ಎಚ್‌ಐವಿ ಪೂರ್ಣ ನಿಯಂತ್ರಕ್ಕಾಗಿ ಹಲವಾರು ಯೋಜನೆ

| Published : Sep 21 2024, 01:53 AM IST

ಸಾರಾಂಶ

ಯುವಜನೋತ್ಸವ-2024ರ ಅಂಗವಾಗಿ ಜಿಲ್ಲಾಮಟ್ಟದಲ್ಲಿ ಎಚ್‌ಐವಿ ಏಡ್ಸ್ ತಡೆಗಟ್ಟಲು ತೀವ್ರಗೊಳಿಸಿದ ಐಇಸಿ ಪ್ರಚಾರ ಆಂದೋಲನದ ನಿಮಿತ್ತ ಅಂತರ್ ಪದವಿ ಕಾಲೇಜ್ 18ರಿಂದ 25 ವರ್ಷದೊಳಗಿನ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಕಬಡ್ಡಿ ಪಂದ್ಯಾವಳಿ ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.

ಕೊಪ್ಪಳ: ಯುವಜನೋತ್ಸವ-2024ರ ಅಂಗವಾಗಿ ಜಿಲ್ಲಾಮಟ್ಟದಲ್ಲಿ ಎಚ್‌ಐವಿ ಏಡ್ಸ್ ತಡೆಗಟ್ಟಲು ತೀವ್ರಗೊಳಿಸಿದ ಐಇಸಿ ಪ್ರಚಾರ ಆಂದೋಲನದ ನಿಮಿತ್ತ ಅಂತರ್ ಪದವಿ ಕಾಲೇಜ್ 18ರಿಂದ 25 ವರ್ಷದೊಳಗಿನ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಕಬಡ್ಡಿ ಪಂದ್ಯಾವಳಿ ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಹಾಗೂ ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜು ಟಿ. ಉದ್ಘಾಟಿಸಿದರು.

ಆನಂತರ ಮಾತನಾಡಿದ ಅವರು, ಎಚ್‌ಐವಿ-ಏಡ್ಸ್ ರೋಗಿಗಳ ಸಂಖ್ಯೆಯನ್ನು ಸೊನ್ನೆಗೆ ತರಲು ಸರ್ಕಾರ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ಸಮುದಾಯಕ್ಕೆ ಅರಿವು ಮೂಡಿಸಲಾಗುತ್ತಿದೆ. ಎಚ್‌ಐವಿ ಕಾಯಿಲೆ ಮುಖ್ಯವಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ, ಸಂಸ್ಕರಿಸದ ಸೂಜಿ ಮತ್ತು ಸಿರಂಜಿಗಳಿಂದ, ರಕ್ತ ಪರೀಕ್ಷೆ ಮಾಡದೇ ರಕ್ತ ಪಡೆಯುವುದರಿಂದ ಹಾಗೂ ಸೋಂಕಿತ ತಂದೆ-ತಾಯಿಯಿಂದ ಮಗುವಿಗೆ ಹರಡುತ್ತದೆ. ಹೆಚ್ಚಾಗಿ 15ರಿಂದ 29 ವರ್ಷದೊಳಗಿನ ಯುವಕರೇ ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ಕೈಗೊಂಡು ಪ್ರತಿಯೊಬ್ಬರಿಗೂ ಎಚ್‌ಐವಿ -ಏಡ್ಸ್ ಹರಡದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲು ಜಿಲ್ಲೆಯ ಎಲ್ಲ ಯುವಕರು ಎಚ್‌ಐವಿ -ಏಡ್ಸ್ ಬಗ್ಗೆ ಅರಿವು ಹೊಂದಬೇಕು ಎಂದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಶಶಿಧರ ಎ. ಮಾತನಾಡಿ, ಎಚ್‌ಐವಿ -ಏಡ್ಸ್ ರೋಗ ತಡೆಗಟ್ಟಲು ನಮ್ಮ ಜಿಲ್ಲೆಯಲ್ಲಿ ಈಗಾಗಲೇ ಶಾಲಾ-ಕಾಲೇಜುಗಳಲ್ಲಿ, ಸಮುದಾಯದಲ್ಲಿ ನಿರಂತರವಾಗಿ ಇಲಾಖೆಯ ಅಧಿಕಾರಿ, ಸಿಬ್ಬಂದಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಚ್‌ಐವಿ ಸೋಂಕಿತರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಪ್ರಕಾಶ ವಿ., ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ ಎಚ್., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ., ಜಿಲ್ಲಾ ಎಚ್‌ಐವಿ -ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಮೇಲ್ವಿಚಾರಕ ಮಹಾಂತೇಶ, ದೈಹಿಕ ಶಿಕ್ಷಣಾಧಿಕಾರಿಗಳು, ಉಪನ್ಯಾಸಕರು, ಆಪ್ತಸಮಾಲೋಚಕರು, ಎನ್‌ಜಿಒ ಪ್ರತಿನಿಧಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಆಪ್ತ ಸಮಾಲೋಚಕ ಅಂಬರೇಶ ಕಾರ್ಯಕ್ರಮ ನಿರೂಪಿಸಿದರು.