ಸಾರಾಂಶ
ಕನ್ನಡಪ್ರಭ ವಾರ್ತೆ ಬೆಟ್ಟದಪುರಗ್ರಾಮದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಸಾವಿರಾರು ಭಕ್ತಾದಿಗಳ ಸನ್ನಿಧಿಯಲ್ಲಿ ಗುರುವಾರ ನೆರವೇರಿತು.ಗ್ರಾಮದ ಮಧ್ಯಭಾಗದಲ್ಲಿರುವ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಪೂಜೆ, ವಿಧಿ ವಿಧಾನಗಳು ನಡೆದ ಬಳಿಕ ವಿವಿಧ ಪುಷ್ಪಗಳಿಂದ ಅಲಂಕಾರರಗೊಂಡ ಬೆಳ್ಳಿ ಬಸಪ್ಪ, ವಿಘ್ನೇಶ್ವರ ಹಾಗೂ ಭ್ರಮರಾಂಬ ಸಮೇತ ಸಿಡಿಲು ಮಲ್ಲಿಕಾರ್ಜುನ ಉತ್ಸವ ಮೂರ್ತಿಗಳನ್ನು ಅಲಂಕರಿಸಲಾಯಿತು.ಸಿದ್ದಗಂಗಾಮಠದ ಸಿದ್ದಲಿಂಗ ಸ್ವಾಮೀಜಿ ಅವರು ನೂತನ ಗಣಪತಿ ರಥಕ್ಕೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕದ ಇತಿಹಾಸವೆಂದರೆ ಜಾತ್ರೆ, ಉತ್ಸವಗಳು ಹಬ್ಬಗಳು ಜನರ ನೆಮ್ಮದಿಯ ತಾಣಗಳಾಗಿವೆ. ರಥೋತ್ಸವಗಳನ್ನು ನಡೆಸುವುದರಿಂದ ರೈತರು ಮತ್ತು ನಾಡಿನ ಜನರಿಗೆ ಸಂತೋಷ, ನೆಮ್ಮದಿ, ಆರೋಗ್ಯದಂತಹ ಸನ್ನಿವೇಶಗಳಲ್ಲಿ ಜನರು ಉತ್ಸವ, ರಥೋತ್ಸವಗಳು ಮಾಡಿ ಸಂಬಂಧಗಳನ್ನು ವೃದ್ಧಿಸುವ ಒಂದು ವಿಶಿಷ್ಟ ಸನ್ನಿವೇಶವೆಂದು ತಿಳಿಸಿದರು.ಬೆಟ್ಟದಪುರದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಹಾಸನದ ತಣ್ಣೀರ್ ಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ವಿರಾಜಪೇಟೆಯ ಅರಮನೆ ಕಳಂಕೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕಿರಿ ಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ದಿಂಡಗಾಡ್ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ, ರಾವಂದೂರು ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ, ಕೆಸವತ್ತೂರು ಮಠದ ಈ ಬಸವರಾಜೇಂದ್ರ ಸ್ವಾಮೀಜಿ, ಶಿರದ್ನಳ್ಳಿ ಮಠದ ಶ್ರೀಗಳು ಸೇರಿದಂತೆ ಇನ್ನು ಹಲವಾರು ಮಠಾಧೀಶರು ಭಾಗವಹಿಸಿದ್ದರು.ರಥ ಬೀದಿಗಳಲ್ಲಿ ಮೆರವಣಿಗೆ ಮಾಡಿ, ವಿಶಿಷ್ಟವಾಗಿ ಅಲಂಕಾರ ಮಾಡಿದ ಮೂರು ರಥಗಳಲ್ಲಿ ಪ್ರತ್ಯೇಕವಾಗಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ನಂತರ ದೇವಾಲಯದ ಆವರಣದಲ್ಲಿ ನೂತನ ರಥ ನಿರ್ಮಾಣ ಮಾಡಿಕೊಟ್ಟ ದಾನಿಗಳಾದ ಬೆಮ್ಮತಿ ಸುರೇಶ್ ಮತ್ತು ಕುಟುಂಬದವರನ್ನು ಹಾಗೂ ರಥ ನಿರ್ಮಿಸಿದ ಶಿಲ್ಪಿ ಕೃಷ್ಣಚಾರ್ ಮತ್ತು ಇತರರನ್ನು ಸನ್ಮಾನಿಸಲಾಯಿತು.ನಂತರ ಅನ್ನದಾನ ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠದ ಶ್ರೀಗಳು ಚಾಲನೆ ನೀಡಿದರು.ಭಕ್ತಾದಿಗಳು ಹರ್ಷೋದ್ಗಾರದಿಂದ ರಥ ಎಳೆದು ತಮ್ಮ ಹರಕೆ ಸಮರ್ಪಿಸಿದರು, ನವ ದಂಪತಿಗಳು ಹಾಗೂ ಯುವಕರು ಹಣ್ಣು ದವನ ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.ಭಕ್ತಾದಿಗಳು ಬೆಟ್ಟ ಏರುವ ಮೂಲಕ ಬೆಟ್ಟದ ಮೇಲಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಗೆ ದೇವರ ಪೂಜೆ ಸಲ್ಲಿಸಿ ಪುನೀತರಾದರು.ಮಾಜಿ ಶಾಸಕ ಕೆ. ಮಹದೇವ್, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ತಹಸೀಲ್ದಾರ್ ನಿಸರ್ಗಪ್ರಿಯ, ಉಪ ತಹಸೀಲ್ದಾರ್ ಶಶಿಧರ್, ರಥೋತ್ಸವದ ಮತ್ತು ಜಾತ್ರೆಯ ಉಸ್ತುವಾರಿ ಆರ್.ಐ ಅಜ್ಮಲ್ ಪಾಷಾ, ಸ್ವಾಗತ ಸಮಿತಿಯ ತಾಪಂ ಮಾಜಿ ಸದಸ್ಯೆ ಅನಿತಾ ಶೆಟ್ಟಿ, ಕೂರ್ಗಲ್ ಶಿವಕುಮಾರ ಸ್ವಾಮಿ, ಶಿವದೇವ್, ಅನ್ನದಾನ ಸಮಿತಿಯ ಗಣೇಶ, ಗಿರೀಶ್, ಶಾಂತಕುಮಾರ್, ಮಹೇಶ್ ಇದ್ದರು.------------------