ಸಾರಾಂಶ
ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ತಾಲೂಕಿನ ಆರು ಗ್ರಾಮಗಳನ್ನು ನೀರು ಸುತ್ತುವರಿದು ಜಲಾವೃತಗೊಂಡ ಹಿನ್ನೆಲೆಯಲ್ಲಿ ಜನ ಹಾಗೂ ಜಾನುವಾರುಗಳನ್ನು ರಕ್ಷಣೆ ಮಾಡುವ ಕಾರ್ಯವನ್ನು ಜಿಲ್ಲಾಡಳಿತ ನಿರ್ವಹಿಸುತ್ತಿದ್ದು ಮುಂದೆ ಯಾವುದೇ ರೀತಿ ಅನಾಹುತ ಸಂಭವಿಸಿದಂತೆ ಹೈ ಅಲರ್ಟ್ ಆಗಿದೆ.
ಕೊಳ್ಳೇಗಾಲ : ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ತಾಲೂಕಿನ ಆರು ಗ್ರಾಮಗಳನ್ನು ನೀರು ಸುತ್ತುವರಿದು ಜಲಾವೃತಗೊಂಡ ಹಿನ್ನೆಲೆಯಲ್ಲಿ ಜನ ಹಾಗೂ ಜಾನುವಾರುಗಳನ್ನು ರಕ್ಷಣೆ ಮಾಡುವ ಕಾರ್ಯವನ್ನು ಜಿಲ್ಲಾಡಳಿತ ನಿರ್ವಹಿಸುತ್ತಿದ್ದು ಮುಂದೆ ಯಾವುದೇ ರೀತಿ ಅನಾಹುತ ಸಂಭವಿಸಿದಂತೆ ಹೈ ಅಲಟ್ ಆಗಿದೆ.
ತಾಲೂಕಿನ ಹಳೆ ಹಂಪಾಪುರ, ಹಳೆ ಅಣಗಳ್ಳಿ, ದಾಸನಪುರ ಹಾಗೂ ಯಡಕುರಿಯ ಗ್ರಾಮಗಳ ಸುತ್ತ ನೀರು ಸುತ್ತುವರಿದ ಹಿನ್ನೆಲೆ ಜನ ಜೀವನ ಅಸ್ತವ್ಯಸ್ತವಾಗಿದೆ. ಮುಳ್ಳೂರು ಗ್ರಾಮದ ಗ್ರಾಪಂ ಕಟ್ಟಡ ಸೇರಿದಂತೆ 8 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ಜನರು ಮನೆ ಖಾಲಿ ಮಾಡಿಕೊಂಡು ಕಾಳಜಿ ಕೇಂದ್ರಗಳು ಹಾಗೂ ನೆಂಟರಿಷ್ಟರು, ಬಂಧುಗಳ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ದಾಸನಪುರ ಗ್ರಾಮದ ಎಲ್ಲಾ ಜನರನ್ನು ಕಾಳಜಿ ಕೇಂದ್ರಕ್ಕೆ ತಂದು ಅವರಿಗೆ ಊಟ ವಸತಿ ಹಾಗೂ ಇತರೆ ಸೌಲಭ್ಯಗಳನ್ನು ನೀಡಿ ಹಾರೈಕೆಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಅಗತ್ಯ ಕ್ರಮವಹಿಸಿದೆ. ಹಲವು ಗ್ರಾಮಗಳಲ್ಲಿದ್ದವರನ್ನು ಜಿಲ್ಲಾಧಿಕಾರಿಗಳೇ ಖುದ್ದು ಮನವೊಲಿಸಿ ಕಾಳಜಿ ಕೇದ್ರಕ್ಕೆ ಹಸ್ತಾಂತರಿಸುವಲ್ಲಿ ದಿಟ್ಟ ಕ್ರಮವಹಿಸಿದ್ದಾರೆ.
