ಬರ ಸಮಸ್ಯೆ ಎದುರಿಸಲು ಸನ್ನದ್ಧರಾಗಿ: ಡಾ.ಸುಶೀಲಾ

| Published : Mar 07 2024, 01:47 AM IST

ಬರ ಸಮಸ್ಯೆ ಎದುರಿಸಲು ಸನ್ನದ್ಧರಾಗಿ: ಡಾ.ಸುಶೀಲಾ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಲ್ಲಿ ಕುಡಿವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿ ತಾಲೂಕು ಮಟ್ಟದಲ್ಲಿ ‌ಕಂಟ್ರೋಲ್ ರೂಂ ತೆರೆದು, ಸಾರ್ವಜನಿಕ ಸಮಸ್ಯೆಗಳನ್ನು ತಮ್ಮ ಮನೆ ಸಮಸ್ಯೆಗಳೆಂದು ಭಾವಿಸಿ ಅಧಿಕಾರಿಗಳು ಸ್ಪಂದಿಸಿ ಬರ ಎದುರಿಸಲು ಸನ್ನದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಅವರು ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸುವ ಕುರಿತು ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಜನರೊಂದಿಗೆ ಸರಿಯಾದ ರೀತಿ ವರ್ತಿಸಿ, ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇರಬೇಕು. ನಿಮ್ಮ ವ್ಯಾಪ್ತಿಯಲ್ಲಿ ಸಮಸ್ಯೆ ಕಂಡು ಬಂದಾಗ ಸಂಬಂಧಿಸಿದ ಅಧಿಕಾರಿಗಳು ಗೈರಾಗಿದ್ದರೆ, ಅದಕ್ಕೆ ಅವರೇ ನೇರ ಹೊಣೆಗಾರರನ್ನಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಸೂಚನೆ ನೀಡಿದರು.

ಜಿಲ್ಲೆ ಆರು ತಾಲೂಕುಗಳನ್ನು ಸರ್ಕಾರವು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳನ್ನು ಗುರುತಿಸಿ ಆ ಗ್ರಾಮಗಳಿಗೆ ಶುದ್ಧ ಕುಡಿವ ನೀರು ಸರಬರಾಜು ಕುರಿತಂತೆ ಅಧಿಕಾರಿಗಳು ಆಯಾ ಗ್ರಾಮಗಳ ಜನರಿಗೆ ಸಂಪರ್ಕಿಸಿ ನೀರಿನ ಸಮಸ್ಯೆ ಪರಿಹಾರಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ನಿರ್ಲಕ್ಷ್ಯ ವಹಿಸಿದರೆ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಯಾಗುತ್ತೀರಿ ಎಂದು ತಿಳಿಸಿದರು.

ಗ್ರಾಮವಾರು ಜನರಿಗೆ ಕುಡಿವ ನೀರು ದಿನನಿತ್ಯ ಲಭ್ಯವಾಗುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ನೀರಿನ ಸಮಸ್ಯೆ ಪರಿಹರಿಸುವ ಕುರಿತಂತೆ ಆಯಾ ಗ್ರಾಮ ಪಂಚಾಯಿತಿ ಮೂಲಕ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲಿಸಬೇಕು. ಕೆಳ ಮಟ್ಟದ ಅಧಿಕಾರಿಗಳ ಮೇಲೆ ಅವಲಂಬನೆಯಾಗದೆ ಖುದ್ದಾಗಿ ಭೇಟಿ ನೀಡಿ ನೈಜ ಸ್ಥಿತಿ ಆಧಾರದ ಮೇಲೆ ಶುದ್ಧ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಯಾವ ಗ್ರಾಮ, ವಾರ್ಡ್ ಗಳಲ್ಲಿ ಸಮಸ್ಯೆ ಇದೆಯೋ ಅದಕ್ಕೆ ಬೇಕಾದ ಪ್ಲ್ಯಾನ್ ಮಾಡಿ, ಟ್ಯಾಂಕರ್ ಮೂಲಕ , ಖಾಸಗಿ ಬೋರ್ ವೆಲ್ ಗಳ ಮೂಲಕ ನೀರು ಪೂರೈಸಬೇಕು. ಅನಿವಾರ್ಯವಾಗಿ ಹೊಸ ಬೋರ್ ವೆಲ್ ಕೊರೆಯಬೇಕಾದರೆ ಅದಕ್ಕೂಸಮಿತಿ ರಚಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಆರ್ಸೆನಿಕ್, ಫ್ಲೋರೋಸಿಸ್ ಪ್ರದೇಶಗಳನ್ನು ಗುರುತಿಸಿ ಜನರಲ್ಲಿ ಸೂಕ್ತ ಅರಿವು ಮೂಡಿಸಬೇಕು. ಕುಡಿವ ನೀರಿಗೆ ಚರಂಡಿ ನೀರು ಸೇರಿ ಕಲುಷಿತಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ನೀರಿಗೆ ಸಂಬಂಧಿಸಿದಂತೆ ಬಾಕಿ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲು ವಿಶೇಷ ಗಮನ ಹರಿಸಬೇಕು. ನೀರಿನ ಮೂಲಗಳಾದ ಬೋರ್ ವೆಲ್, ಪ್ಲೇಸಿಂಗ್ ಸೇರಿ ಇನ್ನಿತರ ಮುಚ್ಚರಿಕೆ ಕ್ರಮ ಕೈಗೊಳ್ಳುವಂತೆ ಹಾಗೂ ನಗರಸಭೆ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಹ ಕುಡಿವ ನೀರು ಪೂರೈಕೆ ಬಗ್ಗೆ ಸೂಕ್ತ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ತಹಸೀಲ್ದಾರರು, ತಾಪಂ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇದ್ದರು.