ಸಾರಾಂಶ
ಮುಂದಿನ ತಿಂಗಳುಗಳಲ್ಲಿ ಬರಗಾಲ ತೀವ್ರವಾಗುವ ಸಾಧ್ಯತೆಯಿದೆ. ಬರ ನಿರ್ವಹಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ 20 ಕೋಟಿ ರು. ವೆಚ್ಚದಲ್ಲಿ ಮೇವು ಮಿನಿ ಕಿಟ್ ವಿತರಣೆಗೆ ಸಂಪುಟದಲ್ಲಿ ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಮುಂದಿನ ತಿಂಗಳುಗಳಲ್ಲಿ ಬರಗಾಲ ತೀವ್ರವಾಗುವ ಸಾಧ್ಯತೆಯಿದೆ. ಈ ಸಮಸ್ಯೆ ಜನರಿಗೆ ತಟ್ಟದಂತೆ ಬರ ನಿರ್ವಹಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು.
ಈ ನಿಟ್ಟಿನಲ್ಲಿ 20 ಕೋಟಿ ರು. ವೆಚ್ಚದಲ್ಲಿ ಮೇವು ಮಿನಿ ಕಿಟ್ ವಿತರಣೆಗೆ ಸಂಪುಟದಲ್ಲಿ ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಿದ ಅವರು, ಮುಂದೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬರಗಾಲದ ತೀವ್ರ ಸಮಸ್ಯೆ ಎದುರಾಗಬಹುದು.
ಇದಕ್ಕೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಮೇವು ಸಾಲದೆ ಇದ್ದರೆ ಬೆಳೆಯಬೇಕು. ರೈತರಿಂದ ಕೊಂಡುಕೊಳ್ಳಬೇಕು.
ಮೇವಿಗೆ ಯಾವುದೇ ಕೊರತೆಯಾಗದಂತೆ ಎಚ್ಚರ ವಹಿಸಬೇಕು. ಬರ ನಿರ್ವಹಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದರು.
ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರು, ಉದ್ಯೋಗ, ಮೇವು ಲಭ್ಯತೆ ಖಾತರಿಪಡಿಸಿ. ಒಂದು ವಾರದೊಳಗೆ ಇನ್‌ಪುಟ್ ಸಬ್ಸಿಡಿ ಪಾವತಿ ಪೂರ್ಣಗೊಳಿಸಬೇಕು.
ಮೇವಿನ ಲಭ್ಯತೆಯನ್ನು ವಾಸ್ತವಾಂಶವನ್ನು ಆಧರಿಸಿ ಲೆಕ್ಕಾಚಾರ ಹಾಕಬೇಕು. ಮೇವಿಗೆ ಯಾವುದೇ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.
ರೇಷ್ಮೆ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆಯ ಫಾರಂಗಳಲ್ಲಿ ಮೇವು ಬೆಳೆಯಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಜನರು ಗುಳೆ ಹೋಗದಂತೆ ನೋಡಿಕೊಳ್ಳುವುದು ಹಾಗೂ ಇನ್‌ಪುಟ್ ಸಬ್ಸಿಡಿ ವಿತರಣೆ ಈ ನಾಲ್ಕು ಅಂಶಗಳನ್ನು ಮುಖ್ಯವಾಗಿ ಗಮನ ನೀಡಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.