ತಾಲೂಕಿನ ಮುಳ್ಳೂರು, ಹಳೆ ಹಂಪಾಪುರ ಗ್ರಾಮಗಳಲ್ಲಿ ತಲಾ 1 ಪಟ್ಟಣದಲ್ಲಿ ಎರಡು ಕಾಳಜಿ ಕೇಂದ್ರಗಳನ್ನು ತೆರಯಲಾಗಿದ್ದು 545 ಜನರು ಕಾಳಜಿ ಕೇಂದ್ರದಲ್ಲಿ ಬೀಡು ಬಿಟ್ಟಿದ್ದಾರೆ. ಪಟ್ಟಣದ ಕಾಳಜಿ ಕೇಂದ್ರಗಳಿಗೆ ಒಂದೇ ಕಡೆ ಅಡಿಗೆ ಮಾಡಿ ಬಡಿಸುವ ವ್ಯವಸ್ಥೆ ಇರುವುದರಿಂದ ಊಟ ತಡವಾಗಿ ಸಿಗುತ್ತಿದೆ ಎಂಬ ಆರೋಪವೂ ಇದೆ. ಇದನ್ನ ಸರಿಪಡಿಸುವುದಾಗಿ ಜಿಲ್ಲಾಧಿಕಾರಿ ಸುದ್ದಿಗಾರರಿಗೆ ತಿಳಿಸಿದರು. ಜಲಾವೃತಗೊಂಡಿರುವ ಹಳೆ ಹಂಪಾಪುರ ಸೇರಿದಂತೆ ಇತರೆ ಗ್ರಾಮಗಳ ಜನರು ಪ್ರವಾಹ ಹಾಗೂ ಮಳೆ ಕಾರಣದಿಂದ ಕೂಲಿ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ನಮಗೆ ಊಟ ತಿಂಡಿ ವ್ಯವಸ್ಥೆ ಮಾಡಿಕೊಡಿ ಎಂದು ಒತ್ತಾಯಿಸುತ್ತಿದ್ದಾರೆ. ಗುರುವಾರ ದಾಸನಪುರದ ಮನೆಯಲ್ಲುಳಿದಿದ್ದ ಸಂತ್ರಸ್ತರನ್ನು ಬೋಟಿನಲ್ಲಿ ಕರೆತರಲಾಗಿದೆ.
ಮೇವು ಪೂರೈಕೆಯಲ್ಲಿ ವ್ಯತ್ಯಯ: ಹಳೆ ಅಣಗಳ್ಳಿ ಹಾಗೂ ಹಳೆ ಹಂಪಾಪುರ ಗ್ರಾಮಗಳ ರೈತರು ತಮ್ಮ ಜನ ಕರುಗಳನ್ನು ಗ್ರಾಮದಿಂದ ಹೊರಗೆ ತಂದಿಟ್ಟುಕೊಂಡಿದ್ದ ಮೇವು ಸಕಾಲದಲ್ಲಿ ಪೂರೈಕೆಯಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಪ್ರತಿ ಜಾನುವಾರಿಗೆ ತಲಾ 5 ಕೆಜಿಯಂತೆ ಒಣ ಮೇವು ಪೂರೈಕೆ ಮಾಡುತ್ತಿದ್ದು ಇದು ಸಾಲುವುದಿಲ್ಲ. ಹೆಚ್ಚು ಮೇವು ಕೊಡುವಂತೆ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಮುತ್ತುರಾಜ್ ಅವರನ್ನು ರೈತರು ಆಗ್ರಹಿಸಿದರು. ಈ ಬಾರಿ ಎರಡು ಜಲಾಶಯಳಿಂದ 2.50 ಲಕ್ಷ ಕ್ಯುಸೆಕ್ ವರಗೆ ನೀರು ಬಿಟ್ಟ ಪರಿಣಾಮ ಪ್ರವಾಹದ ಭೀಕರತೆ ಹೆಚ್ಚಾಗಿ ಜನರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಮುಳ್ಳೂರು ರಸ್ತೆಯಲ್ಲಿ ಸುವರ್ಣಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಸೇತುವೆ ಮುಳುಗಡೆಯಾಗಿರುವುದರಿಂದ ಕಲಿಯೂರು ಮುಳ್ಳೂರು ಗ್ರಾಮಗಳಿಗೆ ತೆರಳಬೇಕಾದ ರಸ್ತೆ ಬಂದ್ ಆಗಿ ಆ ಗ್ರಾಮಗಳ ಜನ ಪರದಾಡುವಂತಾಗಿದೆ. ದಾಸನಪುರ ಗ್ರಾಮವನ್ನು ನೀರು ಸುತ್ತುವರೆದಿರುವುದರಿಂದ ಸಂಚಾರ ಬಂದ್ ಮಾಡಿ ಕ್ರಮವಹಿಸಲಾಗಿದೆ.
