ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪುರಸಭೆ ನಿರ್ಲಕ್ಷ್ಯಕ್ಕೆ ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗುವ ಮೈಸೂರು- ಊಟಿ ಹೆದ್ದಾರಿಯಲ್ಲಿ ಚರಂಡಿ ನೀರು ಹರಿಯುತ್ತಿದೆ. ಪ್ರವಾಸಿಗರು ಹಾದು ಹೋಗುವ ಹೆದ್ದಾರಿಯಲ್ಲಿ ಚರಂಡಿ ನೀರು ಹರಿದರೂ ಪುರಸಭೆ ಸಂಬಂಧವಿಲ್ಲದಂತೆ ವರ್ತಿಸುತ್ತಿದೆಯಾ?ಕಳೆದ ಎರಡು ದಿನಗಳಿಂದ ಮೈಸೂರು- ಊಟಿ ಹೆದ್ದಾರಿಯ ಹಳೆಯ ಗುರುಪ್ರಸಾದ್ ಹೋಟೆಲ್ ಮುಂದಿನ ಚರಂಡಿಯಲ್ಲಿ ಕೊಳಚೆ ನೀರು ಉಕ್ಕಿ ಹರಿದು ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಹಾಗೂ ಪಾದಚಾರಿಗಳಿಗೆ ದುರ್ವಾಸನೆ ಬೀರುತ್ತಿದೆ.
ಅಲ್ಲದೆ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳಿಗೆ ಬೈಕ್ ಹಾಗೂ ಕಾರುಗಳು ಚಕ್ರಗಳು ಚರಂಡಿ ನೀರಿನ ಮೇಲೆ ಹರಿದಾಗ ಕೊಳಚೆ ನೀರು ಜನರಿಗೆ ಹಾರುತ್ತಿದೆ ಎಂದು ಪಾದಚಾರಿಗಳು ದೂರಿದ್ದು, ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪುರಸಭೆ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಹಳೆ ಗುರುಪ್ರಸಾದ್ ಹೋಟೆಲ್ ಬಳಿ ಚರಂಡಿ ನೀರು ಹೆದ್ದಾರಿಯಲ್ಲಿ ಹರಿದು ಗಂಗಾ ಲಾಡ್ಜ್ ತನಕ ಕೊಳಚೆ ನೀರು ಹರಿಯುತ್ತಿದೆ, ಇದು ಪುರಸಭೆ ಕಣ್ಣಿಗೆ ಬಿದ್ದಿಲ್ಲವೇ? ಇದೇ ರಸ್ತೆಯಲ್ಲಿ ಪುರಸಭೆ ಅಧ್ಯಕ್ಷ, ಸದಸ್ಯರು ಬೈಕ್ ಹಾಗೂ ಕಾರುಗಳಲ್ಲಿ ಸಂಚರಿಸುತ್ತಿದ್ದಾರೆ. ಅವರ ಕಣ್ಣಿಗೂ ಬಿದ್ದಿಲ್ಲವಾ ಎಂದು ನಾಗರಿಕರೊಬ್ಬರು ಪ್ರಶ್ನಿಸಿ, ಕಾಳಜಿಯಿಲ್ಲದ ಪುರಸಭೆಗೆ ಏನು ಹೇಳೋದು ಎಂದು ಕಿಡಿಕಾರಿದರು.
ಕಚೇರಿಯಲ್ಲಿ ಕೂರೋದಲ್ಲ:ಪುರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಕಚೇರಿಯಲ್ಲಿ ಕುಳಿತು ಪುರಸಭೆ ಅಧಿಕಾರ ನಡೆಸೋದಲ್ಲ. ಸಾರ್ವಜನಿಕರ ಸಮಸ್ಯೆಗಳು ಏನು ಎಂದು ಬೀದಿಗೆ ಬಂದರೆ ಗೊತ್ತಾಗಲಿದೆ. ಮಳೆ ಬಂದರೆ ಮಡಹಳ್ಳಿ ಸರ್ಕಲ್ ನಲ್ಲಿ ನೀರು ನಿಲ್ಲುತ್ತದೆ. ಎರಡು ದಿನಗಳಿಂದ ಚರಂಡಿ ನೀರು ಹೆದ್ದಾರಿಯಲ್ಲಿಯೇ ಹರಿಯುತ್ತಿದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಇನ್ನಾದರೂ ಮಾಡಲಿ ಎಂಬುದು ಕನ್ನಡಪ್ರಭದ ಕಳಕಳಿ.