ಅಮಿತ್‌ ಶಾ ಹೇಳಿಕೆ ಖಂಡಿಸಿ ಶಹಾಪುರ ಬಂದ್‌ ಯಶಸ್ವಿ

| Published : Jan 01 2025, 12:00 AM IST

ಅಮಿತ್‌ ಶಾ ಹೇಳಿಕೆ ಖಂಡಿಸಿ ಶಹಾಪುರ ಬಂದ್‌ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆಂದು ದೂರಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟ, ಎಸ್ಡಿಪಿಐ, ಸಿಪಿಐಎಂ, ವಾಲ್ಮೀಕಿ ಸಂಘ, ವಕೀಲರ ಸಂಘ, ಸಂತ ಸೇವಾಲಾಲ್ ಸಂಘ, ತಾಲೂಕು ಕುರುಬರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘ, ವಿದ್ಯಾರ್ಥಿ ಸಂಘಟನೆ, ಪ್ರಗತಿಪರ ಚಿಂತಕರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶಹಾಪುರ ಬಂದ್‌ ಯಶಸ್ವಿಯಾಯಿತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾವಚಿತ್ರಕ್ಕೆ ಮೂತ್ರ ವಿಸರ್ಜನೆ । ಅಮಿತ್ ಶಾ ಅಣುಕು ಶವಯಾತ್ರೆ ಮಾಡಿ ಆಕ್ರೋಶ

ಕನ್ನಡಪ್ರಭ ವಾರ್ತೆ ಶಹಾಪುರ

ಡಾ. ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆಂದು ದೂರಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟ, ಎಸ್ಡಿಪಿಐ, ಸಿಪಿಐಎಂ, ವಾಲ್ಮೀಕಿ ಸಂಘ, ವಕೀಲರ ಸಂಘ, ಸಂತ ಸೇವಾಲಾಲ್ ಸಂಘ, ತಾಲೂಕು ಕುರುಬರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘ, ವಿದ್ಯಾರ್ಥಿ ಸಂಘಟನೆ, ಪ್ರಗತಿಪರ ಚಿಂತಕರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶಹಾಪುರ ಬಂದ್‌ ಯಶಸ್ವಿಯಾಯಿತು.

ನಗರದ ಕನ್ಯಾಕೋಳೂರು ಅಗಸಿಯಿಂದ ರಾಜ್ಯ ಹೆದ್ದಾರಿಯಲ್ಲಿ ಮೆರವಣಿಗೆ ಹಾಗೂ ಅಮಿತ್ ಶಾ ಅವರ ಅಣುಕು ಶವಯಾತ್ರೆ ಮಾಡಿ ಬಸವೇಶ್ವರ ವೃತ್ತದ ಬಳಿ ಅವರ ಪ್ರತಿಕೃತಿ ದಹಿಸಿ, ಶವಕ್ಕೆ ಮೂತ್ರ ವಿಸರ್ಜನೆ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿ ಪ್ರತಿಭಟನಾಕಾರರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನಗರದಲ್ಲಿ ಸಾರಿಗೆ ಬಸ್ ಸಂಚಾರ ಸ್ಥಗಿತವಾಗಿದ್ದು, ಅಂಗಡಿ-ಮುಗ್ಗಟ್ಟುಗಳು ಬಂದ್ ಆಗಿದ್ದವು. ಈ ಹೋರಾಟಕ್ಕೆ ಕಾರ್ಮಿಕ, ರೈತ, ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಬಂದ್ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು.

ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ರಸ್ತೆ ಬದಿಯಲ್ಲಿ ಹೂ, ಹಣ್ಣು‌ ಮಾರಾಟಕ್ಕೂ ಅವಕಾಶ ಇರಲಿಲ್ಲ.

ಮನುಸ್ಮೃತಿ ಆರಾಧಕರ ವಿರುದ್ಧ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಂಪರೆಯನ್ನು ರಕ್ಷಿಸಲು ನಾವು ಹೋರಾಡುತ್ತೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಿ ಅವರನ್ನು ಈ ದೇಶದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮಂಗಳಮುಖಿಯರು ಬೆಂಬಲ:

ಸಂವಿಧಾನ ಮೂಲಕ ಎಲ್ಲಾ ವರ್ಗದ ಜನರ ಜೀವನ ಭದ್ರತೆಗಾಗಿ ಜೀವಿಸುವ ಹಕ್ಕು ಸೇರಿದಂತೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಅಂಬೇಡ್ಕರ್ ಅವರನ್ನು ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ನಡೆಯುತ್ತಿರುವ ಈ ಹೋರಾಟಕ್ಕೆ ನಾವು ಬೆಂಬಲ ನೀಡಿರುವುದಾಗಿ ಮಂಗಳಮುಖಿಯರು ತಿಳಿಸಿದರು.

* ಪ್ರತಿಭಟನೆಗೆ ಹಗಲು ವೇಷದಾರಿಗಳ ಬೆಂಬಲ:

ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಖಂಡಿಸಿ ನಡೆಯುತ್ತಿರುವ ಈ ಹೋರಾಟಕ್ಕೆ ಹಗಲು ವೇಷಧಾರಿಗಳು ಪುಷ್ಪ 2 ಚಿತ್ರದ ವೇಷ ತೊಟ್ಟು ಬೆಂಬಲ ಸೂಚಿಸಿ ಗಮನ ಸೆಳೆದರು.

ಬಿಗಿ ಪೊಲೀಸ್ ಭದ್ರತೆ:

ಈಗಾಗಲೇ ನಾವು ಕಾನೂನು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದಾದ್ಯಂತ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿಭಟನಾ ಭದ್ರತೆಗೆ ಈಗಾಗಲೇ 1 ಡಿವೈಎಸ್ಪಿ, 4 ಸಿಪಿಐ, 13 ಪಿಎಸ್ ಐ, 10 ಎಎಸ್ ಐ, 3 ಡಿಎಆರ್ ತುಕಡಿ, 100 ಜನ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಹೋಂ ಗಾರ್ಡ್‌ಗಳನ್ನು ಸಹ ನಾವು ಪ್ರತಿಭಟನೆ ಭದ್ರತೆಗೆ ನಿಯೋಜನೆ ಮಾಡಿದ್ದೇವೆ.ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪ್ರತಿಭಟನಾಕಾರರಿಗೆ ತಿಳಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ತಿಳಿಸಿದರು.