ಸಾರಾಂಶ
ಮಕ್ಕಳು ಶಾಲಾ ಆವರಣದಲ್ಲಿ ಪರೀಕ್ಷೆ ಬರೆಯುವ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು, ಪಾಲಕರ ಆಕ್ರೋಶ
ಮುಂಡಗೋಡ:
ಪಟ್ಟಣದ ಹಳೂರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತ ಹರಿಯುವ ಶೌಚಾಲಯದ ನೀರಿನ ವಾಸನೆಯಿಂದ ಬೇಸತ್ತ ವಿದ್ಯಾರ್ಥಿಗಳು ಶಾಲಾವರಣದಲ್ಲಿ ಕುಳಿತು ಪರೀಕ್ಷೆ ಬರೆದ ಪ್ರಸಂಗ ಮಂಗಳವಾರ ನಡೆಯಿತು.ಶಾಲೆಯ ಹಿಂಬದಿಯಲ್ಲಿ ೨ ಬಡಾವಣೆ ನಿರ್ಮಾಣವಾಗಿದ್ದು, ಇವುಗಳಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿದೆ. ಹೀಗಾಗಿ ಒಂದು ಬಡಾವಣೆ ಮನೆಗಳ ಶೌಚಾಲಯ ಸೇರಿದಂತೆ ಎಲ್ಲ ಕೊಳಚೆ ನೀರು ಶಾಲೆಯ ಪಕ್ಕದಲ್ಲಿ ಸಂಗ್ರಹವಾಗುತ್ತಿದೆ. ಇದರ ದುರ್ನಾತದಿಂದ ಕೊಠಡಿಯಲ್ಲಿ ಕುಳಿತುಕೊಳ್ಳಲಾಗದೆ ಮಂಗಳವಾರ ಮಕ್ಕಳು ಶಾಲೆಯಿಂದ ಹೊರ ಬಂದು ಆವರಣದಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.೧ ವರ್ಷದಿಂದ ಈ ಸಮಸ್ಯೆ ಎದುರಾಗಿದೆ. ಶಾಲೆಯ ಸುತ್ತ ಕೊಳಚೆ ಆವರಿಸುತ್ತಿದ್ದು, ಗಬ್ಬು ವಾಸನೆಯಿಂದ ಕುಳಿತುಕೊಳ್ಳಲಾಗುವುದಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ೨ ವರ್ಷದ ಹಿಂದೆ ೨೦೦ಕ್ಕೂ ಅಧಿಕ ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇಲ್ಲಿಯ ಅವ್ಯವಸ್ಥೆಯಿಂದಾಗಿ ಬೇಸತ್ತು ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸಿದ್ದಾರೆ. ಈಗಲೂ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಶಾಲೆಗೆ ಮಕ್ಕಳೇ ಬರದ ಪರಿಸ್ಥಿತಿ ಬರಲಿದೆ. ತಕ್ಷಣ ಗಟಾರ ನಿರ್ಮಾಣ ಮಾಡಿ ಕೊಳಚೆ ನೀರು ಬೇರೆ ಕಡೆಗೆ ಹರಿದುಹೋಗುವಂತೆ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ ಕರಿಗಾರ, ಸದಸ್ಯ ವಿನಾಯಕ ಶೇಟ್, ಮಂಜುನಾಥ ಹಲಿಯಪ್ಪನವರ, ಮಂಜುನಾಥ ರಾಣಿಗೇರ ಎಚ್ಚರಿಸಿದರು.ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ ಶಾಲೆಯ ಸಮಸ್ಯೆ ಕುರಿತು ಆಲಿಸಿದರಲ್ಲದೇ ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದೆಂದು ಹೇಳಿದರು. ಇದಕ್ಕೆ ಜಗ್ಗದ ಪಾಲಕರು, ಸುಮಾರು ಒಂದು ವರ್ಷದಿಂದ ಇದೇ ಉತ್ತರ ಕೇಳಿ ಸಾಕಾಗಿದೆ. ಸಮಸ್ಯೆ ಪರಿಹರಿಸಲಾಗದಿದ್ದರೆ ನೀವೇಕೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಅವರನ್ನು ಪ್ರಶ್ನಿಸಿದಾಗ ಮಕ್ಕಳಿಗೆ ತೊಂದರೆಯಾಗುತ್ತಿರುವ ವಿಷಯ ತಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಪಪಂ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಶೀಘ್ರದಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದರು.ಮನೆಗಳ ಶೌಚಾಲಯಗಳ ಗುಂಡಿಗಳಿಂದ ಹರಿದು ಬರುವ ನೀರನ್ನು ಈಗಾಗಲೇ ತಡೆಹಿಡಿಯಲಾಗಿದ್ದು, ಶೀಘ್ರದಲ್ಲಿ ಯಾವುದಾದರೂ ಯೋಜನೆಯಡಿಯಲ್ಲಿ ಚರಂಡಿ ನಿರ್ಮಿಸಿ ಸಮಸ್ಯೆ ಪರಿಹರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ತಿಳಿಸಿದರು.