ಯೂರಿಯಾ ಗೊಬ್ಬರ ಪಡೆಯಲು ಮುಗಿಬಿದ್ದ ರೈತರು

| Published : Aug 02 2025, 12:00 AM IST

ಸಾರಾಂಶ

ಅಣ್ಣಿಗೇರಿ ಮತ್ತು ನವಲಗುಂದ ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಅಭಾವ ಇಲ್ಲವೇ ಇಲ್ಲ, ರೈತರು ಆತಂಕ ಪಡಬೇಡಿ

ನವಲಗುಂದ: ಯೂರಿಯಾ ಗೊಬ್ಬರ ಪಡೆಯಲು ಪಟ್ಟಣದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಂಘದ ಎದುರು ಶುಕ್ರವಾರ ಬೆಳಿಗ್ಗೆಯಿಂದಲೇ ರೈತರು ಮುಗಿಬಿದ್ದಿದ್ದರು.

ಬೆಳಗಿನ ಜಾವವೇ ಆಗಮಿಸಿದ್ದ ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ನಂತರ ಸರತಿ ಸಾಲಿನಲ್ಲಿ ಚೀಟಿ ವಿತರಿಸಿ ಸರತಿಯಂತೆ ಗೊಬ್ಬರ ವಿತರಿಸಲಾಯಿತು.

ಅಣ್ಣಿಗೇರಿ ಮತ್ತು ನವಲಗುಂದ ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಅಭಾವ ಇಲ್ಲವೇ ಇಲ್ಲ, ರೈತರು ಆತಂಕ ಪಡಬೇಡಿ, ಎಲ್ಲರಿಗೂ ಸಮರ್ಪಕ ವಿತರಣೆ ನಡೆಯುತ್ತಿದೆ. ಎರಡು ತಾಲೂಕುಗಳಿಗೆ ರೈತರಿಗೆ ಎಷ್ಟು ಬೇಕೋ ಅಷ್ಟು ಗೊಬ್ಬರ ನೀಡಲಾಗುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ್ ತಿಳಿಸುತ್ತಾರೆ. ಆದರೂ ರೈತರು ಯೂರಿಯಾ ಗೊಬ್ಬರ ಖರೀದಿಗೆ ಮುಗಿ ಬೀಳುತ್ತಿರುವುದು ಸಾಮಾನ್ಯವಾಗಿದೆ.

ಗೊಬ್ಬರ ಪೂರೈಕೆದಾರರು ರೈತರಿಗೆ ರಸೀದಿ ನೀಡುವುದು, ನಿಗದಿತ ದರಗಳಲ್ಲಿ ಮಾರಾಟ ಮಾಡುವುದು ಕಡ್ಡಾಯವಾಗಿದೆ. ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ರಸಗೊಬ್ಬರ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರವೀಂದ್ರಗೌಡ ತಿಳಿಸಿದ್ದಾರೆ.