ಕೊಪ್ಪಳ: ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮಾಜದ ಸಾಂಸ್ಕೃತಿಕ ನಾಯಕ. ಸಂತ ಸೇವಾಲಾಲ್ ತ್ಯಾಗದ ಫಲದಿಂದ ಬಂಜಾರ ಸಮುದಾಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಭಾನುವಾರ ಜರುಗಿದ ಸಂತ ಸೇವಾಲಾಲ್ ಮಹಾರಾಜರ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂತ ಸೇವಾಲಾಲ್ ಕರ್ನಾಟಕದ ಹಾವೇರಿ ಜಿಲ್ಲೆಯ ಸೂರಗೊಂಡನಕೊಪ್ಪದವರು. ಮಾರಿಕಾಂಬ ದೇವಿಯ ಆಶೀರ್ವಾದದಿಂದ ಸಂತರಾದರು.ಇವತ್ತು ರಾಜ್ಯದ ಎಲ್ಲ ತಾಂಡಾಗಳಲ್ಲಿ ಸೇವಾಲಾಲ್ ಜಯಂತಿ ಆಚರಣೆ ಮಾಡುತ್ತಿದ್ದಾರೆ.ಸೇವಾಲಾಲ್ ಬಂಜಾರ ಸಮಾದಾಯಕ್ಕೆ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಜ್ಞಾನಾರ್ಜನೆ ಕಲಿಸಿಕೊಟ್ಟಿದ್ದಾರೆ ಎಂದರು.ಸೇವಾಲಾಲ್ ಮಹಾರಾಜರು ಕೇವಲ ಒಬ್ಬ ಸಂತನಲ್ಲ, ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದು,ಶೋಷಿತ ಸಮುದಾಯಗಳಿಗೆ ಅಸ್ಮಿತೆ ಮತ್ತು ಘನತೆ ತಂದುಕೊಟ್ಟ ಮಹಾನ್ ಇತಿಹಾಸ ಪುರುಷರು.ಇವರು ಮೂಢನಂಬಿಕೆ ವಿರೋಧಿಸಿ, ಪ್ರಕೃತಿ ಆರಾಧನೆ ಮತ್ತು ನೈತಿಕ ಬದುಕನ್ನು ಕಲಿಸಿದರು.ಸೇವಾಲಾಲ್ ದಾರಿ ನಮ್ಮೆಲ್ಲರಿಗೂ ದಾರಿದೀಪ. ಸೇವಾಲಾಲ್ ಲಕ್ಷಾಂತರ ಜನರಿಗೆ ಶಿಕ್ಷಣ ಮತ್ತು ಸಂಸ್ಕಾರದ ಮಹತ್ವ ತಿಳಿಸಿಕೊಟ್ಟು,ಅನ್ಯಾಯದ ವಿರುದ್ಧ ಹೋರಾಡುವ ಕೆಚ್ಚು ತುಂಬಿದ ಇತಿಹಾಸ ಪುರುಷರಾಗಿದ್ದಾರೆ ಎಂದರು.
ಹಿರಿಯ ಸಹಗ್ರಂಥಾಪಾಲಕ ಡಾ.ಮಲ್ಲಿಕಾರ್ಜುನ ಬಿ.ಮಾತನಾಡಿ, ಸಂತ ಸೇವಾಲಾಲ್ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಪರಿಶುದ್ಧ ಜೀವನ, ಸತ್ಯ ಮತ್ತು ಅಹಿಂಸೆಯ ಬೋಧನೆ ಸಾರಿದ,ಕ್ರಾಂತಿಕಾರಿ ಸಮಾಜ ಸುಧಾರಕ ಶ್ರೀಸಂತ ಸೇವಾಲಾಲ್ ಮಹಾರಾಜರು ಎಂದರು.
ಕಾಲೇಜಿನ ಬೋಧಕೇತರ ಸಿಬ್ಬಂದಿ ಗವಿಸಿದ್ದಪ್ಪ,ರುಕ್ಮಿಣಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ನರಸಿಂಹ ಇತರರಿದ್ದರು.