ಯರಿಯೂರು ರಸ್ತೆಯಲ್ಲಿಯೇ ಚರಂಡಿ ನೀರು

| Published : Mar 14 2025, 12:35 AM IST

ಸಾರಾಂಶ

ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ರಸ್ತೆಯಲ್ಲೇ ಹರಿಯುತ್ತಿರುವ ಚರಂಡಿ ನೀರು.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಯರಿಯೂರು ಗ್ರಾಮದ ನಾಯಕರು, ಕುರುಬರು, ಮುಸ್ಲಿಂ ಬೀದಿ, ಲಿಂಗಾಯಿತರ ಬೀದಿ ಹಾಗೂ ವಿಶ್ವಕರ್ಮ ಜನಾಂಗದವರ ಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೇ ಚರಂಡಿ ನೀರು ಹರಿಯುತ್ತಿದ್ದು ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೀರು ಚರಂಡಿಯಲ್ಲಿ ಸರಾಗವಾಗಿ ಸಾಗುತ್ತಿಲ್ಲ. ಇದರಿಂದ ರಸ್ತೆಯ ನಡುವೆಯೇ ಚರಂಡಿ ನೀರು ಹರಿಯುತ್ತಿದೆ. ಇದು ಮುಂದಕ್ಕೆ ಸಾಗಲು ದಾರಿ ಇಲ್ಲದ ಕಾರಣ ರಸ್ತೆಯ ತುಂಬೆಲ್ಲಾ ಹರಿಯುತ್ತಿದ್ದು ಪಾದಚಾರಿಗಳು ಇಲ್ಲಿಂದ ಸಂಚರಿಸದ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ತಮ್ಮ ಮನೆಗಳನ್ನು ತಲುಪಲು ಅನಿವಾರ್ಯವಾಗಿ ಬೇರೆ ಬೀದಿಗಳಿಂದಲೇ ಸಾಗುವ ಸ್ಥಿತಿ ಇದೆ. ಈ ಬಗ್ಗೆ ಸಂಬಂಧಪಟ್ಟ ಪಂಚಾಯಿತಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯ ತರಲಾಗಿದ್ದರೂ ಅವರು ಸೂಕ್ತ ಕ್ರಮ ವಹಿಸಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಚರಂಡಿಯನ್ನು ಅಪೂರ್ಣ ಮಾಡಲಾಗಿದೆ. ಅಲ್ಲದೆ ಇದನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಗ್ರಾಮದ ಬೀದಿಗಳ ನೀರು ಸರಾಗವಾಗಿ ಹಾದು ಹೋಗುತ್ತಿಲ್ಲ ಕಳೆದ ಕೆಲವು ದಿನಗಳಲ್ಲಿ ರಸ್ತೆಯಲ್ಲೇ ಚರಂಡಿ ನೀರು ಹರಿಯುತ್ತಿದೆ. ಇದು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕೂಡಲೇ ಗ್ರಾಪಂ ಇದಕ್ಕೆ ಪರಿಹಾರ ನೀಡಬೇಕು. ನೀರು ಸರಾಗವಾಗಿ ಸಾಗುವಂತೆ ಮಾಡಬೇಕು ಎಂಬುದು ಮುಖಂಡ ಲೋಕೇಶ್ ಮೌರ್ಯ ಎಂಬುವರ ಆಗ್ರಹವಾಗಿದೆ. ಈ ಭಾಗದಲ್ಲಿ ಚರಂಡಿಯ ಹೂಳೆತ್ತಿಲ್ಲ. ನೀರು ಪಾಚಿ ಕಟ್ಟಿದ್ದು ಇದರಲ್ಲಿ ಸೊಳ್ಳೆ, ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಇದರಿಂದ ದುರ್ವಾಸನೆ ಬರುತ್ತಿದ್ದು ಸಾರ್ವಜನಿಕರು ಒಡೆದ ಕಲ್ನಾರ್ ಶೀಟ್‌ಗಳು, ತಗಡುಗಳನ್ನು ಇದರ ಮೇಲಿಟ್ಟುಕೊಂಡು ತಮ್ಮ ಮನೆಗಳಲ್ಲಿ ವಾಸಿಸುವ ಸ್ಥಿತಿ ಇದೆ. ಈಗ ಬೇಸಿಗೆ ಕಾಲವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿದೆ. ಹಾಗಾಗಿ ಕೂಡಲೇ ಗ್ರಾಪಂ ಹೂಳನ್ನು ತೆಗೆಸಬೇಕು. ನೀರು ಸರಾಗವಾಗಿ ಸಾಗುವಂತೆ ಮಾಡಬೇಕು ಎಂಬುದು ಗ್ರಾಮದ ಪರಮೇಶ್, ಸಿದ್ದರಾಜು, ನಿಂಗರಾಜು ಸೇರಿದಂತೆ ಅನೇಕರ ಆಗ್ರಹವಾಗಿದೆ.ಶಿವಕುಮಾರ್, ಪಿಡಿಒ, ಯರಿಯೂರು ಗ್ರಾಪಂ ಅವರು, ಈ ಬಗ್ಗೆ ನನಗೂ ಮಾಹಿತಿ ಇದೆ. ನೀರು ಇಂಗು ಗುಂಡಿಯನ್ನು ನಿರ್ಮಾಣ ಮಾಡಿ ಈ ನೀರನ್ನು ಸಂಸ್ಕರಿಸಲು ಯೋಜನೆ ಇದ್ದು ಇದನ್ನು ಗ್ರಾಮದಲ್ಲಿ ಮಾಡಲಾಗುವುದು. ಕೂಡಲೇ ಈ ನೀರು ಸರಾಗವಾಗಿ ಹಾದು ಹೋಗಲು ಕ್ರಮ ವಹಿಸಲಾಗುವುದು. ಚರಂಡಿ ಹೂಳೆತ್ತಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು.