಗೂ ಇತರರು ಸೇರಿ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಹೈದರಾಬಾದ್‌ನ ಅಯಲೇ ಅದೀಸ್ ಪಂಥದ ನೂರುದ್ದೀನ್ ಉಮೇರಿ ಎಂಬುವರು ಕಾರ್ಯಕ್ರಮಕ್ಕೆ ಸಂಬಂಧವೇ ಇಲ್ಲದ ಪ್ರಚೋದನಾಕಾರಿ ಭಾಷಣದಿಂದ ಪ್ರೇರಿತರಾದ ಶಾಲೆಯವರು ತಮ್ಮ ಶಾಲೆಯಿಂದ ಸುನ್ನಿ ಪಂಗಡದವರು ಅನುಸರಿಸುವ ಕುರಾನ್ ಪ್ರತಿಗಳ ಶಾಲಾವರಣದಲ್ಲಿ ಸುಟ್ಟು, ಚರಂಡಿಗೆ ಹಾಕಿದ್ದಾರೆ. ಧರ್ಮಗ್ರಂಥ ಸುಡಲು ಶಾಲೆಯ ಅಸಾದುಲ್ಲಾ, ರಸೂಲ್ ಹಾಗೂ ಇತರೆಯವರು ಆದೇಶಿಸಿದ್ದು, ಸುಡಲು ಸಹಾಯ ಮಾಡಿದ್ದು ತಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.

ಧರ್ಮಗ್ರಂಥ ಸುಟ್ಟು ಹಾಕಿದವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ, ತನಿಖೆ ಕೈಗೊಳ್ಳಬೇಕಾದ ಪೊಲೀಸ್ ಇಲಾಖೆಯೇ ಮೌನಕ್ಕೆ ಶರಣಾಗಿದೆ. ಈ ಬಗ್ಗೆ ನೂರಾರು ಮುಸ್ಲಿಮರು ಪ್ರತಿಭಟಿಸಲು ಮುಂದಾದಾಗ ತೋರಿಕೆಗೆ ಪ್ರಕರಣ ದಾಖಲಿಸಿದ ಪೊಲೀಸರು ಅಮಾಯಕರ ಬಂಧಿಸಿ, ಪ್ರಕರಣ‍ ಮುಚ್ಚಿ ಹಾಕಿರುವಂತೆ ಕಂಡು ಬರುತ್ತಿದೆ ಎಂದರು.

ದಾವಣಗೆರೆ ಪೊಲೀಸರು ಈ‍ ವರೆಗೆ ಎರಡೂ ಶಾಲೆಗಳ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳ ಜಪ್ತಿ ಮಾಡದೇ, ಸಾಕ್ಷಿಗಳ ಕಲೆ ಹಾಕದೇ, ಶಾಲೆಯವರ ವಿಚಾರಣೆಗೆ ಒಳಪಡಿಸದೇ, ಪರೋಕ್ಷವಾಗಿ ಪ್ರಕರಣದ ಸಾಕ್ಷ್ಯನಾಶಕ್ಕೆ ಸಹಕಾರ ನೀಡುತ್ತಿರುವಂತೆ ಕಾಣುತ್ತಿದೆ. ಮಾ.1ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೂ ಈ ಬಗ್ಗೆ ದೂರು ನೀಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಬೇಕಾದೀತು ಎಂದು ಮೊಹಮ್ಮದ್ ವಾಸಿಂ ಎಚ್ಚರಿಸಿದರು.

ಸಂಸ್ಥೆಯ ಅಬ್ದುಲ್ ರಜಾಕ್‌, ಡಿ.ಕೆ.ನಯಾಜ್‌, ಸುಹೇಲ್ ಖಾನ್ ಇತರರಿದ್ದರು.

........................ಮುಸ್ಲಿಂ ಧರ್ಮಕ್ಕೆ ಅವಹೇಳನ ಮಾಡಿ, ಧರ್ಮಗ್ರಂಥ ಸುಡಲು ಪ್ರಚೋದನೆ ನೀಡಿ, ಧಾರ್ಮಿಕ ಭಾವನೆಗೆ ಧಕ್ಕೆ ತಂದು, ಸಮುದಾಯದ ಪಂಗಡಗಳ ಮಧ್ಯೆ ವೈಮನಸ್ಸು ಮೂಡಿಸಿ, ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿರುವ ನೂರುದ್ದೀನ್‌ ಉಮೇರಿ, ಸಜ್ಜಾದ್ ಗೌಸ್‌, ಅಸಾದುಲ್ಲಾ, ರಸೂಲ್ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ತಡ ಮಾಡಬಾರದು.

ಮೊಹಮ್ಮದ್ ವಾಸಿಂ

ಅಧ್ಯಕ್ಷ, ಭಾರತೀಯ ಮಾನವ ಹಕ್ಕುಗಳ ಸಂಸ್ಥೆ

............