ಕುಮಟಾದಲ್ಲಿ ವಾರ್ಡನ್‌ನಿಂದ ಲೈಂಗಿಕ ಕಿರುಕುಳ: ಆರೋಪ

| Published : Sep 20 2024, 01:32 AM IST

ಸಾರಾಂಶ

ಅಂಬೇಡ್ಕರ್ ವಸತಿ ಶಾಲೆಯ ವಾರ್ಡನ್ ಶಂಕರ ಎಸ್. ಪೋಳ (೩೦) ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿದ್ದು, ಅದೇ ವಸತಿ ಶಾಲೆಯ ಸ್ವಚ್ಛತಾ ಸಿಬ್ಬಂದಿಯೇ ದೂರು ನೀಡಿದ ಮಹಿಳೆ.

ಕುಮಟಾ: ಪಟ್ಟಣದ ಹಳೆ ಮೀನುಪೇಟೆ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಹಿಳಾ ಸಿಬ್ಬಂದಿ ಮೇಲೆ ವಾರ್ಡನ್ ಲೈಂಗಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಕುಮಟಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಂಬೇಡ್ಕರ್ ವಸತಿ ಶಾಲೆಯ ವಾರ್ಡನ್ ಶಂಕರ ಎಸ್. ಪೋಳ (೩೦) ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿದ್ದು, ಅದೇ ವಸತಿ ಶಾಲೆಯ ಸ್ವಚ್ಛತಾ ಸಿಬ್ಬಂದಿಯೇ ದೂರು ನೀಡಿದ ಮಹಿಳೆ.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಳೆದ ೭ ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ನೀಡಿದ ದೂರಿನಂತೆ, ವಾರ್ಡನ್ ಶಂಕರ ಪೋಳ ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಈ ಬಗ್ಗೆ ಕೆಲ ದಿನಗಳ ಹಿಂದೆಯೇ ಶಾಲೆಯ ಪ್ರಾಚಾರ್ಯರಿಗೆ, ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ, ಮಹಿಳಾ ಸಾಂತ್ವನ ಕೇಂದ್ರಕ್ಕೂ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ.

ಆರೋಪಿ ವಾರ್ಡನ್ ಮತ್ತೆ ಸೆ. ೧೨ರಂದು ಶಾಲೆಯ ಮಹಡಿ ಮೆಟ್ಟಿಲ ಬಳಿ ಲೈಂಗಿಕ ಕಿರುಕುಳ ನೀಡಿದ್ದು, ಸಹಕರಿಸದಿದ್ದರೆ ಕೆಲಸದಿಂದ ತೆಗೆಸುತ್ತೇನೆ ಹಾಗೂ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡಿ ನಾಪತ್ತೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ. ಸಾಲಬಾಧೆ: ವ್ಯಕ್ತಿ ಆತ್ಮಹತ್ಯೆ

ಶಿರಸಿ: ಸಾಲಬಾಧೆ ತಾಳದೇ ಕಳೆನಾಶಕ ಸೇವಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತಾಲೂಕಿನ ಬಿಸಲಕೊಪ್ಪ ಸಮೀಪದ ವಡಗೇರಿಯ ಕುತ್ಬುದ್ದಿನ ಮಖಬೂಲಸಾಬ(೨೮) ಮೃತ ವ್ಯಕ್ತಿ. ಈತ ವಿಪರೀತ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೇ ಬೇಸರದಿಂದ ಇರುತ್ತಿದ್ದ. ಸೆ. ೧೭ರಂದು ರಾತ್ರಿ ಕಳೆನಾಶಕ ಔಷಧಿ ಸೇವಿಸಿದ್ದ. ಆತನನ್ನು ಚಿಕಿತ್ಸೆಗೆ ಮಾರಿಕಾಂಬಾ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ದಾಖಲಿಸಲಾಗಿತ್ತು. ಅಲ್ಲಿಂದ ಮಂಗಳೂರಿಗೆ ಕರೆದುಕೊಂಡು ಹೋಗುವಾಗ ತೀವ್ರ ಅಸ್ವಸ್ಥನಾದ ಹಿನ್ನೆಲೆ ಮರಳಿ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಸೆ. ೧೮ರಂದು ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.