ಶಾ ದೆಹಲಿಗೆ ಕರೆದಿದ್ದಾರೆ, ಬಿಜೆಪಿ ಗೊಂದಲ ಶೀಘ್ರ ಇತ್ಯರ್ಥ

| Published : Mar 10 2025, 12:17 AM IST

ಶಾ ದೆಹಲಿಗೆ ಕರೆದಿದ್ದಾರೆ, ಬಿಜೆಪಿ ಗೊಂದಲ ಶೀಘ್ರ ಇತ್ಯರ್ಥ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಬೆಳವಣಿಗೆಗಳ ಹಿನ್ನೆಲೆ ಶೀಘ್ರವೇ ದೆಹಲಿಗೆ ಬರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದು, ಪಕ್ಷದಲ್ಲಿ ಎಲ್ಲವನ್ನೂ ನಮ್ಮ ರಾಷ್ಟ್ರೀಯ ನಾಯಕರು ಸರಿಪಡಿಸುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಯತ್ನಾಳ್, ಬಿಎಸ್‌ವೈ ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ: ಶಾಸಕ ಬಿ.ಪಿ.ಹರೀಶ ಹೇಳಿಕೆ - ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರೆ ಯಡಿಯೂರಪ್ಪ ಮಕ್ಕಳು ಹಾಳಾಗಿ ಹೋಗಲಿ ಎಂದ ಶಾಸಕ

- ಎದುರಾಳಿಗಳೊಂದಿಗೆ ಒಳಒಪ್ಪಂದ ಮಾಡಿಕೊಂಡವರನ್ನು ನಾವು ಬೆಂಬಲಿಸಲಿಕ್ಕಾಗುತ್ತದಾ? - - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಬೆಳವಣಿಗೆಗಳ ಹಿನ್ನೆಲೆ ಶೀಘ್ರವೇ ದೆಹಲಿಗೆ ಬರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದು, ಪಕ್ಷದಲ್ಲಿ ಎಲ್ಲವನ್ನೂ ನಮ್ಮ ರಾಷ್ಟ್ರೀಯ ನಾಯಕರು ಸರಿಪಡಿಸುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಅರವಿಂದ ಲಿಂಬಾವಳಿ ಪತ್ರ ನೀಡಿದ್ದು, ಶೀಘ್ರವೇ ದೆಹಲಿಗೆ ಬರುವಂತೆಯೂ ಸೂಚನೆ ನೀಡಿದ್ದಾರೆ. ಸದ್ಯದಲ್ಲೇ ಪಕ್ಷದಲ್ಲಿ ಎಲ್ಲವೂ ಸರಿಯಾಗುವ ವಿಶ್ವಾಸವಿದೆ ಎಂದರು.

ಸಿಎಂ ಸಿದ್ದರಾಮಯ್ಯನವರ ಮುಸ್ಲಿಂ ಓಲೈಕೆಯಿಂದ ರಾಜ್ಯದ ಜನತೆ ರೋಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಾಗಬೇಕು. ಹಾಗೆಂದು ಅಪ್ರಾಮಾಣಿಕರನ್ನು ಪಕ್ಷದಲ್ಲಿ ಉಳಿಸಬೇಕೆಂದಲ್ಲ. ಎದುರಾಳಿಗಳೊಂದಿಗೆ ಒಳಒಪ್ಪಂದ ಮಾಡಿಕೊಂಡವರನ್ನು ನಾವು ಬೆಂಬಲಿಸಲಿಕ್ಕಾಗುತ್ತದಾ? ರಾಷ್ಟ್ರೀಯ ನಾಯಕರು ಎಲ್ಲವನ್ನೂ ಸರಿ ಮಾಡಲಿದ್ದು, ಅವರ ತೀರ್ಮಾನಕ್ಕೆ ನಾವು ಬದ್ಧ ಎಂದು ಸ್ಪಷ್ಟಪಡಿಸಿದರು.

ಬಸವನಗೌಡ ಪಾಟೀಲ್ ಯತ್ನಾಳ್ ನಾವೆಲ್ಲರೂ ಈ ಹಿಂದೆ ದೆಹಲಿಗೆ ಹೋಗಿದ್ದು, ನಾಯಕರ ಭೇಟಿಗೆ ಅಲ್ಲ. ವಕ್ಫ್ ಆಸ್ತಿ ವಿಚಾರಕ್ಕೆ ಹೋಗಿ, ಜಗದಾಂಬಿಕಾ ಪಾಲ್‌ ಅವರನ್ನು ಭೇಟಿ ಮಾಡಿದ್ದೆವು. ನಮ್ಮ ಸಾಕ್ಷ್ಯವನ್ನೇ ಮುಖ್ಯವಾಗಿ ಪರಿಗಣಿಸಿರುವುದು ಗಮನಾರ್ಹ. ಆದರೆ, ಮಾಧ್ಯಮಗಳಲ್ಲಿ ವರಿಷ್ಠರ ಭೇಟಿಗೆ ಅವಕಾಶವೇ ಇಲ್ಲವೆಂಬುದಾಗಿ ಬಂದಿತು. ಅಲ್ಲದೇ, ರಾಜ್ಯದ ಎಲ್ಲ ಸಂಸದರು ಒಂದೇ ಕಡೆ ಸಿಗುತ್ತಾರೆಂಬ ಕಾರಣಕ್ಕೆ ನಮ್ಮ ರಾಜ್ಯದ ಸಂಸದರನ್ನು ಭೇಟಿ ಮಾಡಿದ್ದೆವು ಎಂದು ಹರೀಶ್‌ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಎಸ್‌ವೈ ಮಕ್ಕಳು ಹಾಳಾಗಿಹೋಗಲಿ:

