ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಕುಲುವನಹಳ್ಳಿ ಗ್ರಾಮದಲ್ಲಿರುವ ಹರಿಜನ ಕಾಲೋನಿಯ ಮೂರು ಬೀದಿಗಳಲ್ಲಿ ಚರಂಡಿ ದುರಸ್ತಿ ಕಾಮಗಾರಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷೆ ನಡುವಿನ ಹಗ್ಗಾಜಗ್ಗಾಟದಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಗ್ರಾಮಸ್ಥರು ಕುಲುವನಹಳ್ಳಿ ಗ್ರಾಪಂಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಕಾಲೋನಿಯ ನಿವಾಸಿ ಕೃಷ್ಣಪ್ಪ ಮಾತನಾಡಿ, ಕಳೆದ ಆರು ತಿಂಗಳ ಹಿಂದೆ ಕಾಮಗಾರಿ ಪ್ರಾರಂಭವಾಗಿ ಚರಂಡಿಗಳ ಗುಂಡಿ ತೆಗೆದು, ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಇದೀಗ ಮೂರು ದಿನಗಳಿಂದ ಭಾರಿ ಮಳೆಯಿಂದ ಚರಂಡಿಗಳೆಲ್ಲಾ ನೀರು ತುಂಬಿ ಹೊರಗೆ ಹರಿಯುತ್ತಿದೆ. ಇದರಿಂದ ಕಾಲೇನಿಯ ಸುಮಾರು 50 ಮನೆಗಳು ಬೀಳುವ ಹಂತಕ್ಕೆ ತಲುಪಿವೆ. ಸಾಂಕ್ರಾಮಿಕ ರೋಗಗಳ ಆಗರವಾಗಿದೆ. ಜನಪ್ರತಿನಿಧಿಗಳ ನಡೆ ಮತ್ತು ಅಧಿಕಾರಿಗಳು ಬೇಜವಾಬ್ದಾರಿತನಕ್ಕೆ ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು ಕೂಡಲೇ ನಮ್ಮ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.

ಮಾಜಿಗಳ ಹಗ್ಗಾಜಗ್ಗಾಟ:

ಚರಂಡಿ ನಿರ್ಮಾಣಕ್ಕೆ ಪಂಚಾಯತಿಯಲ್ಲಿ ಕ್ರಿಯಾಯೋಜನೆ ತಯಾರಾಗಿದೆ. ಆದರೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ರಂಗನಾಥ್ ಮತ್ತು ಮಾಜಿ ಅಧ್ಯಕ್ಷೆ ಸುನಂದಮ್ಮ ನಡುವೆ ಹೊಂದಾಣಿಕೆ ಕೊರತೆ, ಪರಸ್ಪರ ಸಮನ್ವಯತೆಯಿಲ್ಲದೆ ಈ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು, ಮನೆಗಳಿಗೆ ನೀರು ಹೋಗುವುದನ್ನು ತಪ್ಪಿಸಿ ವಯೋವೃದ್ದರು, ಮಕ್ಕಳು ಸಂಚರಿಸಲು ಅನುವು ಮಾಡಿಕೊಡಬೇಕು. ಮಾಜಿ ಜನಪ್ರತಿನಿಧಿಗಳು ತಮ್ಮ ಪ್ರತಿಷ್ಠೆ ಬದಿಗಿಟ್ಟು ಅಭಿವೃದ್ಧಿಗೆ ಸ್ಪಂದಿಸಿ ಎಂದು ಗ್ರಾಮಸ್ಥರಾದ ಕಾವ್ಯರಾದ ಆಗ್ರಹಿಸಿದರು.

ಕುಲುವನಹಳ್ಳಿ ಗ್ರಾಪಂ ಮುಂದೆ ನೂರಾರು ಮಹಿಳೆಯರು ಪ್ರತಿಭಟಿಸಿ, ಗ್ರಾಮದಲ್ಲೆಲ್ಲಾ ಅಭಿವೃದ್ಧಿ ನಾಮಫಲಕ ಅಳವಡಿಸುವ ಬದಲು ಕಾಮಗಾರಿ ಸಂಪೂರ್ಣಗೊಳಿಸುವಂತೆ ಪಿಡಿಒ ಮೋಹನ್ ಕುಮಾರ್ ಅವರಿಗೆ ಈಗಾಗಲೇ ಎರಡನೇ ಬಾರಿ ಮನವಿ ಸಲ್ಲಿಸಿದ್ದೇವೆ. ಗ್ರಾಪಂ ಅಧ್ಯಕ್ಷೆ ಕಾಮಗಾರಿ ಆರಂಭಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಮಾಜಿ ಉಪಾಧ್ಯಕ್ಷ ರಂಗನಾಥ್ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎಂದು ರಾಕೇಶ್‌ ಆಕ್ರೋಶ ಹೊರಹಾಕಿದರು.


ಬಳಿಕ ಪಿಡಿಒ ಮೋಹನ್ ಕುಮಾರ್ ಮತ್ತು ಗ್ರಾಪಂ ಮಾಜಿ ಸದಸ್ಯ ರಂಗಸ್ವಾಮಯ್ಯ ಕಾಮಗಾರಿ ಪ್ರಾರಂಭಿಸುವ ಮುನ್ಸೂಚನೆ ನೀಡಿದ ಮೇಲೆ ಪ್ರತಿಭಟನೆಯನ್ನು ಬುಧವಾರದವರೆಗೆ ಮುಂದೂಡಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಸದಸ್ಯ ರಂಗಸ್ವಾಮಯ್ಯ, ಗ್ರಾಮಸ್ಥರಾದ ಯಶವಂತ್, ರಾಜೇಶ್, ರಂಗನಾಥ್, ನಂಜುಂಡಯ್ಯ, ಮೋಹನ್, ಮಹಿಳೆಯರಾದ ಪೂಜಮ್ಮ ತುಳಸಮ್ಮ, ಗಂಗಮ್ಮ, ಶೋಭಾ, ಸುಶೀಲಮ್ಮ, ಗಂಗಹನುಮಕ್ಕ, ಇತರ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕೋಟ್.................

ಚರಂಡಿ ಕಾಮಗಾರಿಗೆ ಕ್ರಿಯಾಯೋಜನೆ ತಯಾರಾಗಿದೆ. ಬುಧವಾರದಿಂದ ಕಾಮಗಾರಿ ಪ್ರಾರಂಭ ಮಾಡುತ್ತೇವೆ. ಜನಪ್ರತಿನಿಧಿಗಳ ವೈಯಕ್ತಿಕ ಪ್ರತಿಷ್ಠೆಯಿಂದ ಸಾರ್ವಜನಿಕರಿಗೆ ತೊಂದರೆ ಮಾಡಬಾರದು, ಗ್ರಾಮದ ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸಬಾರದು. ಅದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಗ್ರಾಮಸ್ಥರ ಸಮಸ್ಯೆ ಬಗೆಹರಿಸುತ್ತೇವೆ.

-ಮೋಹನ್‌ಕುಮಾರ್, ಪಿಡಿಒ, ಗ್ರಾಪಂ, ಕುಲುವನಹಳ್ಳಿ

ಫೆÇೀಟೋ 2 :

ತ್ಯಾಮಗೊಂಡ್ಲು ಹೋಬಳಿಯ ಕುಲುವನಹಳ್ಳಿ ಗ್ರಾಮ ಪಂಚಾಯತಿ ಮುಂದೆ ಹರಿಜನ ಕಾಲೋನಿ ನಿವಾಸಿಗಳು ಸ್ಥಗಿತಗೊಂಡಿರುವ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.