ಶಿಸ್ತು ಬೆಳೆಸಲು ಸೇವಾದಳ ಅವಶ್ಯಕ

| Published : Jun 29 2024, 12:31 AM IST

ಸಾರಾಂಶ

ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಶಿಸ್ತು, ದೇಶಪ್ರೇಮ, ಭಾವೈಕ್ಯತೆ ಮೂಡಿಸಲು ಭಾರತ ಸೇವಾದಳದ ಘಟಕಗಳನ್ನು ಪ್ರಾಥಮಿಕ ಶಾಲಾ ಹಂತದಿಂದ ಆರಂಭಿಸಿರುವುದು ಶ್ಲಾಘನೀಯ ಎಂದು ಕ್ಷೇತ್ರಸಮನ್ವಾಧಿಕಾರಿ ಪಿ.ಯು.ರಾಠೋಡ ಹೇಳಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಶಿಸ್ತು, ದೇಶಪ್ರೇಮ, ಭಾವೈಕ್ಯತೆ ಮೂಡಿಸಲು ಭಾರತ ಸೇವಾದಳದ ಘಟಕಗಳನ್ನು ಪ್ರಾಥಮಿಕ ಶಾಲಾ ಹಂತದಿಂದ ಆರಂಭಿಸಿರುವುದು ಶ್ಲಾಘನೀಯ ಎಂದು ಕ್ಷೇತ್ರಸಮನ್ವಾಧಿಕಾರಿ ಪಿ.ಯು.ರಾಠೋಡ ಹೇಳಿದರು.

ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಭಾರತ ಸೇವಾದಳದ ಕಾರ್ಯಾಲಯದಲ್ಲಿ ಭಾರತ ಸೇವಾದಳದ ಜಿಲ್ಲಾ ಹಾಗೂ ತಾಲೂಕು ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಾರತ ಸೇವಾದಳದ ಶಿಕ್ಷಕರ ಪುನಶ್ಚೇತನ ಕಾರ್ಯಕ್ರಮದಲ್ಲಿ ಡಾ. ನಾ.ಸು.ಹರ್ಡೇಕರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿದ ನಂತರ ಮಾತನಾಡಿದ ಅವರು, ಭಾರತ ಸೇವಾದಳ ಸೇರಲು ವಿದ್ಯಾರ್ಥಿಗಳು ದೈಹಿಕ, ಭೌತಿಕವಾಗಿ ಸದೃಢರಾಗಿರಬೇಕು. ಅಲ್ಲದೇ ಮಾನಸಿಕ ಸ್ವಾಸ್ಥ್ಯದಿಂದ ಇರಬೇಕು. ಭಾರತ ಸೇವಾದಳದಿಂದ ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು, ಸಹೋದರತೆ, ಭಾವೈಕ್ಯತೆ, ನಾಯಕತ್ವ ಗುಣ, ಸಮಾನತೆ, ಸರಳತೆ, ಪ್ರಾಮಾಣಿಕತೆ, ದೇಶಪ್ರೇಮ,ಶಿಸ್ತು ಸೇರಿದಂತೆ ಅನೇಕ ಗುಣಗಳನ್ನು ವಿದ್ಯಾರ್ಥಿಗಳು ಕಲಿತುಕೊಳ್ಳುತ್ತಾರೆ. ಭಾರತ ಸೇವಾದಳದ ಶಿಕ್ಷಕರು ಇಂತಹ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಮೈಗೂಡಿಸಬೇಕೆಂದರು.

ಕಾರ್ಯಕ್ರಮ ಉದ್ಘಾಟಿಸಿದ ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯ ಶಿವನಗೌಡ ಬಿರಾದಾರ ಮಾತನಾಡಿ, ಭಾರತ ಸೇವಾದಳವು ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ತನ್ನದೇ ಪಾತ್ರ ವಹಿಸಿದೆ. ಈ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ದೇಶಪ್ರೇಮ, ಸಹೋದರತೆ, ಭಾವೈಕ್ಯತೆ ಕುರಿತು ಇಂದು ನಾಡಿನಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ಶಿಕ್ಷಕ ಬಾಂಧವರು ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳನ್ನು ಭವ್ಯ ಭಾರತದ ಸತ್ಪಜ್ರೆಗಳನ್ನಾಗಿ ರೂಪಿಸಬೇಕೆಂದರು.

