ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪಕ್ಷ ವಿರೋಧಿ ಚಟುವಟಿಕೆ ಮತ್ತು ಪಕ್ಷದ ಸಾಂವಿಧಾನಿಕ ಶಿಸ್ತು ಉಲ್ಲಂಘನೆ ಮಾಡಿರುವ ಮಹಾಲಿಂಗಪುರ ಪುರಸಭೆ ಕೆಲ ಸದಸ್ಯರು ಹಾಗೂ ಮುಖಂಡರನ್ನು ಬಿಜೆಪಿಯಿಂದ ಗುರುವಾರ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತೇರದಾಳ ವಿಧಾನಸಭಾ ಮತ ಕ್ಷೇತ್ರದ ಬಿಜೆಪಿ ಗ್ರಾಮಿಣ ಮಂಡಳ ಅಧ್ಯಕ್ಷ ಸುರೇಶ ಅಕ್ಕಿವಾಟ ಹೇಳಿದರು.ಪಟ್ಟಣದ ಜಿಎಲ್ ಬಿಸಿ ಅತಿಥಿ ಗೃಹದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಚ್ಚಾಟನೆಯ ಪತ್ರಿಕಾ ಪ್ರಕಟಣೆ ಹೊರಡಿಸಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ಈಚೆಗೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆ ಕುರಿತು ಬಿಜೆಪಿ ಹಾಗೂ ಶಾಸಕ ಸಿದ್ದು ಸವದಿ ಅವರ ಬಗ್ಗೆ ಇತಿಮಿತಿ ಮೀರಿ ಸಾರ್ವಜನಿಕವಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಪಕ್ಷದ ಆಂತರಿಕ ವರ್ಚಸ್ಸಿಗೆ ಕುಂದು ತಂದಿರುವ ಕಾರಣ ಪುರಸಭೆಯ ಹಾಲಿ 4 ಜನ ಸದಸ್ಯರು ಹಾಗೂ 3 ಜನ ಮುಖಂಡರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.ಈ ಚುನಾವಣೆಯಲ್ಲಿ ಯುದ್ಧಕ್ಕೆ ಮೊದಲೆ ತಾವು ಶಸ್ತ್ರ ತ್ಯಜಿಸಿದಂತಾಗಲಿಲ್ಲವೆ ಎಂಬ ವರದಿಗಾರರ ಪ್ರಶ್ನೆಗೆ ಸ್ಥಳೀಯ ಭಾಜಪದ ಹಿರಿಯ ಮುಖಂಡರಾದ ಬಸನಗೌಡ ಪಾಟೀಲ್ ಉತ್ತರಿಸಿ, ಶಾಸಕರು, ನಾವು ನಮ್ಮ ಮುಖಂಡರು, ಕಾರ್ಯಕರ್ತರು ಸೇರಿ ನಮ್ಮ ಪಕ್ಷದ ಹಾಲಿ ಪುರಸಭೆ ಸದಸ್ಯರ ಜೊತೆಯಲ್ಲಿ ಸ್ಪರ್ಧಿಸುವ ಕುರಿತು ಸಭೆಯಲ್ಲಿ ತಿಳಿಸಲಾಗಿತ್ತು. ಆದರೂ ಅವರಿಂದ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಈ ಪ್ರಹಸನ ನಡೆದುಹೋಯಿತು ಎಂದು ವಿಷಾದಿಸಿದರು. ಅಷ್ಟಾದರೂ ಉಚ್ಚಾಟಿತರಿಗೆ ನಿರ್ದೇಶನ ನೀಡಿ ಆಗಿರುವ ಲೋಪ ದೋಷಗಳಿಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರೂ ಜಿಲ್ಲಾ ವರಿಷ್ಠರಿಗೆ ಆರೋಪ ಪತ್ರ ಸಲ್ಲಿಸಿ ಕ್ಷೇತ್ರ ಹಾಗೂ ಸ್ಥಳೀಯ ಪಕ್ಷಕ್ಕೆ ಮುಜುಗರವುಂಟಾಗುವಂತೆ ನಡೆದುಕ್ಕೊಂಡಿದ್ದಾರೆ ಎಂದರು.ಮಹಾಲಿಂಗಪುರ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ತೆರುವಾದ ಸ್ಥಾನಗಳಿಗೆ ಆಗಸ್ಟ್ 23 ರಂದು ಚುನಾವಣೆ ನಡೆದು ಕಾಂಗ್ರೆಸ್ ಪ್ರತಿ ಸ್ಪರ್ಧಿಯಾಗಿ ಭಾಜಪ ಪಕ್ಷದಿಂದ ಯಾವೋಬ್ಬ ಸದಸ್ಯರಿಂದ ನಾಮಪತ್ರ ಸಲ್ಲಿಕೆಯಾಗಲಿಲ್ಲ. ಸಹಜವಾಗಿ ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನ ಪುರಸಭೆ ಸದಸ್ಯ ಯಲ್ಲನ್ನಗೌಡ ಪಾಟೀಲ್ ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯೆ ಶೀಲಾ ರಾಜೇಶ್ ಭಾವಿಕಟ್ಟಿ ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಯಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. ಇದನ್ನು ಪ್ರಶ್ನಿಸಿ ಪತ್ರಿಕಾಗೋಷ್ಠಿ ನಡೆಸಿ ಹಾಗೂ ಜಿಲ್ಲಾಧ್ಯಕ್ಷರಿಗೆ ಆರೋಪ ಪತ್ರ ಸಲ್ಲಿಸಿದ ಪುರಸಭೆ ಕೆಲ ಸದಸ್ಯರು ಹಾಗೂ ಭಾಜಪ ಮುಖಂಡರನ್ನು ಅಮಾನತುಗೊಳಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಂಕರ ಹುನ್ನೂರ, ನಗರ ಘಟಕ ಅಧ್ಯಕ್ಷ ಮಹಾಲಿಂಗಪ್ಪ ಕುಳ್ಳೋಳ್ಳಿ, ಆನಂದ ಕಂಪು, ಶೇಖರ ಅಂಗಡಿ, ಅಶೋಕಗೌಡ ಪಾಟೀಲ್, ಶಿವಲಿಂಗ ಘಂಟಿ, ಜಿ ಎಸ್ ಗೊಂಬಿ, ಭಾಷಾ ಯಾದವಾಡ, ಈರಪ್ಪ ದಿನ್ನಿಮನಿ, ಶಿವಾನಂದ ಅಂಗಡಿ, ಭೀಮಶಿ ಗೌಂಡಿ, ವಿಷ್ಣುಗೌಡ ಪಾಟೀಲ್, ಅನೀಲ ಮಮದಾಪೂರ, ಶಿವನಗೌಡ ಪಾಟೀಲ, ವಿರೇಶ ಮುಂಡಗನೂರ, ಶಿವಭಸು ಗೌಂಡಿ, ಅರ್ಜುನ್ ಮೋಪಗಾರ, ಮಲ್ಲಪ್ಪ ಯರಡ್ಡಿ, ಬಸವರಾಜ ಹುಕ್ಕೇರಿ, ಸಂಗಪ್ಪ ಡೋಣಿ, ಮಹೇಶ ಜಿಡ್ಡಿಮನಿ, ಮಹಾಂತೇಶ ಪಾತ್ರೋಟ, ತಿಪ್ಪಣ್ಣ ಬಂಡಿವಡ್ಡರ ಮುಂತಾದವರಿದ್ದರು.
ಅಮಾನತುಗೊಂಡ ನಾಯಕರು:ಪುರಸಭೆ ಸದಸ್ಯರಾದ ರವಿ ಕಾಶಿನಾಥ ಜವಳಗಿ, ಪ್ರಹ್ಲಾದ್ ಅರ್ಜುನ್ ಸಣ್ಣಕ್ಕಿ, ಬಸವರಾಜ ಮಹಾಲಿಂಗಯ್ಯ ಹಿಟ್ಟಿನಮಠ, ಬಸವರಾಜ ಲಕ್ಕಪ್ಪ ಚಮಕೇರಿ, ಮುಖಂಡರಾದ ಮಹಾಲಿಂಗಪ್ಪ ಮುದ್ದಾಪೂರ, ಚೆನ್ನಪ್ಪ ರಾಮೋಜಿ ಮತ್ತು ಶಿವಾನಂದ ಹುನಿಶ್ಯಾಳ ಅಮಾನತುಗೊಂಡವರು.