ಹಾವೇರಿ: ನಗರದ ಹೆಸ್ಕಾಂ ಆವರಣದ ಸಮುದಾಯ ಭವನದಲ್ಲಿ ಕ.ವಿ.ಪ್ರ.ನಿ. ಸಂಘ ಸ್ಥಳೀಯ ಸಮಿತಿ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಏಳು ನೌಕರರಿಗೆ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಳಗ್ಗೆ ಕಾರ್ಮಿಕ ಸ್ಮಾರಕಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಕ.ವಿ.ಪ್ರ.ನಿ ನೌಕರರ ಸಂಘದ ಮಾಜಿ ಕಾರ್ಯಾಧ್ಯಕ್ಷ ವಿಜಯಕುಮಾರ ಮುದಕಣ್ಣನವರ ಕಾರ್ಮಿಕ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸುರಕ್ಷಿತತೆಗೆ ನಮ್ಮ ನೌಕರರು ಹೆಚ್ಚಿನ ಆದ್ಯತೆ ನೀಡಬೇಕು. ಕಾರ್ಮಿಕ ಸಂಘಟನೆಗಳ ಹೊರತಾಗಿ ಆಡಳಿತ ಮಂಡಳಿಯವರೇ ಅತ್ಯುತ್ತಮ ಸೇವೆ ಸಲ್ಲಿಸಿದ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ಮಾಡಬೇಕು ಎಂದರು.ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ರೈತ ಕಾರ್ಮಿಕ, ಸೈನಿಕ, ಶಿಕ್ಷಕರೇ ದೇಶದ ನಾಲ್ಕು ಸ್ತಂಭಗಳು. ಇದರಲ್ಲಿ ಯಾವುದೇ ಸ್ತಂಭ ಕುಸಿದರೂ ವ್ಯವಸ್ಥೆ ಅವ್ಯಸ್ಥೆಯಾಗುತ್ತದೆ. ಹಾವೇರಿ ವೃತ್ತದ ವಿದ್ಯುತ್ ಇಲಾಖೆಯ ನೌಕರರು ಸೇವೆ ಅತ್ಯುತ್ತಮವಾಗಿದ್ದು, ಸಂಘಟನೆಯನ್ನು ಕಾಪಾಡಿಕೊಂಡಿದ್ದು ಶ್ಲಾಘನೀಯ ಎಂದರು. ಪ್ರಭಾರಿ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಬಿ. ಹೊಸಮನಿ ಮಾತನಾಡಿ, ಸದಾಕಾಲ ಅಗೋಚರ ಶಕ್ತಿಯೊಂದಿಗೆ ಕೆಲಸ ಮಾಡುವ ನಮ್ಮ ಲೈನ್‌ಮನ್‌ಗಳು ತಮಗೆ ಕೊಟ್ಟಿರುವ ಸುರಕ್ಷಿತಾ ಸಲಕರಣೆಗಳನ್ನು ಬಳಸಿ ಕೆಲಸ ಮಾಡಬೇಕು, ದಕ್ಷತೆಯಲ್ಲಿ ಪ್ರತಿ ಕುಟುಂಬದ ಸುರಕ್ಷತಿತತೆ ಅಡಗಿದೆ ಎಂದರು. ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಸಂಘಟನೆಯಲ್ಲಿಯೇ ಶಕ್ತಿ ಇದೆ. ಕೂಡಿ ನಡೆದರೆ ಯಶಸ್ಸು ಖಂಡಿತ. ಕಾರ್ಮಿಕರ ಒಗ್ಗಟ್ಟನ್ನು ಮುರಿಯುವ ಶಕ್ತಿಗಳಿಗಿಂತ ಕಾಯುವ ಸಂಕಲ್ಪವೇ ಮುಖ್ಯ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಾವೇರಿ ವೃತ್ತದ ಸಂಘಟನಾ ಕಾರ್ಯದರ್ಶಿ ಶಿವಾನಂದ ಹಾದಿಮನಿ ಮಾತನಾಡಿ, ನಮ್ಮಲ್ಲಿ ಒಗ್ಗಟ್ಟಿರುವುದರಿಂದಲೇ ಎಲ್ಲ ಬೇಡಿಕೆಗಳನ್ನು ಈಡೇರಿಸಿಕೊಂಡಿರುವೆವು. ನಾವು ಸಹ ಇಲಾಖೆಯ ಉನ್ನತಿಗಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸಂಘ ಮತ್ತು ಆಡಳಿತ ಮಂಡಳಿ ವ್ಯವಸ್ಥೆಯ ಎರಡು ಕಣ್ಣುಗಳು ಇದ್ದಂತೆ ಎಂದರು.ಈ ಸಂದರ್ಭದಲ್ಲಿ ಏಳು ಜನ ನೌಕರರಿಗೆ ಕಾರ್ಮಿಕ ಪ್ರಶಸ್ತಿಯನ್ನು ನೀಡಲಾಯಿತು. ನಗರ ಸಭೆಯ ವಾಲ್‌ಮನ್ ಬಿಷ್ಟಣ್ಣ ಹನುಮಂತ ಕೊರವರ ಮತ್ತು ಮಹಿಳಾ ಪ್ರತಿನಿಧಿ ನೀಲಮ್ಮ ಹಡಪದ ಅವರು ಒಳಗೊಂಡಂತೆ ಎಸ್. ಎಂ ಹಾವೇರಿ, ದಾದಾಪೀರ ಹಾವೇರಿ, ಅನೀಲಕುಮಾರ ಪತ್ತಾರ, ಮಹೇಶ ಹುಣಸಿಕಟ್ಟಿ ಹಾಗೂ ಎಸ್.ಕೆ ಕಬ್ಬೂರ ಅವರುಗಳನ್ನು ಸನ್ಮಾನಿಸಲಾಯಿತು. ಸಮಾರಂಭವನ್ನು ಉದ್ದೇಶಿಸಿ ಮೊಹ್ಮದ ಅಮಾನುಲ್ಲಾ, ಎ.ಕೆ. ಯಮನೂರ, ಎನ್.ಪಿ. ಹಾವೇರಿ, ಕೆ.ಎನ್. ಅಗಡಿ. ಓ. ಸತೀಶ, ಎಂ.ಕೆ. ತರಿಕೇರಿ ಮಾತನಾಡಿದರು. ಇತ್ತೀಚೆಗೆ ಗೌರವ ಡಾಕ್ಟರೇಟ್ ಪಡೆದ ಇಲಾಖೆಯ ನಿವೃತ್ತ ನೌಕರರು, ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ನಾಗರಾಜ ಬಿ. ಮಡ್ಲೂರ ಕಾರ್ಮಿಕ ಗೀತೆ ಹಾಡಿದರು. ಸ್ಥಳೀಯ ಸಮಿತಿಯ ಅಧ್ಯಕ್ಷ ಶಂಕರ ಕಾಳಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಎಚ್. ಸಿ. ಮರಿದ್ಯಾಮಣ್ಣನವರ ನಿರೂಪಿಸಿದರು. ಸಹ ಕಾರ್ಯದರ್ಶಿ ಎಂ.ಬಿ. ಮಿಶ್ರಿಕೋಟಿ ವಂದಿಸಿದರು.