ಸಾರಾಂಶ
ಕೊಪ್ಪಳ : ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ಸುಮಾರು 7 ಸಾವಿರ ವಿದ್ಯಾರ್ಥಿಗಳಿಗೆ ಮಾತೃಭಾಷೆ ಕನ್ನಡ ಓದಲು, ಬರೆಯಲು ಬರುತ್ತಿಲ್ಲ ಹಾಗೂ ಗಣಿತದ ಕನಿಷ್ಠ ಜ್ಞಾನವೂ ಇಲ್ಲ. ಅವರನ್ನು ಪಾಸ್ ಮಾಡುವಂತೆ ಸಿದ್ಧಪಡಿಸಲು ಹೇಗೆ ಸಾಧ್ಯ.
ಇಂತಹದೊಂದು ಮೂಲಭೂತ ಪ್ರಶ್ನೆಯನ್ನು ಕೊಪ್ಪಳ ಜಿಲ್ಲೆಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದವರು ಎತ್ತಿದ್ದು ಈ ಕುರಿತು ಅವರು ಕೊಪ್ಪಳ ಡಿಡಿಪಿಐ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಮನವಿ ಸಹ ಸಲ್ಲಿಸಿ, ಬುನಾದಿ ಶಿಕ್ಷಣ ವ್ಯವಸ್ಥೆ ಸರಿಪಡಿಸುವಂತೆ ಕೋರಿದ್ದಾರೆ.
ಪ್ರಾಥಮಿಕ ಶಾಲೆಯಲ್ಲಿ ಕಡ್ಡಾಯ ಶಿಕ್ಷಣ ಮತ್ತು ಶಾಲೆಗೆ ಬರದಿದ್ದರೂ ಹಾಜರಿ ಹಾಕಿ, ಪಾಸ್ ಮಾಡಿ, ತಳ್ಳುತ್ತಿರುವುದರಿಂದ ಹೀಗಾಗುತ್ತಿದೆ. ಪ್ರಾಥಮಿಕ ಶಾಲಾ ಹಂತದಲ್ಲಿ ಶಿಕ್ಷಣ ಗುಣಮಟ್ಟ ಕುಸಿದಿರುವುದಕ್ಕೆ ಇದು ಸಾಕ್ಷಿಯಾಗಿದೆ.
ಪ್ರಸಕ್ತ ವರ್ಷ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 23 ಸಾವಿರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಸರ್ಕಾರಿ ಮತ್ತು ಅನುದಾನ ಶಾಲೆಯಲ್ಲಿ ಓದುತ್ತಿರುವ 7 ಸಾವಿರ ವಿದ್ಯಾರ್ಥಿಗಳಿಗೆ ಕನ್ನಡವನ್ನು ಓದಲು, ಬರೆಯಲು ಬರಲ್ಲ. ಜೊತೆಗೆ ಗಣಿತದಲ್ಲಿ ಕೂಡಿಸುವುದು ಮತ್ತು ಕಳೆಯುವ ಲೆಕ್ಕ ಮಾಡದಷ್ಟು ಕನಿಷ್ಠರಾಗಿದ್ದಾರೆ.
ಇದು, ಕೇವಲ ಕೊಪ್ಪಳ ಜಿಲ್ಲೆಯ ಲೆಕ್ಕಾಚಾರ. ರಾಜ್ಯಾದ್ಯಂತ ಇದರ ಸಂಖ್ಯೆ ಇನ್ನು ಹಲವಾರು ಪಟ್ಟು ಇದೆ.
ಬೆಳಕಿಗೆ:
ಕಳೆದ ವರ್ಷ ಫಲಿತಾಂಶ ತೀವ್ರ ಕುಸಿದಿರುವುದರಿಂದ ಹೇಗಾದರೂ ಫಲಿತಾಂಶ ಮೇಲೆತ್ತಬೇಕು ಎಂದು ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರ ಮೇಲೆ ಅಧಿಕಾರಿಗಳಿಂದ ಒತ್ತಡ ಹಾಕಲಾಗುತ್ತಿದೆ.
