ಮುಂಡಗೋಡದಲ್ಲಿ ಕೊಳಚೆ ನೀರು ವ್ಯಾಪಕ: ಆಕ್ರೋಶ

| Published : Feb 27 2025, 12:30 AM IST

ಸಾರಾಂಶ

ಅವೈಜ್ಞಾನಿಕ ಚರಂಡಿ ನಿರ್ಮಾಣ ವ್ಯವಸ್ಥೆಯಿಂದಾಗಿ ಚರಂಡಿಯ ಕೊಳಚೆ ನೀರು ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣ ಸೇರುತ್ತಿದೆ.

ಮುಂಡಗೋಡ: ಅವೈಜ್ಞಾನಿಕ ಚರಂಡಿ ನಿರ್ಮಾಣ ವ್ಯವಸ್ಥೆಯಿಂದಾಗಿ ಚರಂಡಿಯ ಕೊಳಚೆ ನೀರು ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣ ಸೇರುತ್ತಿದೆ. ಬ್ಯಾಂಕ್ ಸುತ್ತ ಕೊಳಚೆ ಪ್ರದೇಶವೆಂಬಂತೆ ಭಾಸವಾಗುತ್ತಿದೆ. ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಇದರಿಂದ ರೈತರು, ಗ್ರಾಹಕರು ಮತ್ತು ಬ್ಯಾಂಕ್ ಸಿಬ್ಬಂದಿ ಪರದಾಡುವಂತಾಗಿದೆ.

ಪಟ್ಟಣದ ನೆಹರು ನಗರ ಬಡಾವಣೆಯ ಪಕ್ಕಾ ಗಟಾರ ಮೂಲಕ ಬರುವ ತ್ಯಾಜ್ಯ ಮತ್ತು ಕೊಳಚೆ ನೀರು ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಹರಿಯುತ್ತಿದ್ದು, ಬ್ಯಾಂಕಿನ ಕಟ್ಟಡಕ್ಕೆ ಅಪಾಯ ತರುವ ಜೊತೆಗೆ ತ್ಯಾಜ್ಯ ಕೊಳಚೆ ನೀರು ಅಲ್ಲೇ ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಾಡಾಗಿದೆ. ಇದರಿಂದ ಬ್ಯಾಂಕಿಗೆ ಬರುವ ಗ್ರಾಹಕರು ಮತ್ತು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ರೋಗ ಭೀತಿ ಎದುರಾಗಿದೆ.

ಕಳೆದ ಸುಮಾರು ವರ್ಷಗಳಿಂದ ನೆಹರು ನಗರ ಭಾಗದ ಪಕ್ಕಾ ಗಟಾರ ಮೂಲಕ ಬರುವ ತ್ಯಾಜ್ಯ ಕೊಳಚೆ ನೀರು ಮುಂದೆ ಸರಾಗವಾಗಿ ಹೋಗಲು ಗಟಾರ ವ್ಯವಸ್ಥೆ ಇಲ್ಲ. ಹಾಗಾಗಿ ಈ ಕೊಳಚೆ ನೀರು ಬ್ಯಾಂಕಿಗೆ ಸಂಬಂಧಪಟ್ಟ ಜಾಗದಲ್ಲಿ ನಿಂತು ಕೆರೆಯಂತಾಗುತ್ತದೆ. ಹಂದಿ ನಾಯಿಗಳು ವಾಸ್ತವ ಸ್ಥಳವಾಗಿ ಮಾಡಿಕೊಂಡಿವೆ. ಸಾರ್ವಜನಿಕರು ತ್ಯಾಜ್ಯ ವಸ್ತುಗಳನ್ನು ಕೂಡ ಇಲ್ಲಿ ತಂದು ಎಸೆಯುತ್ತಿದ್ದಾರೆ. ಇದರಿಂದಾಗಿ ಇಲ್ಲಿಯ ವಾತಾವರಣ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ.

ಚರಂಡಿಯಿಂದ ತ್ಯಾಜ್ಯ ಮತ್ತು ಕೊಳಚೆ ನೀರು ಬ್ಯಾಂಕ್ ಆವರಣದೊಳಗೆ ಹರಿಯುವುದನ್ನು ಬಂದ್ ಮಾಡಿಸುವಂತೆ ಪಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಏನು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಬ್ಯಾಂಕ್ ಸಿಬ್ಬಂದಿ.

ಈಗಲಾದರೂ ಸಂಬಂಧಪಟ್ಟವರು ಸ್ಥಳಕ್ಕಾಗಮಿಸಿ ಇಲ್ಲಿಯ ಸ್ಥಿತಿ ಗತಿಯ ಬಗ್ಗೆ ಗಮನಹರಿಸಿ ಮೇಲಿನಿಂದ ಬರುವ ಕೊಳಚೆ ನೀರನ್ನು ತಡೆದು ಬೇರೆ ಕಡೆಗೆ ಹರಿಯುವಂತೆ ಮಾಡಿ ತ್ಯಾಜ್ಯ ವಸ್ತುಗಳನ್ನು ಬೇರೆ ಕಡೆಗೆ ವಿಲೇವಾರಿ ಮಾಡಿ ಖುಲ್ಲಾಪಡಿಸಿ ತಕ್ಷಣ ಸಿಮೆಂಟ್ ಚರಂಡಿ ನಿರ್ಮಾಣ ಮಾಡಿ ಸ್ವಚ್ಛ ವಾತಾವರಣ ನಿರ್ಮಾಣ ಮಾಡಬೇಕು ಎನ್ನುವುದು ಬ್ಯಾಂಕ್ ಸಿಬ್ಬಂದಿ, ಗ್ರಾಹಕರು ಮತ್ತು ಸಾರ್ವಜನಿಕರ ಆಗ್ರಹವಾಗಿದೆ.