ಶಾ ವಿಶೇಷ ಅಧಿಕಾರಿ ಸೋಗಲ್ಲಿ 2.7 ಕೋಟಿ ವಂಚನೆ!

| Published : Nov 20 2025, 12:30 AM IST

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿಶ್ ಶಾ ಅವರ ವಿಶೇಷ ಅಧಿಕಾರಿ ಸೋಗಿನಲ್ಲಿ ಪ್ರತಿಷ್ಠಿತ ಮಠದ ಜಮೀನು ಕೊಡಿಸುವುದಾಗಿ ನಂಬಿಸಿ ಐಎಎಸ್ ಅಧಿಕಾರಿ ಸೋದರ ಸಂಬಂಧಿಗೆ 2.7 ಕೋಟಿ ರು. ಏಮಾರಿಸಿದ್ದ ವಂಚಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಗೃಹ ಸಚಿವ ಅಮಿಶ್ ಶಾ ಅವರ ವಿಶೇಷ ಅಧಿಕಾರಿ ಸೋಗಿನಲ್ಲಿ ಪ್ರತಿಷ್ಠಿತ ಮಠದ ಜಮೀನು ಕೊಡಿಸುವುದಾಗಿ ನಂಬಿಸಿ ಐಎಎಸ್ ಅಧಿಕಾರಿ ಸೋದರ ಸಂಬಂಧಿಗೆ 2.7 ಕೋಟಿ ರು. ಏಮಾರಿಸಿದ್ದ ವಂಚಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಆರ್‌ಪಿಸಿ ಲೇಔಟ್ ನಿವಾಸಿ ಸುಜಯೇಂದ್ರ ಅಲಿಯಾಸ್ ಸುಜಯ್‌ ಬಂಧಿತನಾಗಿದ್ದು, ಆರೋಪಿಯಿಂದ ನಕಲಿ ಲೆಟರ್ ಹೆಡ್ ಸೇರಿ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಭೂ ವಂಚನೆ ಸಂಬಂಧ ಜಮ್ಮು-ಕಾಶ್ಮೀರ ಮೂಲದ ವ್ಯಕ್ತಿ ದೂರು ನೀಡಿದ್ದರು. ಅದರನ್ವಯ ತನಿಖೆಗಿಳಿದ ವಿಜಯನಗರ ಪೊಲೀಸರು ನಗರದ ಆರ್‌ಸಿಪಿ ಲೇಔಟ್‌ನಲ್ಲಿದ್ದ ಸುಜಯ್ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಐಎಎಸ್ ಅಧಿಕಾರಿ ಸೋದರನಿಗೆ ದೋಖಾ:

ಸುಜಯ್ ಕ್ರಿಮಿನಲ್ ಹಿನ್ನಲೆ ಹೊಂದಿದ್ದು, ಆತನ ಮೇಲೆ 2013ರಿಂದ ವಂಚನೆಗಳು ಪ್ರಕರಣಗಳು ದಾಖಲಾಗಿವೆ. ತನ್ನನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶೇಷ ಅಧಿಕಾರಿ ಎಂದು ಸುಜಯ್ ಪರಿಚಯಿಸಿಕೊಂಡಿದ್ದ. ಕೆಲವರ ಬಳಿ ಪ್ರಧಾನ ಮಂತ್ರಿ ಕಚೇರಿ ಅಧಿಕಾರಿ ಎಂದು ಸಹ ಹೇಳಿಕೊಂಡಿದ್ದ. ಹೀಗೆ ಪ್ರಭಾವಿ ವ್ಯಕ್ತಿಗಳ ಹೆಸರು ಬಳಸಿ ಜನರಿಗೆ ಮರಳು ಮಾಡಿ ವಂಚಿಸುವುದು ಸುಜಯ್ ಕೃತ್ಯದ ಮಾದರಿಯಾಗಿತ್ತು ಎಂದು ಮೂಲಗಳು ಹೇಳಿವೆ.

ಸಮಾಜದಲ್ಲಿ ಗಣ್ಯವ್ಯಕ್ತಿಯಂತೆ ಛದ್ಮವೇಷ ಧರಿಸಿದ್ದ ಸುಜಯ್‌, ಮಲ್ಲೇಶ್ವರ ಸಮೀಪದ ಬ್ರಾಹ್ಮಣ ಸಮುದಾಯದ ಮಠವೊಂದರ ಟ್ರಸ್ಟಿ ಕೂಡ ಆಗಿದ್ದ. ಅಲ್ಲದೆ, ಜಮ್ಮು-ಕಾಶ್ಮೀರದಲ್ಲಿ ಹಿಂದೂ ಸಮಾಜದ ಕಾರ್ಯಕ್ರಮಗಳಲ್ಲಿ ಸುಜಯ್ ಸಕ್ರಿಯವಾಗಿ ಗುರುತಿಸಿಕೊಂಡಿದ್ದ. ಆಗ ಆತನಿಗೆ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯೊಬ್ಬರ ಸೋದರ ಸಂಬಂಧಿ ಪರಿಚಯವಾಗಿದೆ. ಈ ಸ್ನೇಹ ಕ್ರಮೇಣ ವ್ಯವಹಾರಕ್ಕೆ ತಿರುಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಮಲ್ಲೇಶ್ವರದ ಮಠಕ್ಕೆ ಸೇರಿದ ಜಮೀನಿದೆ. ಈ ಭೂಮಿಯನ್ನು ಮಾರಾಟಕ್ಕೆ ಮಠಾಧಿಪತಿಗಳು ಮುಂದಾಗಿದ್ದು, ತಮಗೆ ಕಡಿಮೆ ಬೆಲೆ ಕೊಡಿಸುವುದಾಗಿ ಹೇಳಿದ್ದ. ಕೊನೆಗೆ 2.7 ಕೋಟಿ ರು.ಅನ್ನು ಐಎಎಸ್ ಅಧಿಕಾರಿ ಸೋದರನಿಂದ ಸುಜಯ್ ಪಡೆದಿದ್ದ. ಆದರೆ ಎರಡು ವರ್ಷ ಕಳೆದರೂ ಹಣವೂ ಇಲ್ಲ, ಭೂಮಿಯೂ ಇಲ್ಲ ಎನ್ನುವಂತಾಗಿದೆ. ಕೊನೆಗೆ ಮಠಾಧಿಪತಿ ಅವರನ್ನು ಪರಿಚಿತರ ಮೂಲಕ ಭೇಟಿಯಾಗಿ ಸಂತ್ರಸ್ತರು ದೂರು ನೀಡಿದ್ದರು.

ತಮ್ಮ ಮಠದ ಹೆಸರು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸುಜಯ್ ವಿರುದ್ಧ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ ವಿಮಾನ ನಿಲ್ದಾಣದ ಬಳಿ ಮಠಕ್ಕೆ ಸೇರಿದ ಯಾವುದೇ ಭೂಮಿ ಇಲ್ಲ ಎಂದು ಸಹ ಸ್ಪಷ್ಟಪಡಿಸಿದ್ದರು ಎಂದು ತಿಳಿದು ಬಂದಿದೆ.

ಅಲ್ಲದೆ ಮಠಕ್ಕೆ ಸುಜಯ್‌ನನ್ನು ಕರೆಸಿ ವಂಚನೆ ಬಗ್ಗೆ ಸ್ವಾಮೀಜಿ ತರಾಟೆಗೆ ತೆಗೆದುಕೊಂಡಿದ್ದರು. ಆಗ ತಾನು ಹಣ ಮರಳಿಸುವುದಾಗಿ ಹೇಳಿ ಖಾಲಿ ಚೆಕ್‌ಗಳನ್ನು ಸುಜಯ್ ನೀಡಿದ್ದ. ಆದರೆ ಏಳೆಂಟು ತಿಂಗಳು ಕಳೆದರು ಹಣ ಮರಳಿಸದೆ ಹೋದಾಗ ಕೊನೆಗೆ ವಿಜಯನಗರ ಠಾಣೆಗೆ ಸಂತ್ರಸ್ತರು ದೂರು ನೀಡಿದ್ದರು ಎಂದು ತಿಳಿದು ಬಂದಿದೆ.

-ಬಾಕ್ಸ್‌-ಗೃಹ ಇಲಾಖೆಗೆ ಪತ್ರ

ಪ್ರಧಾನ ಮಂತ್ರಿ ಕಚೇರಿ ಹಾಗೂ ಕೇಂದ್ರ ಗೃಹ ಇಲಾಖೆಯ ಹೆಸರು ದುರ್ಬಳಕೆ ಸಂಬಂಧ ಸುಜಯ್ ಕುರಿತು ಪೊಲೀಸರು ಪತ್ರ ಬರೆದು ಮಾಹಿತಿ ನೀಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತದೆ. 2013ರಲ್ಲಿ ಕೇಂದ್ರ ಸಚಿವರ ಹೆಸರು ಉಪಯೋಗಿಸಿ ಆತ ವಂಚಿಸಿದ್ದ ಆರೋಪವಿದೆ.