ಇದರಿಂದ ಕೆರಳಿರುವ ಪ್ರೌಢಶಾಲಾ ಸಹ ಶಿಕ್ಷಕರ ಸಂಘದವರು ಓದಲು, ಬರೆಯಲು ಬಾರದೆ ಇರುವ ಹಾಗೂ ಗಣಿತದಲ್ಲಿ ಕೂಡಿಸುವುದು, ಕಳೆಯುವ ಲೆಕ್ಕ ಬಾರದಿರುವ ವಿದ್ಯಾರ್ಥಿಗಳನ್ನು ನಾವು ಹೇಗೆ ಪಾಸ್ ಮಾಡಿಸುವಂತೆ ಸಿದ್ಧ ಮಾಡಬೇಕು ಎಂದು ಆಕ್ಷೇಪ ಎತ್ತಿದ್ದಾರೆ. ಅಷ್ಟೇ ಅಲ್ಲ, ಈ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಡಿಡಿಪಿಐ ಹಾಗೂ ಕೊಪ್ಪಳ ಜಿಪಂ ಸಿಇಒಗೆ ಮನವಿ ಸಲ್ಲಿಸಿದ್ದಾರೆ.
ಆಗ ಪರಿಶೀಲನೆ ಮಾಡಿದಾಗ ಎಸ್ಸೆಸ್ಸೆಲ್ಸಿಯಲ್ಲಿರುವ ಮಕ್ಕಳ ಸ್ಥಿತಿಗತಿಯನ್ನು ಅರಿಯುವ ಪರೀಕ್ಷೆ ಮಾಡಿದ ಫಲಿತಾಂಶ ನೋಡಿದಾಗ ಇದೆಲ್ಲವೂ ಗೊತ್ತಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಇರುವ ವಿದ್ಯಾರ್ಥಿಗಳ ಪೈಕಿ 7 ಸಾವಿರ ವಿದ್ಯಾರ್ಥಿಗಳು ಹೀಗಿರುವುದು ಗೊತ್ತಾಗಿದೆ.ಮುಖ್ಯೋಪಾಧ್ಯಾಯರಿಗೆ ನೋಟಿಸ್:
ಪ್ರಾಥಮಿಕ ಹಂತದಲ್ಲಿಯೇ ಸರಿಯಾದ ಶಿಕ್ಷಣ ದೊರೆಯುತ್ತಿಲ್ಲ. ಪ್ರಾಥಮಿಕ ಶಾಲೆಯಲ್ಲಿರುವ ಏಳನೇ ತರಗತಿ ವಿದ್ಯಾರ್ಥಿಗಳಿಗೂ ಓದು, ಬರಹ ಗೊತ್ತಿರದ ಶೇ. 30ರಷ್ಟು ವಿದ್ಯಾರ್ಥಿಗಳು ಇದ್ದಾರೆ. ಇವರನ್ನು ತೇರ್ಗಡೆ ಮಾಡಿ, ಪ್ರೌಢಶಾಲೆಗೆ ಕಳುಹಿಸಲಾಗುತ್ತದೆ. ಹೀಗಾಗಿಯೇ ಸಮಸ್ಯೆಯಾಗತ್ತದೆ. ಆದ್ದರಿಂದ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಇಲ್ಲದಿರುವುದು ಕಂಡು ಬರುತ್ತಿದೆ. ಹೀಗಾಗಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಈ ದಿಸೆಯಲ್ಲಿ ನಿಗಾವಹಿಸಬೇಕು ಎಂದು ಕೊಪ್ಪಳ ಡಿಡಿಪಿಪಿ ನೋಟಿಸ್ ಜಾರಿ ಮಾಡಿದ್ದಾರೆ.
ಮಕ್ಕಳನ್ನು ಶಾಲೆಗೆ ಕರೆತರುವುದು, ಶಾಲೆಗೆ ಬಂದಿರುವ ಮಕ್ಕಳಿಗೆ ವಿಶೇಷ ಕಾಳಜಿ ನೀಡುವುದು, ಅವರಿಗೆ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಇರುವಂತೆ ನೋಡಿಕೊಳ್ಳುವ ಹೊಣೆ ನಿಮ್ಮದಾಗಿದೆ ಎಂದು ಎಚ್ಚರಿಕೆ ನೀಡಲಾಗಿದೆ.