ಲೈಂಗಿಕ ಕಿರುಕುಳ ನಿರ್ಮೂಲನೆ ಜಾಗೃತಿ

| Published : Aug 14 2025, 01:00 AM IST

ಸಾರಾಂಶ

ಸವ್ಯಸಾಚಿ ಸಭಾಂಗಣದಲ್ಲಿ ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ಲೈಂಗಿಕ ಕಿರುಕುಳ ನಿರ್ಮೂಲನ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತುಮಕೂರು

ಹಿಂಸಾಚಾರ, ಕಿರುಕುಳ ಮತ್ತು ಶೋಷಣೆಯಿಲ್ಲದ ವಾತಾವರಣದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಒಟ್ಟಾಗಿ ಕೆಲಸ ಮಾಡುವ ಅನುಕೂಲಕರ ವಾತಾವರಣವನ್ನು ಒದಗಿಸಲು ಕಾಲೇಜು ತನ್ನನ್ನು ತಾನು ಬದ್ಧವಾಗಿಸಿಕೊಳ್ಳಬೇಕು ಎಂದು ನಗರದ ವಿದ್ಯೋದಯ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕಾವ್ಯಶ್ರೀ ಮಂಜುನಾಥ್ ಅವರು ಅಭಿಪ್ರಾಯಪಟ್ಟರು. ಕಾಲೇಜಿನ ಸವ್ಯಸಾಚಿ ಸಭಾಂಗಣದಲ್ಲಿ ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ಲೈಂಗಿಕ ಕಿರುಕುಳ ನಿರ್ಮೂಲನ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಯೋಗ ಮತ್ತು ಕುಟುಂಬದ ಕೆಲಸಗಳಲ್ಲಿ ಸಮತೋಲನ ಸಾಧಿಸಿವಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯ ಕುರಿತು ಅವರು ಮಾತನಾಡಿದರು.ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿನಿಯರು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯವನ್ನು ಎದುರಿಸುವಂತಹ ವಾತಾವರಣಕ್ಕೆ ಅವಕಾಶ ನೀಡಬಾರದು. ಈ ನಿಟ್ಟನಲ್ಲಿ ಅರಿವು-ಜಾಗೃತಿಯನ್ನು ಉಂಟುಮಾಡಬೇಕು. ಮಹಿಳೆಯರು ತಮ್ಮ ಉದ್ಯೋಗ ಮತ್ತು ಕುಟುಂಬ ನಿರ್ವಹಣೆಗಳಲ್ಲಿ ಹೇಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು ಹಾಗು ಯಾವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಕಾವ್ಯಶ್ರೀ ಮಂಜುನಾಥ್ ಅವರು ಅರಿವು ಮೂಡಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಬಿ ಕುಡ್ವ ಅವರು ಮಾತನಾಡಿ, ಉದ್ಯೋಗಗಳಲ್ಲಿ ಮತ್ತು ಕುಟುಂಬದಲ್ಲಿ ಮಹಿಳೆಯರ ಪಾತ್ರ ಶ್ಲಾಘನೀಯ ಎಂದರು. ಸಮಿತಿಯ ಮುಖ್ಯಸ್ಥರಾದ ಡಾ.ಲಕ್ಷ್ಮೀದೇವಿ ಬಿ.ಎಲ್, ಸದಸ್ಯರುಗಳಾದ ಡಾ. ಜ್ಯೋತಿ ಗಣೇಶ, ಡಾ.ಚಂಪಾ.ಸಿ, ಡಾ.ನೀತಾ.ಡಿ, ಡಾ.ಅಶ್ವಿನಿ.ಕೆ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.