ನೆರೆ ಪೀಡಿತ 6 ಗ್ರಾಮಗಳಿಗೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಭೇಟಿ ಮಾಡಿ ಜನರಿಗೆ ಧೈರ್ಯ ತುಂಬಿ ಕಾಳಜಿ ಕೇಂದ್ರಗಳಿಗೆ ಬರುವಂತೆ ಮನವಿ ಮಾಡಿ ಕರೆತಂದರು. ದಾಸನಪುರು ಗ್ರಾಮದ ಎಲ್ಲಾ ಜನರನ್ನು ಕಾಳಜಿ ಕೇಂದ್ರಗಳಿಗೆ ಕರೆ ತರಲಾಗಿದೆ. ಎರಡು ಜಲಾಶಯಳಿಂದ 2.20 ಕ್ಯುಸೆಕ್ ನೀರು ಬಿಡಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು ಹಾರಂಗಿ ಮತ್ತು ಹೇಮಾವತಿ ಜಲಾಶಯಗಳ ಹೊರ ಹರಿವು ಹೆಚ್ಚಾಗಿರುವುದರಿಂದ ಇನ್ನು ಎರಡು ದಿನ ಪ್ರವಾಹದ ಭೀತಿ ಮುಂದುವರೆಯಲಿದೆ. ಜನ ಜಾನುವಾರುಗಳ ಪ್ರಾಣಿ ಹಾನಿಯಾಗದಂತೆ ಕ್ರಮಹಿಸಲಾಗುತ್ತಿದೆ ಎಂದಿದ್ದಾರೆ.
ಸಂತ್ರಸ್ತರ ಸಂರಕ್ಷಣೆಗೆ ಅಗತ್ಯ ಕ್ರಮ: ನೆರೆ ಪ್ರವಾಹದಿಂದಾಗಿ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರ ರಕ್ಷಣೆಗಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ದಾಸನಪುರದಲ್ಲೇ ಉಳಿದವರನ್ನು ಬೋಟ್‌ನಲ್ಲಿ ಮನವೊಲಿಸಿ ಕಾಳಜಿ ಕೇಂದ್ರಕ್ಕೆ ಕರೆತರಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿದರು. ಮೈಸೂರು ಭಾಗಮಂಡಲದಲ್ಲಿ ಹೆಚ್ಚಿನ ಮಳೆ ಹಿನ್ನೆಲೆ ಕಬಿನಿಯಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಸಲಾಗುತ್ತಿದೆ. ಅದೇ ರೀತಿಯಲ್ಲಿ ಹೇಮಾವತಿ, ಹಾರಂಗಿ ಜಲಾಶಯಗಳಿಂದಲ್ಲೂ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿ ಬಿಡುತ್ತಿರುವ ಹಿನ್ನೆಲೆ ಅಗತ್ಯ ಕ್ರಮಕ್ಕೆ ತಮ್ಮ ತಂಡ ಶ್ರಮಿಸುತ್ತಿದೆ. ದಾಸನಪುರದಲ್ಲಿ ಉಳಿದಿದ್ದವರನ್ನು ತೆಪ್ಪದಲ್ಲಿ ಸಾಗಿಸಲಾಗಿದೆ. ಜನ, ಜಾನುವಾರು ರಕ್ಷಣೆಗೆ ಅಗತ್ಯ ಕ್ರಮವಹಿಸಲಾಗಿದೆ. ಯಾವುದೆ ಜೀವಕ್ಕೂ ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಹಾಗಾಗಿ ಹಳೆ ಹಂಪಾಪುರ, ಎಡಕುರಿಯೂ, ಮುಳ್ಳೂರಿನಲ್ಲೂ ನೀರಿನ ಪ್ರಮಾಣ ಏರಿಕೆ ಹಿನ್ನೆಲೆ ಅಗತ್ಯ ಕ್ರಮವಹಿಸಲಾಗಿದೆ. ಜಾನುವಾರುಗಳಿಗೆ ಸೂಕ್ತ ರೀತಿಯಲ್ಲಿ ಮೇವು ಪೂರೈಕೆ ಅದೇ ರೀತಿಯಲ್ಲಿ ಕಾಳಜಿ ಕೇಂದ್ರದಲ್ಲಿರುವವರಿಗೆ ಸಹ ಉತ್ತಮ ರೀತಿಯಲ್ಲಿ ಊಟೋಪಚಾರ, ಆರೋಗ್ಯದಲ್ಲಿ ವ್ಯತ್ಯಾಸವಾದರೆ ಅಗತ್ಯ ಔಷಧಿ ನೀಡಲು ಕ್ರಮವಹಿಸಲಾಗುತ್ತಿದೆ. ಅದೇ ರೀತಿಯಲ್ಲಿ ಇಂದು ಕರೆತರಲಾದವರನ್ನು ಬಿಪಿ, ಶುಗರ್ ಪರೀಕ್ಷೆಗೊಳಪಡಿಸಲಾಗಿದೆ. ಇಲ್ಲಿ ತನಕ 525ಕ್ಕೂ ಅಧಿಕ ಸಂತ್ರಸ್ತರನ್ನು ಕೇಂದ್ರಕ್ಕೆ ರವಾನಿಸಲಾಗಿದೆ. ರಕ್ಷಣಾ ಕಾರ್ಯದಲ್ಲಿ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಸ್ಪಂದಿಸುತ್ತಿದ್ದಾರೆ ಎಂದರು.
ಶಾಸಕರ ಭೇಟಿ ಪರಿಶೀಲನೆ:
ಶಾಸಕ ಎ.ಆರ್. ಕೃಷ್ಣಮೂರ್ತಿ ಇದೆ ವೇಳೆ ಸಂತ್ರಸ್ತರನ್ನು ಭೇಟಿ ಮಾಡಿ ದಾಸನಪುರ ಸೇರಿದಂತೆ ಹಲವು ಗ್ರಾಮಗಳಲ್ಲಿನ ನೀರಿನ ತೀವ್ರತೆ ಗಮನಿಸಿ ಹಂಪಾಪುರ ಗ್ರಾಮಸ್ಥರನ್ನು ಭೇಟಿ ಮಾಡಿ ಅಹವಾಲು ಆಲಿಸಿದ್ದಾರೆ. ಜಿಲ್ಲಾಡಳಿತ ಎಲ್ಲಾ ಹಂತದಲ್ಲೂ ಅಗತ್ಯ ಕ್ರಮವಹಿಸಲು ಸೂಚಿಸಲಾಗಿದೆ ಎಂದರು.
