ಆರ್‌ಟಿಐ ಮೂಲಕ ಮಾಹಿತಿ ಕೇಳಲಾಗಿದ್ದು, ಎಲ್ಲ ದಾಖಲೆಗಳನ್ನು ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಅವ್ಯವಹಾರದ ಸಮಗ್ರ ತನಿಖೆ ನಡೆಸಬೇಕು. ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಹೋರಾಟ, ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಸಾಸಲು ಗ್ರಾಮದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದರೂ ಭಕ್ತರ ಕಾಣಿಕೆ ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದ ಸೋಮೇಶ್ವರ ದೇಗುಲದ ಎದುರು ಆಗಮಿಸಿದ ಗ್ರಾಮಸ್ಥರು, ಇಲಾಖೆಯಿಂದ ಭಕ್ತರ ಲಕ್ಷಾಂತರ ರು. ಹಣ ದುರ್ಬಳಕೆ ಆಗಿರುವ ದಾಖಲಾತಿ ಪ್ರದರ್ಶಿಸಿ ಪ್ರತಿಭಟಿಸಿದರು. ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸುವ ಭಕ್ತರು ಕಾಣಿಕೆ ರೂಪದಲ್ಲಿ ಲಕ್ಷಾಂತರ ರು. ಗಳನ್ನು, ಚಿನ್ನಾಭರಣ ಕಾಣಿಕೆ ರೂಪದಲ್ಲಿ ಹುಂಡಿಗೆ ಹಾಕುತ್ತಾರೆ. ಆದರೆ, ಭಕ್ತರಿಗೆ ಕನಿಷ್ಠ ಸೌಲಭ್ಯವನ್ನು ಇಲಾಖೆ ನೀಡುತ್ತಿಲ್ಲ. ಮುಜರಾಯಿ ಇಲಾಖೆ ಬ್ಯಾಂಕ್‌ ಖಾತೆಯ ಲಕ್ಷಾಂತರ ರು.ಗಳನ್ನು ಬೋಗಸ್ ಬಿಲ್ ತಯಾರಿಸಿ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.

ಕೋವಿಡ್ ವೇಳೆ ಹಾಗೂ ಹಳೆಯದಾದ ರಥ ನವೀಕರಣವಾಗದೆ ಜಾತ್ರೆ ನಡೆಯದಿದ್ದರೂ ಜಾತ್ರೆ ನೆಪದಲ್ಲಿ ಐದಾರು ವರ್ಷಗಳಿಂದ ಪ್ರತಿ ವರ್ಷ ಜಾತ್ರಾ ನಿರ್ವಹಣಾ ವೆಚ್ಚದ ನೆಪದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಹಣವನ್ನು ಅಧಿಕಾರಿಗಳು ಜಾತ್ರೆಗೆ ಖರ್ಚು ತೋರಿಸಿದ್ದಾರೆ ಎಂದು ಕಿಡಿಕಾರಿದರು.

