ಕೊಟ್ಟೂರೇಶ್ವರ ಜಾತ್ರೆಗೆ ತೀವ್ರ ನೀರಿನ ಕೊರತೆ

| Published : Mar 03 2024, 01:31 AM IST

ಸಾರಾಂಶ

ಕೊಟ್ಟೂರೇಶ್ವರ ಜಾತ್ರೆ ನಡೆಯುವ ವೇಳೆಯಲ್ಲೇ ಕೊಟ್ಟೂರು ಪಟ್ಟಣದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಪಟ್ಟಣಕ್ಕೆ ನೀರು ಪೂರೈಸುವ ಬನ್ನಿಗೋಳ ಜಾಕ್‌ವೆಲ್‌ನಲ್ಲಿ ನೀರು ಬತ್ತಲಾರಂಭಿಸಿದೆ.

ಜಿ. ಸೋಮಶೇಖರ

ಕೊಟ್ಟೂರು: ಇಲ್ಲಿಯ ಭಕ್ತರು ಕೊಟ್ಟೂರೇಶ್ವರ ಜಾತ್ರೆಗೆ ಸಂಭ್ರಮದಿಂದ ಸಿದ್ಧತೆ ನಡೆಸಿರುವಾಗಲೇ ಪಟ್ಟಣದಲ್ಲಿ ತೀವ್ರ ನೀರಿನ ಕೊರತೆ ಉಂಟಾಗಿದೆ.ಪಟ್ಟಣದಲ್ಲಿ ಐದು ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಜನರು ಈಗ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಜಾತ್ರೆಯ ಸಂಭ್ರಮಕ್ಕೆ ಪಾಲ್ಗೊಳ್ಳುವ ಲಕ್ಷಾಂತರ ಜನತೆಗೆ ನೀರಿನ ತೊಂದರೆ ಎದುರಾಗುವ ಎಲ್ಲ ಲಕ್ಷಣಗಳಿವೆ.ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಪಟ್ಟಣದಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆ 2007ರಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಗೋಳ ಬಳಿಯ ತುಂಗಭದ್ರಾ ನದಿಯ ಹಿನ್ನೀರು ಜಾಕ್‌ವೆಲ್‌ನಿಂದ ಪ್ರಾರಂಭಗೊಂಡಿತ್ತು. ಆದರೆ ಜಾಕ್‌ವೆಲ್‌ನಲ್ಲಿ ಈಗ ನೀರು ಬರಿದಾಗಿರುವ ಹಂತ ತಲುಪಿದೆ. ಹೀಗಾಗಿ ಮೂರು ಪಟ್ಟಣಗಳಲ್ಲಿ ನೀರಿನ ತೊಂದರೆ ಉಂಟಾಗಿದೆ.ಜನರಿಗೆ ಕುಡಿಯುವ ನೀರು ಪೂರೈಸುವ ಸವಾಲು ಸ್ಥಳೀಯ ಆಡಳಿತಕ್ಕೆ ಎದುರಾಗಿದ್ದು, ಶನಿವಾರದಿಂದ ಜಾತ್ರೆ ಅವಧಿಯಲ್ಲಿ ಪಟ್ಟಣದ 20 ವಾರ್ಡ್‌ಗಳಿಗೂ ಟ್ಯಾಂಕರ್‌ ಮೂಲಕ ಜನತೆಗೆ ನೀರು ಪೂರೈಸುವ ಪರ್ಯಾಯ ಯೋಜನೆ ಕೈಗೊಳ್ಳುವುದಾಗಿ ಪಪಂ ಮುಖ್ಯಾಧಿಕಾರಿ ಎ. ನಸರುಲ್ಲಾ ಹೇಳಿದ್ದಾರೆ. ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ಜನತೆಗೆ ನೀರು ಪೂರೈಸುತ್ತೇವೆ ಎಂದು ಹೇಳಿದ್ದಾರೆ. ಇದರ ಜತೆಗೆ ಜಾತ್ರೆಗೆ ಬರುವ ಜನತೆಗಾಗಿ ಪಟ್ಟಣದ 12 ಸ್ಥಳಗಳಲ್ಲಿ ಅರವಟ್ಟಿಗೆ ಪ್ರಾರಂಭಿಸುವ ಯೋಜನೆ ರೂಪಿಸಿದ್ದಾರೆ. ಸಿಂಟಾಲೂರು ಬ್ಯಾರೇಜ್‌ನಿಂದ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ನದಿ ಪಾತ್ರದಲ್ಲಿ ಮೋಟಾರ್‌ಗಳನ್ನು ಅಳವಡಿಸಿಕೊಂಡು ತಮ್ಮ ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಬನ್ನಿಗೋಳ ಜಾಕ್‌ವೆಲ್‌ಗೆ ನೀರು ಬರುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಕಾರಣಕ್ಕಾಗಿ ಬನ್ನಿಗೋಳ ಜಾಕ್‌ವೆಲ್‌ನಲ್ಲಿ ನೀರು ಬರಿದಾಗುವ ಹಂತ ತಲುಪಿದೆ ಎಂದು ಅವರು ಹೇಳುತ್ತಿದ್ದಾರೆ. ಕೊಟ್ಟೂರು ಜಾತ್ರೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕುಡಿಯುವ ನೀರು ಪೂರೈಸಲು ನೀರು ಬಿಡುಗಡೆ ಮಾಡುವಂತೆ ಸಿಂಗಟಾಲೂರು ನೀರಾವರಿ ಯೋಜನೆ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಶಾಸಕ ಕೆ. ನೇಮರಾಜ ನಾಯ್ಕ ಪತ್ರ ಬರೆದಿದ್ದಾರೆ. ಪರಿಸ್ಥಿತಿ ಸೂಕ್ತವಾಗಿ ನಿಭಾಯಿಸಲು ಸರ್ಕಾರ ಸಂಬಂದ ಪಟ್ಟವರಿಗೆ ಆದೇಶಿಸಬೇಕು ಎಂದು ಅವರು ಒತ್ತಡ ಹೇರಿದ್ದಾರೆ.ಕೊಟ್ಟೂರು ಜಾತ್ರೆಗೆ ಬರುವ ಜನತೆಗೆ ಮತ್ತು ಕೊಟ್ಟೂರು ಪಟ್ಟಣದವರಿಗೆ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆಯನ್ನು ಸ್ಥಳೀಯ ಆಡಳಿತ ಕೈಗೊಳ್ಳಬೇಕು ಎಂದು ಜನತೆ ಒತ್ತಾಯಿಸಿದ್ದಾರೆ.

