ಶಹಾಪುರ: ರಸಗೊಬ್ಬರಕ್ಕಾಗಿ ರೈತರ ಪರದಾಟ

| Published : Aug 04 2025, 11:45 PM IST

ಸಾರಾಂಶ

ರಸಗೊಬ್ಬರಕ್ಕಾಗಿ ರೈತರ ಪರದಾಟ ಮುಂದುವರೆದಿದೆ. ಸಮರ್ಪಕ ರಸಗೊಬ್ಬರ ಪೂರೈಸದ ಹಿನ್ನೆಲೆಯಲ್ಲಿ, ಬಿತ್ತನೆ ಮಾಡಿದ್ದ ರೈತರು ಇದೀಗ ಕಂಗಾಲಾಗಿ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶಹಾಪುರ

ರಸಗೊಬ್ಬರಕ್ಕಾಗಿ ರೈತರ ಪರದಾಟ ಮುಂದುವರೆದಿದೆ. ಸಮರ್ಪಕ ರಸಗೊಬ್ಬರ ಪೂರೈಸದ ಹಿನ್ನೆಲೆಯಲ್ಲಿ, ಬಿತ್ತನೆ ಮಾಡಿದ್ದ ರೈತರು ಇದೀಗ ಕಂಗಾಲಾಗಿ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಡಿಎಪಿ ಹಾಗೂ ಯೂರಿಯಾ ರಸಗೊಬ್ಬರಕ್ಕಾಗಿ ನಸುಕಿನಿಂದಲೇ ಅಂಗಡಿಯೆದುರು ಠಿಕಾಣಿ ಹೂಡಿರುವ ರೈತರ ಸಾಲು ಕಿ.ಮೀ.ಗಟ್ಟಲೇ ಕಂಡುಬರುತ್ತಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ. ಪೊಲೀಸ್‌ ಕಾವಲಿನಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ.

ಖಾಸಗಿ ಅಂಗಡಿಗಳಲ್ಲಿ ರಸಗೊಬ್ಬರ ಲಭ್ಯವಿದ್ದರೂ, ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಮಾಲೀಕರು ಸಂಚು ನಡೆಸಿದ್ದಾರೆಂದು ಆರೋಪಿಸುವ ರೈತರು, ಇಂತಹ ಅಂಗಡಿಗಳ ವಿರುದ್ಧ ಕ್ರಮಕ್ಕೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಸಮಸ್ಯೆ ಬಗ್ಗೆ ಹರಿಸುವ ಬದಲು, ಅಧಿಕಾರಿಗಳು ಅಂಗಡಿ ಮಾಲೀಕರಿಗೆ ಸಾಥ್ ನೀಡುತ್ತಿದ್ದಾರೆ ಎಂದು ರೈತರು ಗಂಭೀರವಾಗಿ ಆರೋಪಿಸಿದರು.

ಗೊಬ್ಬರ ದಾಸ್ತಾನು ಇದ್ದರೂ ಸಹ, ಇಲ್ಲಿನ ವ್ಯವಸಾಯ ಸೇವಾ ಸಹಕಾರ ಸಂಘ ಹಾಗೂ ಖಾಸಗಿ ರಸಗೊಬ್ಬರ ಅಂಗಡಿಗಳಲ್ಲಿನ ಸ್ಟಾಕ್ ಬೋರ್ಡ್ ನಲ್ಲಿ ನೋ ಸ್ಟಾಕ್ ಎಂದು ತೋರಿಸಲಾಗುತ್ತಿದೆ. ಜಮೀನಲ್ಲಿ ಕೆಲಸ ಮತ್ತು ಇತರೆ ಕೆಲಸಗಳನ್ನು ಬಿಟ್ಟು ಗೊಬ್ಬರಕ್ಕಾಗಿ ದಿನ ಕಾಯುವ ಪರಿಸ್ಥಿತಿ ಎದುರಾಗಿದೆ. ನಿದ್ದೆ ಮಾಡದೇ ನಸುಕಿನ ಜಾವದಿಂದಲೇ ಕ್ಯೂ ನಿಂತರೂ ಗೊಬ್ಬರ ಸಿಗದಂತಾಗಿದೆ ಎಂದು ರೈತ ದಂಡಪ್ಪಗೌಡ ನೋವು ತೋಡಿಕೊಂಡರು.

ರಸಗೊಬ್ಬರದಂಗಡಿಗಳೆದುರು ನೂರಾರು ಸಂಖ್ಯೆಯಲ್ಲಿ ರೈತರು ಗೊಬ್ಬರ ಖರೀದಿಸಲು ಬಂದಿದ್ದರು. ಯಾವುದೇ ಗಲಾಟೆ ಗದ್ದಲ ಆಗದಂತೆ ಮುಂಜಾಗ್ರತೆ ಕ್ರಮವಾಗಿ, ಪೊಲೀಸ್ ಭದ್ರತೆಯೊಂದಿಗೆ ಗೊಬ್ಬರ ವಿತರಿಸಲಾಗುತ್ತಿರುವುದು ಕಂಡುಬಂತು.

