ಸಾರಾಂಶ
ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಪತಿಯಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ.ಎಂ. ಮೇತ್ರಿ ಅವರು ನೇಮಕಗೊಂಡಿದ್ದು, ಬುಧವಾರ ಅಧಿಕಾರ ವಹಿಸಿಕೊಂಡರು.
ಪ್ರಭಾರ ಕುಲಪತಿಯಾಗಿದ್ದ ಪ್ರೊ. ವಿಜಯಕುಮಾರ್ ಬಿ. ಮಲಶೆಟ್ಟಿ ಅವರು ನೂತನ ಕುಲಪತಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ಮೇತ್ರಿ ಅವರ ಕುಟುಂಬ ಸದಸ್ಯರು, ಕುಲಸಚಿವ ಎಸ್.ಎನ್. ರುದ್ರೇಶ್ ಮತ್ತಿತರರಿದ್ದು ನೂತನ ಕುಲಪತಿಗಳಿಗೆ ಶುಭ ಹಾರೈಸಿದರು.ನೂತನ ಕುಲಪತಿಗಳ ಪರಿಚಯ: ಬಳ್ಳಾರಿ ವಿವಿಯ ಕುಲಪತಿಯಾಗಿ ನೇಮಕಗೊಂಡಿರುವ ಕೆ.ಎಂ. ಮೇತ್ರಿ ಅವರು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೌರ ಗ್ರಾಮದವರು. ಮೈಸೂರು ವಿವಿಯಲ್ಲಿ ಪಿಎಚ್‌ಡಿ ಪಡೆದಿದ್ದಾರೆ. 1996ರಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಯ ದೂರಶಿಕ್ಷಣ ವಿಭಾಗದ ನಿರ್ದೇಶಕ, ಪ್ರಭಾರ ಕುಲಪತಿಯಾಗಿಯೂ ಕಾರ್ಯನಿರ್ವಹಿಸಿದ್ದು, ಮೂರು ದಶಕಗಳ ಶೈಕ್ಷಣಿಕ ಸೇವಾನುಭವ ಹೊಂದಿದ್ದಾರೆ. ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅನೇಕ ಬುಡಕಟ್ಟು ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಬಳ್ಳಾರಿ ಹೊರವಲಯದ ಅಲೆಮಾರಿ ಸಮುದಾಯಗಳ ಗುಡಾರ ನಗರ ನಿರ್ಮಾಣ ಕಾರ್ಯದಲ್ಲಿ ಮೈತ್ರಿ ಅವರ ಸಾಕಷ್ಟು ಶ್ರಮಿಸಿದ್ದಾರೆ.
ಎಲೆಮರೆಯ ಕಾಯಿಯಂತಿದ್ದ ನಾಡೋಜ ಬುರ್ರಕಥಾ ದರೋಜಿ ಈರಮ್ಮ ಅವರನ್ನು ಬೆಳಕಿಗೆ ತರುವಲ್ಲಿ ಮೇತ್ರಿ ಅವರು ಪ್ರಮುಖ ಕಾರಣರು. ಈ ಹಿಂದಿನ ಕುಲಪತಿ ಪ್ರೊ. ಸಿದ್ದು ಪಿ.ಆಲಗೂರು ಅವರು 2023ರ ಮಾ. 1ರಂದು ನಿವೃತ್ತಿಯಾದ ಬಳಿಕ ಕುಲಪತಿಗಳ ನೇಮಕವಾಗಿರಲಿಲ್ಲ. ಹೀಗಾಗಿ ವಿವಿಯ ಪ್ರಾಧ್ಯಾಪಕರಾದ ಡಾ. ಅನಂತ ಎಲ್. ಝಂಡೇಕರ್, ಪ್ರೊ. ವಿಜಯಕುಮಾರ್ ಬಿ. ಮಲಶೆಟ್ಟಿ ಅವರು ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದರು.