ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸೇವೆಯ ಮೂಲಕ ಸಮಾಜದಲ್ಲಿ ಪರಿವರ್ತನೆ ತರಬೇಕು ಎಂಬ ಪರಿಕಲ್ಪನೆಯಲ್ಲಿ ಸೇವಾಭಾರತಿ ದೇಶಾದ್ಯಂತ ಕಾರ್ಯಮಾಡುತ್ತಿದೆ. ಕನ್ಯಾಡಿಯಲ್ಲಿನ ಸೇವಾಭಾರತಿ ರಾಷ್ಟ್ರಿಯ ಸ್ವಯಂಸೇವಕ ಸಂಘದ ಆಶಯದಂತೆ ಕೆಲಸ ಮಾಡುತ್ತಿದ್ದು ದೇಶಕ್ಕೇ ಮಾದರಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಹೇಳಿದರು.ಕನ್ಯಾಡಿ ಸೇವಾಭಾರತಿಯ 20ನೇ ವರ್ಷದ ಸಂಭ್ರಮದ ಅಂಗವಾಗಿ ಸೇವಾನಿಕೇತನದ ವಠಾರದಲ್ಲಿ ಗುರುವಾರ ನಡೆದ ಸುಮಾರು 3 ಕೋಟಿ ರು. ವೆಚ್ಚದ ಸೇವಾಧಾಮ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಯಾವತ್ತೂ ನಿರಾಶಾದಾಯಿಯಲ್ಲ. ಸಂಘವು ವಿಶ್ವಾಸ, ಛಲವನ್ನು ನೀಡುತ್ತದೆ. ಹೀಗಾಗಿ ಸಂಘದ ಪ್ರೇರಣೆಯಂತೆ ಸಂಕಲ್ಪ, ವಿಶ್ವಾಸದಿಂದ ಅನೇಕರು ಸಾಧನೆ ಮಾಡಿದ್ದಾರೆ. ಅಂತಹವರಲ್ಲಿ ಇಲ್ಲಿನ ವಿನಾಯಕ ರಾವ್ ಕೂಡ ಒಬ್ಬರು ಎಂದರು. ಇಲ್ಲೊಂದು ಪ್ರಕಲ್ಪದ ನಿರ್ಮಾಣಕ್ಕೆ ಹೆಜ್ಜೆ ಇಡಲಾಗಿದೆ. ಅದಕ್ಕೆ ಬೇಕಾದ ವ್ಯಕ್ತಿಗಳನ್ನು ಜೋಡಿಸಿಕೊಂಡು ಅದನ್ನು ಮುನ್ನಡೆಸುವ, ಗುರಿ ಮುಟ್ಟಿಸುವ ಪ್ರಯತ್ನ ನಡೆಯುತ್ತಿದೆ. ಹಿಂದೂ ಸಮಾಜ ನಿಮ್ಮೆಲ್ಲರ ನಂಬಿಕೆಗೆ ಯಾವುದೇ ಕುಂದು ತರುವುದಿಲ್ಲ. ನಿಮ್ಮ ಪ್ರಯತ್ನಕ್ಕೆ ಭಗವಂತನ ಸಹಕಾರ ಇದ್ದೇ ಇರುತ್ತದೆ ಎಂದರು.ಸಮಾರಂಭದಲ್ಲಿ ಸೇವಾಭಾರತಿ ಕರ್ನಾಟಕ ದಕ್ಷಿಣಪ್ರಾಂತ ಕಾರ್ಯದರ್ಶಿ ಚನ್ನಯ್ಯಸ್ವಾಮಿ, ಶಾಸಕ ಹರೀಶ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಪಿ. ಶ್ರೀನಿವಾಸ ರಾವ್, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ನವೀನ್ ವಜ್ರವೇಲು, ಸೆಲ್ಕೋ ಸೋಲಾರ್ ಲೈಟ್ ಪ್ರೈವೆಟ್ ಲಿಮಿಟೆಡ್ ಡಿಜಿಎಂ ಜಯಪ್ರಕಾಶ್ ಶೆಟ್ಟಿ, ಉಡುಪಿ ನಗರಸಭಾ ಸದಸ್ಯ ವಿಜಯ್, ಆರೋಗ್ಯಮ್ ವಿಭಾಗದ ಸಂಚಾಲಕ ಶ್ರೀಧರ ಕೆ.ವಿ., ಕನ್ಯಾಡಿ ಶ್ರೀ ದುರ್ಗಾಮಾತೃಮಂಡಳಿ ಅಧ್ಯಕ್ಷೆ ಶಾಂತಾ ಪಿ.ಶೆಟ್ಟಿ, ಎಂಜಿನಿಯರ್ ಸಂಪತ್ ರತ್ನ ಎಸ್. ರಾವ್, ಸೌತಡ್ಕ ಶ್ರೀಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಕೃಷ್ಣ ಭಟ್ ಕೊಕ್ಕಡ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಚೈತ್ರೇಶ್ ಇಳಂತಿಲ, ಸೇವಾಭಾರತಿ ಉಪಾಧ್ಯಕ್ಷ ಗಿರೀಶ್ ರಾವ್ ಕೆ.ಯು., ಕಾರ್ಯದರ್ಶಿ ಬಾಲಕೃಷ್ಣ ನೈಮಿಷ, ಟ್ರಸ್ಟಿಗಳಾದ ಕೃಷ್ಣಪ್ಪ ಗುಡಿಗಾರ್, ವಿಷ್ಣುಪ್ರಸಾದ್ ತೆಂಕಿಲ್ಲಾಯ, ಸೇವಾಧಾಮ ಸಂಚಾಲಕ ಕೆ. ಪುರಂದರ ರಾವ್, ನಿಕಟಪೂರ್ವ ಅಧ್ಯಕ್ಷರುಗಳಾದ ವತ್ಸಲ ಪಿ., ಹರೀಶ್ ರಾವ್ ಎಂ. ಉಪಸ್ಥಿತರಿದ್ದರು.
ಮಂಗಳೂರಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ಅವರನ್ನು ಗೌರವಿಸಲಾಯಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೇವಾಭಾರತಿ ಅಧ್ಯಕ್ಷೆ ಸ್ವರ್ಣಗೌರಿ ಸ್ವಾಗತಿಸಿದರು. ಖಚಾಂಚಿ ಕೆ. ವಿನಾಯಕ ರಾವ್ ಪ್ರಸ್ತಾವಿಸಿದರು.ಕನ್ಯಾಡಿಯಲ್ಲಿ 2ನೇ ಪುನಶ್ಚೇತನ ಕೇಂದ್ರ
ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕೊಕ್ಕಡದಲ್ಲಿರುವ ಪುನಶ್ಚೇತನ ಕೇಂದ್ರ ರಾಜ್ಯಕ್ಕೇ ಮಾದರಿಯಾಗಿದೆ. ಇದೀಗ ವಿಸ್ತರಿತ ಸೇವೆಗಾಗಿ ಸೇವಾಭಾರತಿಯ 20ನೇ ವರ್ಷದ ಸಂಭ್ರಮದಲ್ಲಿ ಎರಡು ಮಹತ್ವದ ಕಾರ್ಯಗಳನ್ನು ಆಯೋಜಿಸಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ಒತ್ತಡಗಾಯ ನಿರ್ವಹಣೆ ಮತ್ತು ಪುನಶ್ಚೇತನ ಕೇಂದ್ರವನ್ನು ಕರ್ನಾಟಕದಲ್ಲಿ 2ನೇ ಕೇಂದ್ರವನ್ನಾಗಿ ಪ್ರಾರಂಭಿಸಲಿದೆ. ಕರ್ನಾಟಕದಾದ್ಯಂತ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ಚೇತನವನ್ನು ಕಲ್ಪಿಸಿಕೊಡುವ ದೃಷ್ಟಿಯಿಂದ ಕನ್ಯಾಡಿಯಲ್ಲಿ ಸರಕಾರದಿಂದ ಮಂಜೂರಾದ ಜಾಗದಲ್ಲಿ ನೂತನ ಕಟ್ಟಡದ ನಿರ್ಮಾಣದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಕಟ್ಟಡದ ನೆಲಮಹಡಿಯ ನಿರ್ಮಾಣಕ್ಕಾಗಿ ಎಂ.ಆರ್.ಪಿ.ಎಲ್‌ನ ಸಿಎಸ್‌ಆರ್ ಫಂಡ್‌ನಿಂದ 42 ಲಕ್ಷ ಮಂಜೂರಾಗಿದೆ. ಇದು ರಾಷ್ಟ್ರಕ್ಕೇ ಮಾದರಿಯಾಗುವತ್ತ ಎಲ್ಲರ ಸಹಕಾರ ಬೇಕಾಗಿದೆ ಎಂದು ವಿನಾಯಕ ರಾವ್ ಕನ್ಯಾಡಿ ಹೇಳಿದರು.