ಗ್ರಾಮ ಮುಖಂಡ ಮಹದೇವು ಮಾತನಾಡಿ, ದೇಗುಲ ಜೀರ್ಣೋದ್ಧಾರಕ್ಕಾಗಿ 2 ವರ್ಷಗಳ ಹಿಂದೆ ಕಾಮಗಾರಿ ಆರಂಭವಾಗಿ 2 ಕೋಟಿ ರು. ಬಿಡುಗಡೆಯಾಗಿದೆ. ಗ್ರಾಮಸ್ಥರು ಭಕ್ತರ ಸಹಕಾರದಲ್ಲಿ ಮುಜರಾಯಿ ಇಲಾಖೆ ಹಣ ಬಳಸದೆ ಒಂದು ಸಣ್ಣಕೊಠಡಿ(10*10) ನಿರ್ಮಿಸಿ ಮೇಲ್ಚಾವಣೆಗೆ ಷೀಟು ಹೊದಿಸಿ ದೇವರಿಗೆ ಕಳಾಕರ್ಷಣೆ ಮಾಡಿದ್ದಾರೆ. ಆದರೆ, ಬಾಲಾಲಯವನ್ನು ಮುಜರಾಯಿ ಇಲಾಖೆಯೇ ನಿರ್ಮಿಸಿದೆ ಎಂದು ಪಾಯ, ಮಣ್ಣು ತೆಗೆಯಲು, ವಿದ್ಯುತ್ ಸಂಪರ್ಕಕ್ಕಾಗಿ 5 ಲಕ್ಷ ರು, ಕಳಾಕರ್ಷಣೆಗೆ 5 ಲಕ್ಷ ರು.ಬಿಡುಗಡೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕವಾಗಿ ನಕಲಿ ಬಿಲ್ ತಯಾರಿಸಿಕೊಂಡು ಹಣ ಪಡೆದಿದ್ದಾರೆ. ದೇಗುಲ ನವೀಕರಣವಾಗುತ್ತಿದ್ದರೂ ಕಾರ್ತಿಕ ಮಾಸದ ವಿದ್ಯುತ್ ದೀಪಾಲಂಕಾರ ಎಂದು ಲಕ್ಷಾಂತರ ರು. ಡ್ರಾ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಕರವೇ ಜಿಲ್ಲಾ ಉಪಾಧ್ಯಕ್ಷ ಸಾಸಲು ಗುರುಮೂರ್ತಿ ಮಾತನಾಡಿ, ದೇಗುಲ ರಿಪೇರಿ ನಡೆಯುತ್ತಿದೆ. ಕಾರ್ತಿಕ ಮಾಸದಲ್ಲಿ ಯಾವುದೇ ದೀಪಾಲಂಕಾರ ನಡೆದಿಲ್ಲ. ಆದರೂ 1 ಲಕ್ಷ ರು. ಗೂ ಮಿಗಿಲಾಗಿ ಹಣ ಬಿಡುಗಡೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ದೇಗುಲದ ಇತಿಹಾಸದಲ್ಲಿಯೇ ವರಮಹಾಲಕ್ಷ್ಮೀ ಹಬ್ಬ, ಸ್ವಾತಂತ್ರ್ಯ ದಿನಾಚರಣೆಯಲ್ಲಿ ದೀಪಾಲಂಕಾರ ಮಾಡಿಲ್ಲ. ಆದರೆ, 25 ಸಾವಿರಕ್ಕೂ ಹೆಚ್ಚು ಲೆಕ್ಕ ತೋರಿಸಲಾಗಿದೆ. ಸೋಮೇಶ್ವರ, ಶಂಭುಲಿಂಗೇಶ್ವರ 2 ದೇಗುಲ ಸೇರಿ ಒಂದೇ ರಸೀದಿ ಇದ್ದರೂ, ದೇವಸ್ಥಾನದ ರಸೀದಿ ಮುದ್ರಣಕ್ಕಾಗಿ ಸೋಮೇಶ್ವರ, ಶಂಭುಲಿಂಗೇಶ್ವರ ಹೆಸರಿನಲ್ಲಿ ಪ್ರತ್ಯೇಕವಾಗಿ ಹಣ ದುರ್ಬಳಕೆಯಾಗಿದೆ ಎಂದು ದಾಖಲೆ ಪ್ರದರ್ಶಿಸಿದರು.

ಗ್ರಾಮ ಮುಖಂಡ ಸುರೇಶ್ ಮಾತನಾಡಿ, ಈ ಬಾರಿ ಅಧಿಕಾರಿಗಳು ಪೂರ್ವಭಾವಿ ಸಭೆ ಮಾಡದೆ ದೇಗುಲ ಹುಂಡಿ ಎಣಿಕೆ, ಹರಾಜು ಪ್ರಕ್ರಿಯೆ ಮಾಡಲಾಗಿದೆ. ಪೂಜಾ ಸ್ಟೋರ್‍ಸ್ ಹೆಸರಲ್ಲಿ 12 ಲಕ್ಷ ರು, ಶಿವಕುಮಾರ್ ಹೆಸರಿಗೆ 5 ಲಕ್ಷ ರು.ಬಿಡುಗಡೆ, ದೇಗುಲದ ಒಂದೇ ರಸ್ತೆ ಕಾಮಗಾರಿಗೆ ದೇಗುಲದ ಬ್ಯಾಂಕ್‌ಖಾತೆ ಹಾಗೂ ನರೇಗಾ ಯೋಜನೆಯಲ್ಲಿ ಲಕ್ಷಗಟ್ಟಲೆ ಹಣ ಬಿಡುಗಡೆಯಾಗಿದೆ. ಯಾವುದಕ್ಕೂ ಕ್ರಿಯಾಯೋಜನೆ, ಅನುಮೋದನೆ, ಜಿಎಸ್‌ಟಿ ಬಿಲ್ ಇಲ್ಲವಾಗಿದೆ. ಎಲ್ಲವೂ ಬೋಗಸ್‌ ಆಗಿದೆ ಎಂದು ದೂರಿದರು.

ಆರ್‌ಟಿಐ ಮೂಲಕ ಮಾಹಿತಿ ಕೇಳಲಾಗಿದ್ದು, ಎಲ್ಲ ದಾಖಲೆಗಳನ್ನು ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಅವ್ಯವಹಾರದ ಸಮಗ್ರ ತನಿಖೆ ನಡೆಸಬೇಕು. ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಹೋರಾಟ, ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸುರೇಶ್, ರವಿ, ಶ್ರೀನಾಥ್, ಮನು, ಜಗದೀಶ್, ಮಹೇಶ್, ಮೋಹನ್ ಮತ್ತಿತರರಿದ್ದರು.