ಡಿಎಪಿಗೆ ಬೇಡಿಕೆ : ಯೂರಿಯಾ ಜೊತೆಗೆ ಡಿಎಪಿ ಗೊಬ್ಬರಕ್ಕೂ ಬೇಡಿಕೆ ಹೆಚ್ಚಾಗಿದೆ. ಆದರೆ, ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಆಗದೇ ಇರುವುದರಿಂದ ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದು ರೈತರ ಆರೋಪ.

50 ಕೆಜಿ ಡಿಎಪಿ ಗೊಬ್ಬರಕ್ಕೆ ₹1350 ರಿಂದ 1600 ರು.ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕಾಂಪ್ಲೆಕ್ಸ್‌ ಗೊಬ್ಬರಕ್ಕೆ ₹1300ದಿಂದ ₹1750 ದರ ಇದೆ. ಯೂರಿಯಾಕ್ಕೆ ಸರ್ಕಾರದ ಸಬ್ಸಿಡಿ ಹೆಚ್ಚಿದ್ದು, 45 ಕೆಜಿ ಯೂರಿಯಾ ಗೊಬ್ಬರದ ಒಂದು ಚೀಲಕ್ಕೆ ₹280 ರಿಂದ ₹300ವರೆಗೆ ದರ ಇದೆ. 500 ರಿಂದ 600 ರು. ಗೆ ಮಾರಾಟ ಮಾಡಲಾಗುತ್ತಿದೆ. ಕಳೆದ ಐದಾರು ದಿನದಿಂದ ರಾತ್ರಿ ಹನ್ನೆರಡು ಗಂಟೆ ಒಂದು ಗಂಟೆಗೆ ಬಂದು ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ಬಂದಿದೆ. ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಒಬ್ಬರಿಗೆ ಒಂದು ಚೀಲ ಯೂರಿಯಾ ಒಂದು ಚೀಲ ಡಿಎಪಿ ಕೊಡುತ್ತಾರೆ. ಇವರು ಕೊಡುವ ಗೊಬ್ಬರ ಒಂದು ಮೂಲೆಗೆ ಸಾಕಾಗುವುದಿಲ್ಲ. ಇದರ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಅವರಿಂದ ಯಾವುದೇ ಉತ್ತರ ಬರುತ್ತಿಲ್ಲ. ಬದಲಿಗೆ ಪರ್ಯಾಯ ಗೊಬ್ಬರ ಬಳಕೆ ಮಾಡಿ ಎಂದು ಹೇಳಿ ಕಳಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಗೊಬ್ಬರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಬೇಕು. ಎನ್ನುತ್ತಾರೆ ರೈತ ಭೀಮಣ್ಣ.

ಆದರೆ, ನಗರದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನೂರು ಟನ್ ಯೂರಿಯಾ, ನೂರು ಟನ್ ಡಿಎಪಿ ಬಂದಿದೆ. ಈಗಾಗಲೇ 1200 ರೈತರಿಗೆ ಗೊಬ್ಬರ ಹಂಚಲಾಗಿದೆ. ಪ್ರತಿಯೊಬ್ಬ ರೈತರಿಗೆ ಒಂದು ಚೀಲ ಯೂರಿಯಾ, ಒಂದು ಚೀಲ ಡಿಎಪಿ ಕೊಡುತ್ತಿದ್ದೇವೆ ಅಂತಾರೆ ಸಂಘದ ಅಧಿಕಾರಿಯೊಬ್ಬರು.

--------------

ನಮಗೆ ಮರಳು ರೂಪದ ಯೂರಿಯಾ ಮತ್ತು ಡಿಎಪಿ ಗೊಬ್ಬರ ಕೊಡಿ ಎಂದರೆ ಅದರ ಬದಲಿಗೆ ನ್ಯಾನೋ ದ್ರವ ರೂಪದ ಗೊಬ್ಬರ ನೀಡುತ್ತಿದ್ದಾರೆ. ನಮಗೆ ದ್ರವರೂಪದ ನ್ಯಾನೋ ಬೇಡ ಮರಳು ರೂಪದ ಗೊಬ್ಬರ ಕೊಡಬೇಕು.

ಶರಣಪ್ಪ ಅನ್ವಾರ. ಗೊಬ್ಬರ ಖರಿದಿಸಲು ಬಂದಿರುವ ರೈತ.