ನಗರದ ಶಂಕರಮಠ ಕಡೆಯಿಂದ ಕೆಎಚ್‌ಬಿ ಬಡಾವಣೆಗೆ ಹೋಗುವ ರಸ್ತೆಯಲ್ಲಿರುವ ಕೃಷಿ ಜಮೀನಿಗೆ ಸಾರ್ವಜನಿಕರು ಮತ್ತು ದಾರಿಹೋಕರು ಕಸ ಎಸೆಯುತ್ತಿದ್ದು, ಇದರಿಂದಾಗಿ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೃಷಿ ಭೂಮಿಗೆ ಕಸದ ರಾಶಿ; ನಗರಸಭೆ ವಿರುದ್ಧ ರೈತನ ಆಕ್ರೋಶ
ಕನ್ನಡಪ್ರಭ ವಾರ್ತೆ ಕಾರವಾರನಗರದ ಶಂಕರಮಠ ಕಡೆಯಿಂದ ಕೆಎಚ್‌ಬಿ ಬಡಾವಣೆಗೆ ಹೋಗುವ ರಸ್ತೆಯಲ್ಲಿರುವ ಕೃಷಿ ಜಮೀನಿಗೆ ಸಾರ್ವಜನಿಕರು ಮತ್ತು ದಾರಿಹೋಕರು ಕಸ ಎಸೆಯುತ್ತಿದ್ದು, ಇದರಿಂದಾಗಿ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು ಒಂದು ಲೋಡ್ ಕಸವನ್ನ ಕೃಷಿ ಜಮೀನಿಗೆ ಹಾಕಲಾಗಿದೆ ಎಂದು ಕೃಷಿಕ ಗಿರಿಧರ ಗುನಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ರಸ್ತೆಯಲ್ಲಿ ಸಂಚರಿಸುವ ಜನರು ತಮ್ಮ ಕಸವನ್ನು ಕೃಷಿ ಭೂಮಿಗೆ ಎಸೆದು ಹೋಗುತ್ತಾರೆ. ಜಮೀನಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಮದ್ಯದ ಬಾಟಲಿಗಳು ಮತ್ತು ಗಾಜಿನ ಚೂರುಗಳ ರಾಶಿ ಬಿದ್ದಿವೆ. ಬೆಳಗ್ಗೆಯಿಂದ ಸ್ವಚ್ಛಗೊಳಿಸಿದರೂ ಕಸ ಮುಗಿದಿಲ್ಲ, ಸುಮಾರು 15 ಬುಟ್ಟಿಯಷ್ಟು ಕಸ ಇನ್ನೂ ಬಿದ್ದಿದೆ. ಕಸದಿಂದಾಗಿ ಭೂಮಿ ಹಾಳಾಗುತ್ತಿದ್ದು, ಕೃಷಿ ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ಗಿರಿಧರ ಬೇಸರ ವ್ಯಕ್ತಪಡಿಸಿದ್ದಾರೆ.ಕಸದ ಸಮಸ್ಯೆ ಜೊತೆಗೆ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಲೂ ಸಂಕಷ್ಟ ಅನುಭವಿಸುವಂತಾಗಿದೆ. ಮಳೆಗಾಲದಲ್ಲಿ ಕೆಎಚ್‌ಬಿ ಮತ್ತು ಇತರ ಕಡೆಗಳಿಂದ ಬರುವ ನೀರೆಲ್ಲಾ ಗದ್ದೆಗೆ ನುಗ್ಗುತ್ತಿದೆ. ಈ ಹಿಂದೆ ನೀರು ಮಾರಿಯಾ ನಗರದ ಕಡೆಗೆ ಹರಿದು ಹೋಗುತ್ತಿತ್ತು, ಆದರೆ ಅಲ್ಲಿ ರಸ್ತೆ ಮತ್ತು ತೋಟಗಳನ್ನು ಮಾಡಿದ ನಂತರ ಸರಿಯಾದ ಗಟಾರ ನಿರ್ಮಿಸದ ಕಾರಣ, ನೀರೆಲ್ಲಾ ಕೃಷಿ ಜಮೀನಿಗೆ ಬಂದು ಬೆಳೆ ಹಾನಿಯಾಗುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ಭತ್ತ ಬೆಳೆಯಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.
ಈ ಬಗ್ಗೆ ನಗರಸಭೆಗೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ವರ್ಷ ಇದೇ ಸಮಸ್ಯೆ ಮರುಕಳಿಸುತ್ತಿದ್ದು, ತಾವೇ ಕಸ ತೆಗೆಯುವ ಪರಿಸ್ಥಿತಿ ಬಂದಿದೆ ಎಂದು ಗಿರಿಧರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ಮಳೆಗಾಲದ ವೇಳೆಗೆ ನಗರಸಭೆ ಎಚ್ಚೆತ್ತುಕೊಳ್ಳದಿದ್ದರೆ, ತಮ್ಮ ಜಮೀನಿನ ಮೂಲಕ ನೀರು ಹರಿದು ಹೋಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.