ತುಂಗಭದ್ರಾ ಡ್ಯಾಂನಿಂದ 1 ಟಿಎಂಸಿ ನೀರು ಸಿಂಗಟಾಲೂರು ಬ್ಯಾರೇಜ್‌ಗೆ ಬರಬೇಕಿತ್ತು. ಈ ನೀರನ್ನು ನಂಬಿ ಬನ್ನಿಗೋಳ ಜಲಾಶಯದಿಂದ ಜನತೆಗೆ ನೀರು ಪೂರೈಸುವ ಆಶಯ ಹೊಂದಿದ್ದೆವು. ಆದರೆ ಇದೀಗ ಒಮ್ಮೇಲೆ ಜಾಕ್‌ವೆಲ್‌ ಬರಿದಾಗ ತೊಡಗಿರುವುದರಿಂದ ಅನಿವಾರ್ಯವಾಗಿ ಟ್ಯಾಂಕರ್‌ ಮೂಲಕ ಜನತೆಗೆ ನೀರು ಪೂರೈಸುವ ಕ್ರಮ ಕೈಗೊಂಡಿದ್ದೇವೆ ಎಂದು ಕೊಟ್ಟೂರು ಪಪಂ ಮುಖ್ಯಾಧಿಕಾರಿ ಎ. ನಸರುಲ್ಲಾ ಹೇಳಿದರು. ನೀರು ಪೂರೈಕೆ ಮೊನ್ನೆಯೇ ಆಗಬೇಕಿತ್ತು, ಆದರೆ 7 ದಿನವಾಗುತ್ತಿದ್ದರೂ ನೀರು ಬರುವ ಲಕ್ಷಣವೇ ಕಂಡು ಬರುತ್ತಿಲ್ಲ. ಜಾತ್ರೆ ಸಮಯದಲ್ಲಿ ಏನು ಮಾಡುವುದು ಎಂಬುದು ತೋಚದಂತಾಗಿದೆ. ಕೊಟ್ಟೂರೇಶ್ವರ ಸ್ವಾಮೀಯೇ ನಮಗೆ ಕರುಣೆ ತೋರಿ ಹೇಗಾದರೂ ವ್ಯವಸ್ಥೆ ಮಾಡಬೇಕು ಎಂದು ಹರಕೆ ಹೊತ್ತು ಕೇಳಲು ಮುಂದಾಗಿದ್ದೇವೆ ಎಂದು ಕೊಟ್ಟೂರು ಗೃಹಿಣಿ ಮೀನಾಕ್ಷಿ ಹೇಳುತ್ತಾರೆ.