ಮಾಜಿ ಸಿಎಂ ಯಡಿಯೂರಪ್ಪ ಪಕ್ಷದ ವರಿಷ್ಠರನ್ನು ಬ್ಲಾಕ್ ಮೇಲ್ ಮಾಡಿಕೊಂಡೇ ಬಂದವರು. ಸಮಾಜವನ್ನು, ಮಠಾಧೀಶರನ್ನು ಸೇರಿಸಿ, ಬ್ಲಾಕ್ ಮೇಲ್ ಮಾಡುವುದು ಇದು ಹಳೆಯ ಆಟ. ಪಕ್ಷದ್ರೋಹ, ಮ್ಯಾಚ್ ಫಿಕ್ಸಿಂಗ್ ಎಲ್ಲಾ ಹಳೆಯವು. ಒಂದುವೇಳೆ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರೆ ಯಡಿಯೂರಪ್ಪ ಮಕ್ಕಳು ಹಾಳಾಗಿ ಹೋಗಲಿ ಎಂದು ಅವರು ತಿಳಿಸಿದರು.

ಯತ್ನಾಳ್, ರಮೇಶ ಜಾರಕಿಹೊಳಿ, ಯಡಿಯೂರಪ್ಪ ಮಾತ್ರವಲ್ಲ, ಯಾರೇ ಆಗಲಿ ಹೊಂದಾಣಿಕೆ ರಾಜಕೀಯ, ಭ್ರಷ್ಟಾಚಾರ, ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದರೆ ಅಂತಹ ಜನಪ್ರತಿನಿಧಿಗಳು ಹಾಳಾಗಿ ಹೋಗುತ್ತಾರೆ. ಮ್ಯಾಚ್ ಫಿಕ್ಸಿಂಗ್ ಎಂಬುದು ಕ್ಷೇತ್ರದ ಜನರಿಗೆ ಮಾಡುವ ವಂಚನೆ . ನಾನು ಯಾರಿಂದಲೂ ಪ್ರಭಾವಿತನಾಗಿ ರಾಜಕೀಯಕ್ಕೆ ಬಂದವನಲ್ಲ. ಯಾರೇ ತಪ್ಪು ಮಾಡಿದ್ದರೂ ತಪ್ಪನ್ನು ಖಂಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಹೊನ್ನಾಳಿ ಮಹಾಶಯರ ಬಗ್ಗೆ ಮಾತಾಡೋದಿಲ್ಲ:

ಅದೇ ರೀತಿ ಬಿಜೆಪಿಯಲ್ಲಿರುವ ಭ್ರಷ್ಟಾಚಾರಿಗಳು, ಹೊಂದಾಣಿಕೆ ರಾಜಕೀಯ ಮಾಡುವವರ ವಿರುದ್ಧವೂ ಹೋರಾಟ ನಡೆಸಿದ್ದೇನೆ. ಈ ಬಗ್ಗೆ ಕೇಂದ್ರ ನಾಯಕರು ಯಾಕೆ ಗಮನ ಹರಿಸುತ್ತಿಲ್ಲ ಎಂಬುದೇ ಗೊತ್ತಾಗುತ್ತಿಲ್ಲ. ಹೊನ್ನಾಳಿ ಮಹಾಶಯರ ಬಗ್ಗೆ ನಾನು ಮಾತನಾಡುವುದೇ ಇಲ್ಲ. ಮುಂಚಿನಿಂದಲೂ ಬ್ಲಾಕ್ ಮೇಲ್ ರಾಜಕಾರಣವನ್ನೇ ಆ ಮಹಾಶಯರು ಮಾಡಿಕೊಂಡು ಬಂದಿದ್ದಾರೆ. ಇದೆಲ್ಲದಕ್ಕೂ ಶೀಘ್ರವೇ ತಾರ್ಕಿಕ ಅಂತ್ಯ ಸಿಗಲಿದೆ ಎಂಬುದಾಗಿ ಬಿ.ಪಿ.ಹರೀಶ ಹೇಳಿದರು.

ಈ ಸಂದರ್ಭ ಮುಖಂಡ ವೀರೇಶ ಆದಾಪುರ ಇದ್ದರು.

