ಸಾರಾಂಶ
ಶಿವಮೊಗ್ಗ: ನಮ್ಮ ದೇಶದಲ್ಲಿ ಗುರು ಪರಂಪರೆಗೆ ವಿಶೇಷ ಸ್ಥಾನವಿದ್ದು, ಬಂಜಾರ ಸಮಾಜದ ಗುರುಗಳಾದ ಸಂತ ಸೇವಾಲಾಲರು ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.ಜಿಲ್ಲಾಡಳಿತ, ಜಿ.ಪಂ., ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬಂಜಾರ ಸಂಘ ಶಿವಮೊಗ್ಗ ಇವರ ಸಹಯೋಗದಲ್ಲಿ ಶನಿವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಂತ ಶ್ರೀ ಸೇವಾಲಾಲ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮದು ಸಾಂಸ್ಕೃತಿಕ ರಾಷ್ಟ್ರ. ವಿವಿಧತೆಯಲ್ಲಿ ಏಕತೆ ಇರುವ ದೇಶ. ಗಿಡ, ಮರ, ನೆಲ, ಜಲ ಹೀಗೆ ಪ್ರಕೃತಿಯನ್ನೇ ಪೂಜಿಸುತ್ತೇವೆ ನಾವು. ಇಂತಹ ಸಮಾಜದಲ್ಲಿ ಸಂತ ಸೇವಾಲಾಲರು ಸತ್ಯ, ನಿಷ್ಠೆ ಪ್ರಾಮಾಣಿಕತೆಗೆ ಹೆಸರಾದವರು. ಬಂಜಾರ ಸಮಾಜದ ಉದ್ಧಾರಕರು. ಬಂಜಾರ ಸಮಾಜ ಮುಂದುವರೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಸಹಕರಿಸುತ್ತಿದೆ. ಸಮುದಾಯದವರು ಉತ್ತಮ ಶಿಕ್ಷಣ ಪಡೆದು ಮುಂದೆ ಬರಬೇಕು ಎಂದರು.ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್ ಮಾತನಾಡಿ, ಸಂತ ಸೇವಾಲಾಲರಂತಹ ದಾರ್ಶನಿಕರು ಒಂದು ಜಾತಿಗೆ ಸೀಮಿತರಲ್ಲ. ಅವರು ಬಂಜಾರ ಸಮಾಜ ಸುಧಾರಣೆ ಮತ್ತು ಅಭಿವೃದ್ಧಿಗಾಗಿ ಬಹಳಷ್ಟು ಉತ್ತಮ ಸಂದೇಶ ನೀಡಿದ್ದಾರೆ. ಆದರೆ ಸಂತರು, ಶರಣರು ಸಾಗಿ ಬಂದ ಹಾದಿ ಸುಗಮವಾಗಿರಲಿಲ್ಲ. ಅವರು ಕಲ್ಲುಮುಳ್ಳುಗಳ ಹಾದಿಯಲ್ಲಿ ಸಾಗಿ ಬಂದಿರುತ್ತಾರೆ. ಇವರ ವಚನ, ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ನಮ್ಮ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಹಾಗೂ ಆರೋಗ್ಯದ ಕಡೆ ಗಮನ ಕೊಡಬೇಕು. ಇಂತಹ ಶಿಕ್ಷಣ ಪಡಿದಿದ್ದರಿಂದಲೇ ನಾನಿಂದು ಈ ಸ್ಥಾನದಲ್ಲಿದ್ದೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಜಗತ್ತೇ ಒಂದು ಕುಟುಂಬ. ನಾವೆಲ್ಲಾ ಇಲ್ಲಿ ಅಕ್ಕ ತಮ್ಮಂದಿರಂತೆ ಬಾಳಬೇಕು ಎನ್ನುವ ಪರಿಕಲ್ಪನೆಯನ್ನು ಸಂತ ಸೇವಾಲಾಲ್ ಈ ಸಮಾಜಕ್ಕೆ ಕೊಟ್ಟಿದ್ದಾರೆ. ಸಂತ ಸೇವಾಲಾಲ್ ಅವರು ನಡೆದು ಬಂದ ದಾರಿ ಇಂದಿಗೂ ಪ್ರಸ್ತುತ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿನ ಅನೇಕ ವಿಷಯಗಳನ್ನು ಸಂತ ಸೇವಾಲಾಲರು ಬಹಳ ಮುಂಚೆಯೇ ಸಮುದಾಯಕ್ಕೆ ನೀಡಿದ್ದರು ಎಂದರು.ನಾವೆಲ್ಲಾ ಒಂದೇ ಸಮುದಾಯ. ಸರ್ವೇಜನ ಸುಖಿನೋ ಭವಂತು. ಪರಸ್ತ್ರಿಯನ್ನು ದೇವರಂತೆ ನೋಡಬೇಕು ಹಾಗೂ ಮಣ್ಣು, ನೆಲ, ಜಲ, ಗಿಡ ಪ್ರಕೃತಿಯನ್ನು ಪೂಜಿಸಬೇಕೆಂದು ತಿಳಿಸಿದ್ದರು. ಸಂತ ಸೇವಾಲಾಲರು 270 ವರ್ಷಗಳ ಹಿಂದೆಯೇ ಅಹಿಂಸೆಯಿಂದ ಮಾತ್ರ ಸಮಾಜ ಕಟ್ಟಲು ಸಾಧ್ಯ ಎಂದು ತಿಳಿಸಿದ್ದರು. ಅವರ ಎಲ್ಲ ವೇದವಾಕ್ಯ ಪಾಲಿಸಿದರೆ ಒಟ್ಟಾಗಿ ಬದುಕಲು ಸಾಧ್ಯ ಎಂದು ಹೇಳಿದರು.ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಕೆ.ಬಿ.ಅಶೋಕ್ ನಾಯ್ಕ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಜಿಲ್ಲಾ ಬಂಜಾರ ಸಂಘದ ಉಪಾಧ್ಯಕ್ಷ ಆರ್.ಜಗದೀಶ್, ಕಾರ್ಯದರ್ಶಿ ಕೆ.ಆನಂದ್, ತಾಲೂಕು ಬಂಜಾರ ಸಂಘ ಅಧ್ಯಕ್ಷ ಮಂಜುನಾಥ್ ನಾಯಕ್, ಸಿಂಡಿಕೇಟ್ ಸದಸ್ಯರಾದ ಸಾಕಮ್ಮ ಬಾಯಿ, ಮಾಜಿ ಪಾಲಿಕೆ ಸದಸ್ಯರಾದ ಆರ್.ಸಿ.ನಾಯ್ಕ, ಎಎಸ್‌ಪಿ ಕಾರ್ಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಪಾಲ್ಗೊಂಡಿದ್ದರು.