Shahapur Bandh today, demanding water for farmers' crops.

-ಶಹಾಪುರ ಬಂದ್‌ಗೆ ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ, ಚೆನ್ನಪ್ಪ ಆನೆಗುಂದಿ ಕರೆ

--

ಕನ್ನಡಪ್ರಭ ವಾರ್ತೆ ಯಾದಗಿರಿ ರೈತರು ಬೆಳೆದ ಬೆಳೆಗೆ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟ ಮುಂದುವರೆದಿದ್ದು, ಶುಕ್ರವಾರ ಸಂಪೂರ್ಣ ಶಹಾಪುರ ಬಂದ್‌ಗೆ ರೈತ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಟೆ ಹಾಗೂ ಚೆನ್ನಪ್ಪ ಆನೆಗುಂದಿ ಕರೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನ.19ರಂದು ಮುಖ್ಯಮಂತ್ರಿಗಳು ಸಭೆ ಮಾಡಿ ರೈತರಿಗೆ ಸಿಹಿ ಸುದ್ದಿ ನೀಡುತ್ತಾರೆ ಎನ್ನುವ ಭರವಸೆ ರೈತರಲ್ಲಿ ಮೂಡಿತ್ತು.

ಆದರೆ, ಈ ಭಾಗದ ಶಾಸಕರನ್ನು ಆಹ್ವಾನಿಸದೆ, ನೀರು ಹರಿಸುವ ಕುರಿತು ಯಾವುದೇ ಸಭೆ ಮಾಡದೇ ನಿರಾಸೆ ಮೂಡಿಸಿದ್ದಾರೆ. ಗುರುವಾರ ನಡೆವ ಸಭೆಯಲ್ಲಿ ರೈತರ ಬೆಳೆಗಳಿಗೆ ನೀರು ಸಿಗುತ್ತದೆ ಎನ್ನುವ ಆಶಾ ಭಾವನೆ ಮೂಡಿತ್ತು. ಆದರೆ, ರೈತ ವಿರೋಧಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿರಂತರವಾಗಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಯಾವುದೇ ರೀತಿ ಸ್ಪಂದಿಸುತ್ತಿಲ್ಲ.

ಇದರಿಂದ ರೈತರ ಮೇಲಿನ ಅವರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಮೈ ಕೊರೆಯುವ ಚಳಿಯಲ್ಲಿ ರೈತರು ಹಗಲು ರಾತ್ರಿ ಹೋರಾಟ ನಡೆಸುತ್ತಿದ್ದರೂ, ರೈತರ ಜೀವ ಸರ್ಕಾರದ ಲೆಕ್ಕಕ್ಕಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ರೈತರ ಹೋರಾಟ ಇನ್ನಷ್ಟು ಬಿಗಿಗೊಳ್ಳಲಿದ್ದು, ನಾಳೆ ಸಂಪೂರ್ಣ ಶಹಾಪುರ ಬಂದ್‌ಗೆ ಕರೆ ನೀಡಲಾಗಿದೆ. ಆದ್ದರಿಂದ ಎಲ್ಲ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ರೈತರು ಪಾಲ್ಗೊಂಡು ಬಂದ್ ಯಶಸ್ವಿಗೊಳಿಸಲು ಅವರು ಮನವಿ ಮಾಡಿದ್ದಾರೆ.

ಅಲ್ಲದೆ, ಹೋರಾಟ ಮಾಡುತ್ತಿದ್ದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ಬೀದರ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಸರ್ಕಾರ ಹೋರಾಟದ ವೇಳೆ ಏಕಾಏಕಿ ಬಂಧಿಸಿರುವುದನ್ನು ಮಲ್ಲಿಕಾರ್ಜುನ ಪೇಟೆ ತೀವ್ರವಾಗಿ ಖಂಡಿಸಿದ್ದಾರೆ.

ಜನ ವಿರೋಧಿ ಸರ್ಕಾರ ರೈತ ನಾಯಕರನ್ನು ಬಂಧಿಸಿರುವುದು ಅತ್ಯಂತ ನೋವಿನ ಸಂಗತಿ. ಬಂಧನಕ್ಕೆ ಒಳಗಾಗಿರುವ ಇಬ್ಬರು ನಾಯಕರನ್ನು ತಕ್ಷಣದಿಂದಲೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ರೈತರ ಹೋರಾಟ ಬಂದ್‌ ಕರೆಗೆ ಸಾರ್ವಜನಿಕರು, ವ್ಯಾಪಾರಸ್ಥರು ಸೇರಿದಂತೆ ಎಲ್ಲರೂ ಸ್ವಯಂಪ್ರೇರಿತವಾಗಿ ಬೆಂಬಲಿಸಬೇಕಿದೆ ಎಂದು ಮನವಿ ಮಾಡಿರುವ ಚೆನ್ನಪ್ಪ ಆನೆಗುಂದಿ, ರೈತಪರ ಕಾಳಜಿಯುಳ್ಳ ಈ ಬಂದ್ ಕರೆಗೆ ಜನರು ಸ್ಪಂದಿಸುವ ಭರವಸೆ ಇದೆಯೆಂದಿದ್ದಾರೆ.

ಫೋಟೊ: 19ವೈಡಿಆರ್10

ಶಹಾಪುರ ಬಂದ್‌ಗೆ ರೈತ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಟೆ ಹಾಗೂ ಚೆನ್ನಪ್ಪ ಆನೆಗುಂದಿ ಕರೆ ನೀಡಿದ್ದಾರೆ.