- - -

ಬಾಕ್ಸ್‌* ಮಾನಸಿಕ ಸಮಾತೋಲನ ಕಳದುಕೊಂಡ ಸಿದ್ದು ಬಜೆಟ್‌

- ದೇಶಕ್ಕೆ ಮಾರಕ, ಒಂದು ಧರ್ಮದ ಪರ ಸಿಎಂ ಬಜೆಟ್‌ ಮಂಡನೆ: ಶಾಸಕ ಹರೀಶ ಕಿಡಿ ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾನಸಿಕ ಸಮತೋಲನ ಕಳೆದುಕೊಂಡವರಂತೆ, ದೇಶಕ್ಕೆ ಮಾರಕವಾದ, ಯಾವುದೋ ಒಂದು ಧರ್ಮದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ 16ನೇ ಬಜೆಟ್‌ ಮಂಡಿಸಿದ್ದು ಸರಿ ಇಲ್ಲ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಗೌಡ ಆಕ್ಷೇಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಓಲೈಸುವ ಬಜೆಟ್‌ ಅನ್ನು ಸಿದ್ದರಾಮಯ್ಯ ಮಂಡಿಸಿದ್ದು, ರಾಜ್ಯದ ಸರ್ವಜನಾಂಗದ ಅಭಿವೃದ್ಧಿಗೆ ಒತ್ತು ನೀಡುವ ಬದಲು ಕೇವಲ ಅಲ್ಪಸಂಖ್ಯಾತರ ಓಟಿನ ಕಡೆಗೆ ಗಮನ ನೀಡಿದ್ದಾರೆ ಎಂದರು.

ಅಲ್ಪಸಂಖ್ಯಾತರು ಅಭಿವೃದ್ಧಿಯಾದರೆ ಇಡೀ ರಾಜ್ಯವೇ ಅಭಿವೃದ್ಧಿ ಆಗುತ್ತದೆಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಂತಿದೆ. ರಾಜ್ಯದಲ್ಲಿ ಹಿಂದುಳಿದ ಸಮಾಜಗಳಿದ್ದರೂ ಅವುಗಳ ಬಗ್ಗೆ ಸಿಎಂ ತಮ್ಮ ಬಜೆಟ್‌ನಲ್ಲಿ ಕಿಂಚಿತ್ತೂ ಗಮನಹರಿಸಿಲ್ಲ. ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನೇ ಖರ್ಚು ಮಾಡದೇ, ಪರಿಶಿಷ್ಟ ಜಾತಿ- ಪಂಗಡಗಳಿಗೆ ಘೋರ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಶೇ.90 ಭರವಸೆಗಳು ಸುಳ್ಳಾಗಿವೆ. ರಾಜ್ಯದ ಗುತ್ತಿಗೆದಾರರಿಗೂ ಬಿಡುಗಡೆ ಮಾಡದೇ, ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೂ ಅನುದಾನ ಕೊಡಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರವು ರಾಜ್ಯವನ್ನು ತಂದು ನಿಲ್ಲಿಸಿದೆ. ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ತರುವ ಮಟ್ಟಕ್ಕೆ ಸಿದ್ದರಾಮಯ್ಯ ತಮ್ಮ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಹರೀಶ್ ಟೀಕಿಸಿದರು.

ಯಾವುದೇ ಕೊಡುಗೆಗಳೇ ಇಲ್ಲದ ಬಜೆಟ್ ಇದು. ಇನ್ನು ದಾವಣಗೆರೆ ಜಿಲ್ಲೆ ಅಭಿವೃದ್ಧಿಗಾಗಿ ಯೋಜನೆ ರೂಪಿಸಬೇಕಾದ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಯಾವುದೇ ಕೆಲಸಕ್ಕೆ ಅನುಮೋದನೆ ನೀಡಬೇಕಾದರೂ ಭ್ರಷ್ಟಾಚಾರ ಮಾಡಲಾಗುತ್ತಿದೆ. ಬಜೆಟ್‌ ಪೂರ್ವದಲ್ಲಿ ನನ್ನ ಬಿಡಿ, ವಿಪಕ್ಷ ಶಾಸಕ. ಉಳಿದ ಕಾಂಗ್ರೆಸ್ ಶಾಸಕರ ಸಭೆಯನ್ನಾದರೂ ಕರೆದು, ಅಭಿವೃದ್ಧಿ ಕುರಿತಂತೆ ಸಭೆ ನಡೆಸಿ, ಬಜೆಟ್‌ನಲ್ಲಿ ಅನುದಾನ ನೀಡುವಂತೆ ಸಿಎಂ ಮೇಲೆ ಒತ್ತಡ ಹೇರಬೇಕಿತ್ತು. ಆದರೆ, ಇಲ್ಲಿನ ಸಚಿವರು ಅದ್ಯಾವುದನ್ನೂ ಮಾಡಿಲ್ಲ ಎಂದು ದೂರಿದರು.

- - - -9ಕೆಡಿವಿಜಿ62: ದಾವಣಗೆರೆಯಲ್ಲಿ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.