ಸಾರಾಂಶ
ಹಾವೇರಿ: ಹಾವೇರಿ ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿರುವ ಸರ್ಕಾರಿ ಎಸಿ, ಎಸ್ಟಿ ವಸತಿಯುತ ಪ್ರಥಮದರ್ಜೆ ಕಾಲೇಜುಗಳಿಗೆ ವಸತಿ ಸೌಲಭ್ಯಗಾಗಿ, ಹೆಚ್ಚುವರಿ ಬಸ್ ಸೌಲಭ್ಯಕ್ಕಾಗಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ತಾಲೂಕಿನ ಕಳ್ಳಿಹಾಳ ಗ್ರಾಮದ ಗುಡ್ಡದಲ್ಲಿರುವ ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಸತಿಯುತ ಪ್ರಥಮದರ್ಜೆ ಕಾಲೇಜಿನ ಎದುರು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ಈ ವೇಳೆ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಸತಿಯುತ ಪ್ರಥಮದರ್ಜೆ ಕಾಲೇಜುಗಳು ಪ್ರಾರಂಭವಾಗಿ ಏಳು ವರ್ಷಗಳು ಕಳೆದರೂ ವಿದ್ಯಾರ್ಥಿಗಳು ವಸತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಭಾಗಗಳಲ್ಲಿನ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ರಾಮೀಣ ಭಾಗದಲ್ಲಿ ವಸತಿಯುತ ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ 2017- 18ರಲ್ಲಿ ವಸತಿಯುತ ಸರ್ಕಾರಿ ಎಸ್ಸಿ, ಎಸ್ಟಿ ವಸತಿಯುತ ಪ್ರಥಮದರ್ಜೆ ಕಾಲೇಜುಗಳನ್ನು ಹಾವೇರಿ ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳಿಗೆ ಮಂಜೂರು ಮಾಡಲಾಗಿತ್ತು.ಹಾವೇರಿಯಲ್ಲಿ ಈ ಮೊದಲು ಬೇರೆ ಬೇರೆ ಕಡೆ ತರಗತಿ ನಡೆಸಿದ ಕಾಲೇಜು ಈಗ ತನ್ನದೇ ಆದ ಸುಸಜ್ಜಿತ ಕ್ಯಾಂಪಸ್‌ನಲ್ಲಿ ತರಗತಿ ಆರಂಭಿಸಿದೆ. ಆದರೆ, ಸರಿಯಾದ ನಿಯಮಗಳನ್ನು ರೂಪಿಸದ ಕಾರಣ ಏಳು ವರ್ಷ ಕಳೆದರೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯಾಗಿಲ್ಲ. ಈಗಂತೂ ಹಾವೇರಿ ತಾಲೂಕಿನ ಭೂವೀರಾಪುರದಲ್ಲಿ ನಿರ್ಮಾಣವಾಗಿರುವ ಕಾಲೇಜು ಕ್ಯಾಂಪಸ್‌ನಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ಕಟ್ಟಡಗಳು ಸಿದ್ಧವಾಗಿ ಎರಡು ವರ್ಷ ಕಳೆದಿದೆ. ಆದರೂ ಸರ್ಕಾರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಅಲ್ಲದೇ ಈ ಕುರಿತು ಸರ್ಕಾರದಲ್ಲಿಯೇ ಇನ್ನೂ ಗೊಂದಲದಲ್ಲಿದೆ ಎಂದು ದೂರಿದರು. ಎಸ್‌ಎಫ್‌ಐ ಮುಖಂಡ ಅರುಣ್ ನಾಗವತ್ ಮಾತನಾಡಿ, ಕೂಡಲೇ ಸರ್ಕಾರ ನಿರ್ಮಾಣವಾಗಿರುವ ಸರ್ಕಾರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿಯೇ ಕೂಡಲೇ ಮೂಲ ಸೌಕರ್ಯಗಳು, ಕಾಯಂ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ ಸೇರಿದಂತೆ ಸ್ವಂತ ಕಟ್ಟಡದಲ್ಲಿಯೇ ವಸತಿ ಸೌಲಭ್ಯ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು. ಪ್ರಾಂಶುಪಾಲ ಡಾ. ಡಿ.ಟಿ. ಪಾಟೀಲ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ಸುನೀಲ್ ಕುಮಾರ್ ಎಲ್., ಚಾಮುಂಡೇಶ್ವರಿ, ಉಷಾ ಪೂಜಾರ್, ಪವಿತ್ರ ಶಿಗಾಂವಿ, ನಿಂಗಮ್ಮ ಅನ್ವೇರಿ, ಪ್ರಿಯ ಕಟ್ಟಿವಾಣಿ, ರಾಧಿಕಾ ಹುರಳಿಕೊಪ್ಪ, ಯಶೋದಾ ಗುಳೇದ್, ರಮೇಶ ಕೂನಬೇವು, ಶಿವು, ಭಾಗ್ಯಲಕ್ಷ್ಮಿ, ಮಹೇಶ, ಅಜೀಮ್, ಹುಲಿಗೆಮ್ಮ, ಕವನ ದೊಡ್ಡಮನಿ, ಗುದ್ದಲೇಶ ಹಳ್ಳಿಕೇರಿ, ರಾಘವೇಂದ್ರ ಗೂಣೆಪ್ಪನವರ, ಮಂಜುನಾಥ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.