ಅನಂತ ಪದ್ಮನಾಭರ 25 ಎಕರೆ ಜಮೀನು, ಮನೆ, ಪಶು ಆಹಾರ ಜಲಾವೃತ ತಾಲೂಕಿನ ಸರಗೂರು ಸರ್ವೆ ವ್ಯಾಪ್ತಿಯ ನರೀಪುರ ಗ್ರಾಮದ ಅನಂತಪದ್ಮನಾಭ ಶೆಟ್ಟಿ ಎಂಬವರಿಗೆ ಸೇರಿದ 25 ಎಕರೆ ಜಮೀನು ಮತ್ತು ತೋಟದ ಮನೆ ನೀರಿನ ಪ್ರಮಾಣ ಏರಿಕೆಯಿಂದಾಗಿ ಸಂಪೂರ್ಣ ಮುಳುಗಡೆಯಾಗಿದ್ದು ಮನೆಯಲ್ಲಿ ಶೇಖರಿಸಿಟ್ಟಿದ್ದ ಸುಮಾರು 2 ಲಕ್ಷ ರು.ವೆಚ್ಚದ ಪಶು ಆಹಾರ ನೀರು ಪಾಲಾಗಿದೆ.
ಅನಂತಪದ್ಮನಾಭ ಶೆಟ್ಟಿ ಅವರು 30ಕ್ಕೂ ಹಚ್ಚು ಜಾನುವಾರನ್ನು ಸಾಕಿಕೊಂಡಿದ್ದರು. ಹೈನುಗಾರಿಗೆ ಜೊತೆ ಜಮೀನಿನಲ್ಲಿ ಜೋಳಗಕಟ್ಟಿ, ಹಾಗೂ ಉದ್ದನ್ನು 20 ಎಕರೆ ಜಮೀನಿನಲ್ಲಿ ಬೆಳೆದಿದ್ದರು. ಅವೆಲ್ಲವೂ ಅಧಿಕ ನೀರಿನ ಪ್ರಮಾಣದಿಂದಾಗಿ ನೀರಿನಲ್ಲಿ ಮುಳುಗಡೆಯಾಗುವುದರ ಜೊತೆಗೆ ಕಟಾವಿಗೆ ಬಂದಿದ್ದ ಬೆಳೆಯೂ ಹಾಳಾಗಿದೆ. ಸರ್ಕಾರ ನನ್ನ ಸಂಕಷ್ಟ ಮನಗಂಡು ಸೂಕ್ತ ಪರಿಹಾರ ನೀಡಬೇಕು ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪಶು ಆಹಾರಕ್ಕೆ ಶೇಖರಿಸಲಾಗಿದ್ದ ಪೀಡ್ಸ್‌ಗಳು, 20 ಎಕರೆಯಲ್ಲಿ ಬೆಳೆಯಲಾಗಿದ್ದ ಉದ್ದು, ಜೋಳಗ ಕಟ್ಟಿಗೂ ನೀರು ಪ್ರವೇಶಿಸಿದ ಹಿನ್ನೆಲೆ ಅವೆಲ್ಲವೂ ಮುಳುಗಡೆಯಾಗಿದೆ. ಲಕ್ಷಾಂತರ ರು. ನಷ್ಟದಿಂದ ನಾನು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ನೀರಿನ ಪ್ರಮಾಣ ದಿಢೀರ್ ಏರಿಕೆಯಿಂದಾಗಿ ನಮ್ಮ ಸಂಬಂಧಿಯೊಬ್ಬರ ಮನೆಗೆ ಕೆಲವು ಹಸುಗಳನ್ನು ಕಳುಹಿಸಿದ್ದು, ಉಳಿದ ಹಸುಗಳನ್ನು ರಸ್ತೆ ಬದಿಯಲ್ಲಿಯೇ ಇರಿಸಿಕೊಂಡಿದ್ದೇನೆ. ಜಿಲ್ಲಾಡಳಿತ ನನ್ನ ನೋವಿಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಿಕೊಡಬೇಕು.
- ಅನಂತ ಪದ್ಮನಾಭ ಶೆಟ್ಟಿ, ರೈತ