ಭಾರತ ಸೇವಾದಳ ತಾಲೂಕು ಕಾರ್ಯದರ್ಶಿ ಆರ್‌.ಜಿ.ಅಳ್ಳಗಿ ಮಾತನಾಡಿ, ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ.ನಾ.ಸು.ಹರ್ಡೀಕರ್ ಅವರು ಹೋರಾಟಗಾರರಲ್ಲಿ ಸಂಘಟನೆ, ದೇಶಪ್ರೇಮದ ಜಾಗೃತಿ ಮೂಡಿಸಲು ತಾವೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಭಾರತ ಸೇವಾದಳ ಸಂಘವನ್ನು ಕಟ್ಟಿದರು. ಈ ಮೂಲಕ ಹೋರಾಟಗಾರರಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿದರು. ಶಿಸ್ತು, ಭಾವೈಕ್ಯತೆ ಪ್ರೇಮ ಮೂಡಿಸುವ ಮೂಲಕ ಮಾದರಿ ಸಂಘದ ರೂವಾರಿಗಳಾಗಿದ್ದಾರೆ. ನಾನು ನನ್ನ ಶಿಕ್ಷಕ ವೃತ್ತಿಯಲ್ಲಿ ಭಾರತ ಸೇವಾದಳ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗಿಯಾಗುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ನನ್ನ ಜೀವನದಲ್ಲೂ ಶಿಸ್ತು, ಪ್ರಾಮಾಣಿಕತೆ, ದೇಶಪ್ರೇಮ, ಭಾವೈಕ್ಯತೆ ಬಂದಿದೆ ಎಂದರು.

ಭಾರತ ಸೇವಾದಳದ ತಾಲೂಕು ಗೌರವಾಧ್ಯಕ್ಷ ಎಫ್.ಡಿ.ಮೇಟಿ ಮಾತನಾಡಿ, ಸೇವಾದಳವು ಶಿಸ್ತಿನ ಸಂಸ್ಥೆಯಾಗಿದೆ. ಹಿಂದುಸ್ತಾನ ಸೇವಾದಳದ ಹೆಸರಿನಿಂದ ೧೯೨೩ ರಲ್ಲಿ ಆರಂಭವಾಗಿ ೧೯೫೦ ರ ಮಾರ್ಚ್ ೧೬ ರಂದು ಭಾರತ ಸೇವಾದಳವಾಗಿ ರೂಪಗೊಂಡಿದೆ. ಇದು ಶತಮಾನೋತ್ಸವ ಆಚರಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳದ ತಾಲೂಕಾಧ್ಯಕ್ಷ ಎಸ್.ಐ.ಗಚ್ಚಿನವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ಅಶೋಕ ಗುಡದಿನ್ನಿ, ತಾಲೂಕು ಉಪಾಧ್ಯಕ್ಷ ಮನ್ನಾನ ಶಾಬಾದಿ, ತಾಲೂಕು ಸದಸ್ಯರಾದ ಎ.ಐ.ಮಠಪತಿ, ನಾಗಪ್ಪ ಕ್ವಾಟಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಅವಟಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ಪಿ.ನಾಗಾವಿ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎನ್.ಮಿಣಜಗಿ, ಆರ್.ಜಿ.ಅವರಾದಿ ಇತರರು ಇದ್ದರು. ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಪ್ರಾಸ್ತವಿಕವಾಗಿ ಮಾತನಾಡಿದರು. ಶಿವು ಮಡಿಕೇಶ್ವರ ಸ್ವಾಗತಿಸಿದರು. ಕೊಟ್ರೇಶ ಹೆಗ್ಡಾಳ ನಿರೂಪಿಸಿದರು. ಬಿ.ವ್ಹಿ.ಚಕ್ರಮನಿ ವಂದಿಸಿದರು. ಭಾರತ ಸೇವಾದಳದ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರದಲ್ಲಿ ಸುಮಾರು ೬೦ ಶಿಕ್ಷಕರು ಭಾಗವಹಿಸಿದ್ದರು.

----

ಕೋಟ್‌

ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಸಂಸ್ಥೆಯಾಗಿರುವ ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ, ರಾಷ್ಟ್ರ ರಕ್ಷಣೆಯ ಜಾಗೃತಿ ಮೂಡಿಸುತ್ತಿದೆ. ಭವಿಷ್ಯದ ಸತ್ಪ್ರಜೆಗಳಾಗಿ ರೂಪಿಸುವಲ್ಲಿ ಇದರ ಪಾತ್ರ ಹಿರಿದಾಗಿದೆ.

ವ್ಹಿ.ಬಿ.ಮರ್ತೂರ, ಭಾರತ ಸೇವಾದಳದ ತಾಲೂಕು ಕೋಶಾಧ್ಯಕ್ಷ, ನ್ಯಾಯವಾದಿ