ರಾಣಿಬೆನ್ನೂರು: ಹಾವೇರಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಏರಿಕೆ ಖಂಡಿಸಿ, ಶುಲ್ಕ ಇಳಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ತಾಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಆರ್‌ಟಿಇಎಸ್ ಪ್ರಥಮ ದರ್ಜೆ ಕಾಲೇಜು ಎದುರು ಪ್ರತಿಭಟನೆ ನಡೆಸಿ ಕಾಲೇಜಿನ ಪ್ರಾಂಶುಪಾಲರ ಮೂಲಕ ವಿಶ್ವವಿದ್ಯಾಲಯದ ಉಪಕುಲಪತಿಗೆ ಮನವಿ ಸಲ್ಲಿಸಿದರು.
ಎಸ್‌ಎಫ್‌ಐ ಮುಖಂಡ ಅರುಣ್ ಕುಮಾರ್ ನಗಾವತ್ ಮಾತನಾಡಿ, 2025-26ನೇ ಸಾಲಿನಲ್ಲಿ ನಡೆಯುವ ಬಿಎ, ಬಿಕಾಂ ಮತ್ತು ಬಿಎಸ್‌ಸಿ ಪದವಿಗಳ ಎಲ್ಲ ಸೆಮಿಸ್ಟರ್ ಪರೀಕ್ಷೆಗಳಿಗಾಗಿ ವಿಶ್ವವಿದ್ಯಾಲಯವು ಪರೀಕ್ಷಾ ಶುಲ್ಕ, ಅಂಕಪಟ್ಟಿ ಶುಲ್ಕ, ಘಟಿಕೋತ್ಸವ ಅರ್ಜಿ ಸೇರಿದಂತೆ ವಿವಿಧ ಹೆಸರಿನಲ್ಲಿ ₹1,095 ಹಾಗೂ ವೃತ್ತಿಪರ ತರಬೇತಿ (ಇಂಟರ್ನ್‌ಶಿಪ್) ಮೌಖಿಕ ಪರೀಕ್ಷೆಗೆ ₹550 ವಸೂಲಿ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಅರ್ಜಿ ಶುಲ್ಕ, ನಕಲು ಪ್ರಮಾಣಪತ್ರ, ಶ್ರೇಣಿ ಪ್ರಮಾಣಪತ್ರ ಸೇರಿದಂತೆ ಅನಾವಶ್ಯಕ ಶುಲ್ಕಗಳನ್ನು ಕಡ್ಡಾಯಗೊಳಿಸಿರುವುದನ್ನು ಕೈಬಿಡಬೇಕು. ಸರ್ಕಾರವು ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆದಾಯಮಿತಿಯೊಳಗಿನವರಿಗೆ ವಿನಾಯಿತಿ ನೀಡಿದ್ದರೂ, ವಿಶ್ವವಿದ್ಯಾಲಯವು ಸರ್ಕಾರದ ಆದೇಶಗಳನ್ನು ಲೆಕ್ಕಿಸದೆ ಸಂಪೂರ್ಣ ಶುಲ್ಕ ವಸೂಲಿ ಮಾಡುತ್ತಿರುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ ಎಂದರು.ರಾಜ್ಯದ ಇತರ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಾ ಮತ್ತು ಅಂಕಪಟ್ಟಿ ಶುಲ್ಕ ಮಾತ್ರ ವಸೂಲಿಸಲಾಗುತ್ತಿದೆ. ಹಾವೇರಿ ವಿಶ್ವವಿದ್ಯಾಲಯದಲ್ಲಿ ಮಾತ್ರ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿರುವುದು ಕೇವಲ ಹಣ ಗಳಿಸುವ ಉದ್ದೇಶವನ್ನು ತೋರಿಸುತ್ತದೆ. ಆದ್ದರಿಂದ ಏರಿಸಿದ ಶುಲ್ಕವನ್ನು ತಕ್ಷಣ ಇಳಿಸಿ, ವಿದ್ಯಾರ್ಥಿಗಳಿಂದ ವಸೂಲಿ ಮಾಡಿದ ಹೆಚ್ಚುವರಿ ಮೊತ್ತವನ್ನು ಮರುಪಾವತಿಸಬೇಕು ಎಂದು ಆಗ್ರಹಿಸಿದರು.
ಎಸ್‌ಎಫ್‌ಐ ಕಾಲೇಜು ಘಟಕದ ಅಧ್ಯಕ್ಷ ವಿಶ್ವನಾಥ ಗೌಡ, ಪವನ್ ದೇವಗಿರಿ, ವಿಕಾಸ್ ಕಿರಗೇರಿ, ಸಂತೋಷ್ ಪಾಟೀಲ್, ನಂದೀಶ ಬಳ್ಳಾರಿ, ಕೃಷ್ಣಪ್ಪ ಕುಶಲದ್, ವಿಕಾಸ್ ಮಡಿವಾಳರ, ಮನೋಜ್ ಅಂಗಡಿ, ಕಾಂತೇಶ್ ಗೊಲ್ಲರ್, ಹರೀಶ ಬಣಕಾರ, ದಿಲೀಪ್ ವೆಂಕಟಾಪುರ, ಅಭಿಷೇಕ ಸಾವಕ್ಕನವರ, ಆಕಾಶ್ ಕಲ್ಲಾಲ್, ವಿನಯ್ ಗೌಡರ, ಕಾರ್ತಿಕ್ ಹುಟ್ಟಿ, ರೇವಣಪ್ಪ ಕಾಳಿ, ವರುಣ ಮಡಿವಾಳರ, ವರುಣ ಗೌಡರ, ವಿನಾಯಕ ಮಲ್ಲಕ್ಕನವರ, ಗೌಸ್ ಸವಣೂರ, ಪವನ್ ಕಾಕೋಳ, ವಿಶ್ವ ಕೊರೆರ್, ಸಂಗಮೇಶ್ ಎ.ಕೆ., ನಿತಿನ್ ಮನೆಗಾರ್, ಮನೋಜ್ ಮಾಗನೂರು ಮತ್ತಿತರರಿದ್ದರು.