ಸಾರಾಂಶ
ಸವಣೂರು: ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ನಾಲ್ಕು ವರ್ಷಗಳಿಂದ ವಿತರಣೆ ಮಾಡದಿರುವ ವಿಳಂಬ ನೀತಿಯನ್ನು ಖಂಡಿಸಿ ಹಾಗೂ ಲೋಪ ದೋಷ ಸರಿಪಡಿಸಿ ಶೀಘ್ರವಾಗಿ ವಿತರಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ತಾಲೂಕು ಸಂಘಟನಾ ಸಮಿತಿ ಪದಾಧಿಕಾರಿಗಳು ಶುಕ್ರವಾರ ಶ್ರೀಮತಿ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರವೀಣ ಆನಂದಕಂದ ಅವರ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡ ಅತಿಕ ಜಿ. ಎಚ್., ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ ೨೦೨೦) ಜಾರಿಯಾದ ನಂತರ ಸುಮಾರು ೨೨ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು ಸುಮಾರು ೫೧ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಂಕಪಟ್ಟಿ ವಿತರಣೆ ಮಾಡಿರುವುದಿಲ್ಲ. ಪ್ರಸ್ತುತ ರಾಜ್ಯ ಸರ್ಕಾರ ರಾಜ್ಯದಲ್ಲಿ ಎನ್‌ಇಪಿ ರದ್ದುಗೊಳಿಸಿ ಎಸ್‌ಇಪಿ ಜಾರಿಗೊಳಿಸಿದೆ. ಆದರೆ, ಎಸ್‌ಇಪಿ ವಿದ್ಯಾರ್ಥಿಗಳಿಗೂ ಸಹ ಅಂಕಪಟ್ಟಿ ಸಿಗುತ್ತಿಲ್ಲ. ಉನ್ನತ ವಿದ್ಯಾಭ್ಯಾಸಕ್ಕೆ ಅಂಕಪಟ್ಟಿ ಬೇಕಾಗಿರುವ ಕಾರಣ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಗಳ ಹತ್ತಿರ ಹೋಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ವಿಶ್ವವಿದ್ಯಾನಿಲಯದ ಬಳಿ ವಿದ್ಯಾರ್ಥಿಗಳು ಅಂಕಪಟ್ಟಿ ಕೇಳಿಕೊಂಡು ಹೋದರೆ ಡಿಜಿ ಲಾಕರ್‌ನಲ್ಲಿ ಅಂಕಪಟ್ಟಿ ತೆಗೆದುಕೊಳ್ಳಿ ಎಂದು ತಿಳಿಸುತ್ತಿದ್ದಾರೆ. ಆದರೆ, ಡಿಜಿ ಲಾಕರ್ ನಲ್ಲಿಯೂ ಸಹ ಅಂಕಪಟ್ಟಿ ಸಿಗುತ್ತಿಲ್ಲ. ವಿದ್ಯಾರ್ಥಿಗಳು ಕೇಳಿದರೆ ತಾಂತ್ರಿಕ ಸಮಸ್ಯೆ ಇದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತಾರೆ. ಈ ಸಮಸ್ಯೆ ಯುಸಿಸಿಎಂಎಸ್ ಜಾರಿಗೆ ಬಂದ ದಿನದಿಂದ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಉಂಟಾಗುತ್ತಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮತ್ತು ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಸಲ್ಲಿಸಲು ಸಹ ತೊಂದರೆ ಉಂಟಾಗುತ್ತಿದೆ. ಎನ್‌ಇಪಿಯಲ್ಲಿ ಆನ್‌ಲೈನ್ ಅಂಕಪಟ್ಟಿ ಜೊತೆಗೆ ಮುದ್ರಿತಾ ಅಂಕಪಟ್ಟಿ ನೀಡಬೇಕು ಎಂದು ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ರಾಜ್ಯಪಾಲರು ೨೨-೧೨-೨೦೨೨ ರಂದು ಎಲ್ಲಾ ವಿಶ್ವವಿದ್ಯಾನಿಲಯಗಳು ಮುದ್ರಿತಾ ಅಂಕಪಟ್ಟಿ ವಿತರಿಸಬೇಕು ಎಂದು ಆದೇಶ ನೀಡಿದ್ದರು ಸಹ ವಿಶ್ವವಿದ್ಯಾನಿಲಯಗಳು ಪಾಲಿಸುತ್ತಿಲ್ಲ. ಆದರಿಂದ, ತಕ್ಷಣ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಅಂಕಪಟ್ಟಿ ವಿತರಣೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಈ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡುತ್ತೇವೆ. ಜೊತೆಗೆ ಅಂಕಪಟ್ಟಿ ವಿತರಣೆಯಲ್ಲಿ ಸುಮಾರು ೨೦೦ ಕೋಟಿ ಹಣ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಆದ್ದರಿಂದ, ಅಂಕ ಪಟ್ಟಿ ವಿತರಣೆಗೆ ಸಂಬಂದಿಸಿದಂತೆ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಒತ್ತಾಯ ಮಾಡುತ್ತದೆ ಎಂದರು. ಎಸ್‌ಎಫ್‌ಐ ಪದಾಧಿಕಾರಿಗಳಾದ ನನ್ನುಸಾಬ್ ನದಾಫ, ಶೌಕತ್ ಅಲಿ, ಸಾಧೀಕ್ ಕಣವಿ, ದುದ್ದುಸಾಬ್, ಬಾಷಾ ಎಂ, ಕಿರಣ ಬಸನಾಳ, ಗಣೇಶ ಬಳ್ಳಾರಿ, ಹಜರತ ಅಲಿ, ಸುದೀಪ್ ಎಸ್., ಹಾಗೂ ಇತರರು ಇದ್ದರು.